ಮೋದಿಗೆ ವಿದೇಶ ಸುತ್ತಲು ಸಮಯವಿದೆ; ರೈತರ ಭೇಟಿ ಮಾಡಲು ಸಮಯವಿಲ್ಲ: ಪ್ರಿಯಾಂಕಾ ಗಾಂಧಿ

ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ಆರಂಭವಾಗಿ ಮೂರು ತಿಂಗಳುಗಳು ಕಳೆದಿವೆ. ಆದರೆ, ಇದೂವರೆಗೂ ಪ್ರಧಾನಿ ಮೋದಿ ರೈತರನ್ನು ಭೇಟಿ ಮಾಡಿಲ್ಲ. ಸಭೆಯನ್ನೂ ನಡೆಸಿಲ್ಲ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಮುಖಂಡೆ ಪ್ರಿಯಾಂಕಾ ಗಾಂಧಿ, ಮೋದಿಗೆ ವಿದೇಶ ಸುತ್ತಲು ಸಮಯವಿದೆ. ರೈತರನ್ನು ಭೇಟಿ ಮಾಡಲು ಸಮಯವಿಲ್ಲ ಎಂದು ಕಿಡಿಕಾರಿದ್ದಾರೆ.

ಮುಜಫರ್ ‌‌ನಗರದ ಕಿಸಾನ್ ಮಹಾಪಂಚಾಯತ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರ ಹೋರಾಟ ಆರಂಭವಾದ ನಂತರ 215ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ರೈತರ ಪ್ರತಿಭಟನಾ ಸ್ಥಳದಲ್ಲಿ ವಿದ್ಯುತ್‌ ಕಡಿತಗೊಳಿಸಿ, ನೀರಿನ ಸಂಪರ್ಕವನ್ನೂ ನಿಲ್ಲಿಸಿ ರೈತರ ಮೇಲೆ ಸರ್ಕಾರ ದೌರ್ಜನ್ಯ ಎಸಗಿದೆ. ಶಾಂತಿಯಿಂದ ನಡೆಯುತ್ತಿರುವ ಪ್ರತಿಭಟನಾ ಸ್ಥಳವನ್ನು ದೇಶದ ಗಡಿಯ ರೀತಿಯಲ್ಲಿ ಸರ್ಕಾರ ಮಾರ್ಪಡಿಸಿದೆ. ವಿದೇಶ ಸುತ್ತುವ ಮೋದಿಯವರಿಗೆ, ರೈತರ ಕಣ್ಣೀರು ವರೆಸಲು ಸಮಯವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಮ್ಮ ಗಡಿಗಳನ್ನು ರಕ್ಷಿಸಲು ತಮ್ಮ ಪುತ್ರರನ್ನು ಕಳುಹಿಸುವ ರೈತರನ್ನು ಭಯೋತ್ಪಾದಕರು ಎಂದು ಕರೆಯುತ್ತಾರೆ. ಪ್ರಧಾನ ಮಂತ್ರಿ ರೈತರನ್ನು ‘ಆಂದೋಲನ್ ಜೀವಿ’ ಎಂದು ಅಪಹಾಸ್ಯ ಮಾಡುತ್ತಾರೆ. ರೈತ ಮುಖಂಡ ರಾಕೇಶ್ ಟಿಕಾಯತ್‌ ಅತ್ತಾಗ ನಮ್ಮ ಪ್ರಧಾನಿ ತಮಾಷೆಯೆಂದು ಭಾವಿಸುತ್ತಾರೆ” ಎಂದು ಪ್ರಿಯಾಂಕ ಹೇಳಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ನಾಲ್ಕನೇ ತಿಂಗಳಿಗೆ ಕಾಲಿಡುತ್ತಿದೆ. ಈ ನಡುವೆ ರೈತರು ತಮ್ಮ ಹೋರಾಟವನ್ನು ತಳ ಮಟ್ಟದಿಂದಲೇ ತೀವ್ರಗೊಳಿಸಲು ಬೇಕಾಗಿ ಉತ್ತರ ಭಾರತರ ಹಲವು ರಾಜ್ಯಗಳ ಜಿಲ್ಲೆಗಳಲ್ಲಿ ರೈತ ಮಹಾಪಂಚಾಯತ್‌ ಸಭೆಯನ್ನು ನಡೆಸುತ್ತಿದ್ದಾರೆ. ಕಾಂಗ್ರೆಸ್ ಕೂಡಾ ಇದಕ್ಕೆ ಕೈ ಜೋಡಿಸಿದ್ದು ಉತ್ತರ ಪ್ರದೇಶದ ಹತ್ತು ದಿನಗಳ ರೈತ ಮಹಾಪಂಚಾಯತ್‌ಗಳನ್ನು ಆಯೋಜಿಸಿದೆ.

ಇದನ್ನೂ ಓದಿ: ಬಂಗಾಳ ಚುನಾವಣೆ: ನಂದಿಗ್ರಾಮದಲ್ಲಿ ಮಾತ್ರ ಸ್ಪರ್ಧಿಸುವಂತೆ ಮಮತಾಗೆ BJP ಸವಾಲು! ಮಮತಾ ಹೇಳಿದ್ದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights