ಮೋಡ, ಚಳಿಯೊಂದಿಗೆ ಸಿಲಿಕಾನ್ ಸಿಟಿ ಮಂದಿಗೆ ಕಿರಿಕಿರಿಯಾದ ಮಳೆ!
ಮೋಡ ಕವಿದ ವಾತಾವರಣ, ಚಳಿಯೊಂದಿಗೆ ಮಳೆಯೂ ಬೀಳುತ್ತಿರುವುದು ಸಿಲಿಕಾನ್ ಸಿಟಿ ಮಂದಿಗೆ ಕಿರಿಕಿರಿಯನ್ನುಂಟು ಮಾಡಿದೆ. ವಾತಾವರಣದಲ್ಲಿ ಅಧಿಕ ಪ್ರಮಾಣದಲ್ಲಿ ಬದಲಾವಣೆಯಾಗುತ್ತಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.
ನಿನ್ನೆ ಮಧ್ಯಾಹ್ನದಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಇಂದು ಮುಂಜಾನೆಯಿಂದ ಬೆಂಗಳೂರು ಸೇರಿದಂತೆ ವಿವಿಧೆಡೆ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದ್ದು, ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ.
ನಿನ್ನೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು, ಉಡುಪಿ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮಳೆಯಾಗಿದೆ. ದಿಢೀರ್ ಮಳೆಯಿಂದಾಗಿ ಜನ ಹೈರಾಣಾಗಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿ ಗುಡುಗು ಸಿಡಿಲು ಸಹಿತ ನಾಲ್ಕು ದಿನ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ದಿಢೀರ್ ಮಳೆಗೆ ಪ್ರಮುಖ ಕಾರಣ ಪೂರ್ವ ಅಲೆಗಳು. ಹೌದು..! ಚಳಿಗಾಲದಲ್ಲಿ ಸಾಮಾನ್ಯವಾಗಿ ಜನವರಿ ಮತ್ತು ಫೆಬ್ರವರಿ ಅವಧಿಯಲ್ಲಿ ಪೂರ್ವ ದಿಕ್ಕಿನಿಂದ ಗಾಳಿ ಬೀಸುವುದಿಂದ ಆಗಾಗ ಮಳೆಯಾಗುತ್ತದೆ. ಅದರಂತೆ ಬಂಗಾಳ ಕೊಲ್ಲಿಯ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಪ್ರಬಲವಾಗಿರುವುದರಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ.
ಸಾಮಾನ್ಯವಾಗಿ ಜನವರಿಯಲ್ಲಿ ಮಳೆಯಾಗೋದು ತೀರ ಅಪರೂಪ. ಆದರೂ ವರ್ಷದ ಆರಂಭದಲ್ಲೇ ಮಳೆ ಆರಂಭವಾಗಿದೆ. ಹವಾಮಾನ ತಜ್ಞರು ಹೇಳೋ ಪ್ರಕಾರ 30 ವರ್ಷದಲ್ಲಿ 4 ಅಥವಾ 5 ಬಾರಿ ಜನವರಿ ಮಳೆಯಾಗುತ್ತೆ ಅಂದಾಜಿಸಿದ್ದಾರೆ. ಅಂದ್ರೆ 5 ವರ್ಷಕ್ಕೊಮ್ಮೆ ಜನವರಿಯಲ್ಲಿ ಮಳೆಯಾಗೋದು ಸಾಮಾನ್ಯ.ಇನ್ನು ಬೆಂಗಳೂರಿನಲ್ಲಿ ಇಂದು ಭಾರೀ ಮಳೆಯಾಗಲಿದೆ. ನಾಳೆ, ನಾಡಿದ್ದು, ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 10ರವರೆಗೆ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ.