ಕರ್ನಾಲ್‌ನಲ್ಲಿ ಕಿಸಾನ್ ಮಹಾಪಂಚಾಯತ್: ಮಿನಿ-ಸೆಕ್ರೆಟರಿಯೇಟ್‌ಗೆ ಘೇರಾವ್; 5 ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಸ್ಥಗಿತಗೊಳಿಸಿದ ಸರ್ಕಾರ!

ಹರಿಯಾಣದ ಕರ್ನಾಲ್‌ನಲ್ಲಿ ಮಂಗಳವಾರ ರೈತರು ಮಹಾಪಂಚಾಯತ್ ನಡೆಸಲಿದ್ದಾರೆ. ಅಲ್ಲದೆ, ಇಲ್ಲಿನ ಮಿನಿ-ಸೆಕ್ರೆಟರಿಯೇಟ್‌ಗೆ ಘೇರಾವ್‌ ಹಾಕಲು ರೈತರು ನಿರ್ಧರಿಸಿದ್ದಾರೆ. ವಿವಿಧ ಭಾಗಗಳಿಂದ ರೈತರು ಕರ್ನಾಲ್‌ಗೆ ಆಗಮಿಸುತ್ತಿದ್ದಾರೆ. ಹೀಗಾಗಿ, ಕರ್ನಾಲ್‌ನಲ್ಲಿ ಪೊಲೀಸ್ ಹಾಗೂ ಕೇಂದ್ರ ಪಡೆಗಳನ್ನು ಭಾರೀ ಪ್ರಮಾಣದಲ್ಲಿ ನಿಯೋಜಿಸಲಾಗಿದೆ.

ಕರ್ನಾಲ್‌ನ ಹೊಸ ಅನಾಜ್ ಮಂಡಿಯಲ್ಲಿ ಮಹಾಪಂಚಾಯತ್ ನಡೆಯಲಿದೆ. ಎಲ್ಲರೂ ಶಾಂತಿಯುತವಾಗಿ ಮಂಡಿ ತಲುಪಲು ನಾನು ಮನವಿ ಮಾಡುತ್ತೇನೆ. ಪೊಲೀಸರು ನಮಗೆ ಮಂಡಿಗೆ ತಲುಪಲು ಅವಕಾಶ ನೀಡುತ್ತಾರೆ. ಮುಂದಿನ ಕ್ರಮವನ್ನು ಮಹಾಪಂಚಾಯತ್ ನಲ್ಲಿ ನಿರ್ಧರಿಸಲಾಗುವುದು” ಎಂದು ಹರ್ಯಾಣದ ಬಿಕೆಯು ಮುಖ್ಯಸ್ಥ ಗುರ್ನಾಮ್ ಸಿಂಗ್ ಚದುನಿ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ವರದಿಗಳ ಪ್ರಕಾರ, ರೈತರು ಹೊಸ ಅನಾಜ್ ಮಂಡಿಗೆ ತಲುಪಲು ಆರಂಭಿಸಿದ್ದಾರೆ ಮತ್ತು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಕೂಡ ಕರ್ನಾಲ್ ತಲುಪುತ್ತಿದ್ದಾರೆ. ಕರ್ನಾಲ್‌ನ ಮಿನಿ-ಸೆಕ್ರೆಟರಿಯೇಟ್ ನಲ್ಲಿ ಭಾರೀ ಬ್ಯಾರಿಕೇಡ್ ಮತ್ತು ಭದ್ರತಾ ಪಡೆಗಳ ನಿಯೋಜನೆಯನ್ನು ಮಾಡಲಾಗಿದೆ.

ರೈತ ಮಹಾಪಂಚಾಯತ್‌ಗೂ ಮೊದಲೇ, ಸೋಮವಾರ ಮಧ್ಯಾಹ್ನ 12:30 ರಿಂದ ಮಂಗಳವಾರ ಮಧ್ಯರಾತ್ರಿಯವರೆಗೆ ಇಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದ್ದ ಹರಿಯಾಣ ಸರ್ಕಾರ, ಈ ಸೇವೆಯನ್ನು ನಾಲ್ಕು ಪಕ್ಕದ ಜಿಲ್ಲೆಗಳಾದ ಕುರುಕ್ಷೇತ್ರ, ಕೈತಾಲ್, ಜಿಂದ್ ಮತ್ತು ಪಾಣಿಪತ್ ಜಿಲ್ಲೆಗಳಲ್ಲಿ ಬೆಳಿಗ್ಗೆ 12 ರಿಂದ 11 ರವರೆಗೆ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಕರ್ನಾಲ್ ಜಿಲ್ಲೆಯಲ್ಲಿ ಸ್ಥಳೀಯ ಅಧಿಕಾರಿಗಳು ಸಿಆರ್‌ಪಿಸಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಚಂಡೀಗಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹರಿಯಾಣ ಗೃಹ ಸಚಿವ ಅನಿಲ್ ವಿಜ್, ಪ್ರತಿಭಟನೆ ಶಾಂತಿಯುತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಸಾಮಾನ್ಯ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ರೈತರಿಗೆ ಮನವಿ ಮಾಡಿದ್ದಾರೆ.

ಹರಿಯಾಣ ಪೊಲೀಸರು ಆಗಸ್ಟ್ 28 ರಂದು ಬಿಜೆಪಿ ಸಭೆಯನ್ನು ವಿರೋಧಿಸಿ ಕರ್ನಾಲ್ ಕಡೆಗೆ ಹೋಗುತ್ತಿದ್ದ ರೈತರ ಮೇಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾಠಿ ಚಾರ್ಜ್ ಮಾಡಿದ್ದರು. 10 ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.

ಪ್ರತಿಭಟನಾ ನಿರತ ರೈತರ “ತಲೆ ಒಡೆಯಲು” ಪೊಲೀಸರಿಗೆ ಆದೇಶಿಸಿದ್ದ ಎಸ್‌ಕೆಎಂ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಯೋಗಿ ಸರ್ಕಾರಕ್ಕೆ ಸೆಡ್ಡು: ಮುಜಾಫರ್‌ನಗರದಲ್ಲಿ ಬೃಹತ್‌ ರೈತ ಮಹಾಪಂಚಾಯತ್‌!

ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮಂಗಳವಾರ ಕರ್ನಾಲ್ ಮಿನಿ-ಸೆಕ್ರೆಟರಿಯೇಟ್‌ಗೆ ಮುತ್ತಿಗೆ ಹಾಕುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮತ್ತು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹಲವು ರೈತ ಸಂಘಟನೆಗಳು ಬೆದರಿಕೆ ಹಾಕಿವೆ.

ಸದ್ಯ, ಐಎಎಸ್‌ ಅಧಿಕಾರಿ ಸಿನ್ಹಾ ಅವರನ್ನು ಈಗ ನಾಗರಿಕ ಸಂಪನ್ಮೂಲ ಮಾಹಿತಿ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.

ಲಾಠಿಚಾರ್ಜ್‌ನಲ್ಲಿ ಗಾಯಗೊಂಡ ನಂತರ ಸಾವನ್ನಪ್ಪಿದ ರೈತರ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಆದರೆ, ಇಲ್ಲಿನ ಆಡಳಿತವು ಪೊಲೀಸರ ಲಾಠಿಚಾರ್ಜ್‌ನಿಂದ ರೈತ ಗಾಯಗೊಂಡಿಲ್ಲ. ಅವರು ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ಹೇಳಿದೆ.

ಇದನ್ನೂ ಓದಿ: ವಲಸಿಗರಿಗೆ ಅನಗತ್ಯ ಪ್ರಾಮುಖ್ಯತೆ: ಬಿಜೆಪಿ ಹೈಕಮಾಂಡ್ ವಿರುದ್ದ ಬಂಗಾಳ ಕೇಸರಿ ಶಾಸಕರ ಆಕ್ರೋಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights