ಮಂಡ್ಯ ವಕೀಲನ ಬರ್ಬರ ಕೊಲೆ : ಶವದ ಮೇಲೆ ಚಪ್ಪಡಿ ಹೇರಿ ನದಿಗೆ ಬಿಟ್ಟ ಕ್ರೂರಿಗಳು!

ವಕೀಲನೋರ್ವನನ್ನು ಬರ್ಬರವಾಗಿ ಕೊಲೆಗೇದು ಶವದ ಮೇಲೆ ಚಪ್ಪಡಿ ಹೇರಿ ದೇಹವನ್ನು ನದಿಯೊಳಗೆ ಬಿಟ್ಟ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ನವಿಲೆ ಗ್ರಾಮದಲ್ಲಿ ನಡೆದಿದೆ. ಶಿಂಷಾ ನದಿಯಲ್ಲಿ ವಕೀಲರ ಶವ ಕಂಡು ಗ್ರಾಮದ ಜನ ಬೆಚ್ಚಿ ಬಿದ್ದಿದ್ದಾರೆ.

ಜಮೀನಿನ ಕೆಲಸಕ್ಕೆಂದು ನಿನ್ನೆ ಬೆಳಿಗ್ಗೆ  ಜಮೀನಿನ ಬಳಿ ಹೋಗಿದ್ದ ವಕೀಲ ರವೀಂದ್ರ(45)ರ ಶವ ರಾತ್ರಿ ಶಿಂಷಾ ನದಿಯ ನೀರಿನಲ್ಲಿ ಪತ್ತೆಯಾಗಿದೆ. ಶಿಂಷಾ ನದಿಯ ಪಕ್ಕದಲ್ಲಿ  ಇದ್ದ ಜಮೀನಿನಲ್ಲಿ ದುಷ್ಕರ್ಮಿಗಳು ವಕೀಲನ ತಲೆಗೆ ಹೊಡೆದು ಹತ್ಯೆ ಮಾಡಿ ಬಳಿಕ ಶವವನ್ನು ಶಿಂಷಾ ನದಿಯಲ್ಲಿ ಮುಳುಗಿಸಿ ಶವದ ಮೇಲೆ ಭಾರೀ ಗಾತ್ರದ ಕಲ್ಲು ಚಪ್ಪಡಿ ಹೇರಿ ಎಸ್ಕೇಪ್ ಆಗಿದ್ದಾರೆ.

ಈ ವೇಳೆ ವಕೀಲ ರವೀಂದ್ರ  ತಿಂಡಿಗೆ ಊಟಕ್ಕೆ ಮನೆಗೆ ಬರದೆ ಇದ್ದಾಗ ಆತಂಕಗೊಂಡು ಕುಟುಂಬದವರು ಮೊಬೈಲ್ ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಗಿತ್ತು. ಇದ್ರಿಂದ ಆತಂಕಗೊಂಡ ಕುಟುಂಬದವರು ಜಮೀನಿನ ಬಳಿ ರವೀಂದ್ರಗಾಗಿ  ಹುಡುಕಾಟ  ನಡೆಸಿದ್ದರು. ಆದರೆ ಪತ್ತೆಯಾಗಿರಲಿಲ್ಲ. ಅಲ್ಲದೇ ವಕೀಲ ರವೀಂದ್ರನ ಬೈಕ್ ಮಾತ್ರ ಜಮೀನಿನ ಬಳಿ  ಬಿದ್ದಿತ್ತು. ಇದರಿಂದ ಅನುಮಾನ ಮತ್ತು ಆತಂಕದಿಂದ ಹುಡುಕಾಟ ನಡೆಸಿದರೂ ಉಪಯೋಗವಾಗಿರಲಿಲ್ಲ.

ಸ್ಥಳೀಯರೊಬ್ಬರು ನದಿಯಲ್ಲಿ ಯಾವುದೋ ಶವ ಇರುವ ಬಗ್ಗೆ ಮಾಹಿತಿ ನೀಡಿದ್ರಿಂದ ಸಂಜೆ6 ಗಂಟೆ ಸಮಯದಲ್ಲಿ ಸ್ಥಳಕ್ಕೆ ಹೋಗಿ ನೋಡಿದಾಗ ವಕೀಲನ ರವೀಂದ್ರ ಶವ ಬೆತ್ತಲೆಯಾಗಿದ್ದು, ಶವದ ಮೇಲೆ ಕಲ್ಲು ಚಪ್ಪಡಿ ಇಟ್ಟು ಶವ ಮುಳುಗಿಸಿರುವುದು ಕಂಡು ಬಂದಿದೆ.

ಈ ಬಗ್ಗೆ ಮಾಹಿತಿ ಪಡೆದ ಕೆಸ್ತೂರು ಪೊಲೀಸರು  ಸೇರಿದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ತಡರಾತ್ರಿಯೇ ನದಿಯಿಂದ ಹೊರ ತೆಗೆದಿದ್ದಾರೆ‌. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿದ್ದಾರೆ.  ಮೃತ ವಕೀಲನ‌ ಕೊಲೆಯ ಹಿಂದೆ ಮರಳು ಮಾಫಿಯಾದವರ ಕೈವಾಡವಿರೋ ಬಗ್ಗೆ ಸಂಬಂಧಿಕರು ಆರೋಪಿಸಿದ್ದಾರೆ.

ತಮ್ಮ ಜಮೀನಿನ‌ ಬಳಿಯ ಶಿಂಷಾ ನದಿಯಲ್ಲಿ ಕೆಲವರು ಅಕ್ರಮವಾಗಿ ಮರಳುಗಾರಿಕೆ ನಡೆಸ್ತಿದ್ದು ಇದರ ಬಗ್ಗೆ ಮೃತ ರವೀಂದ್ರ ಆಕ್ಷೇಪ ವ್ಯಕ್ತಪಡಿಸಿ ಮರಳು ದಂಧೆಯವರ ವಿರೋಧ ಕೂಡ ಕಟ್ಟಿಕೊಂಡಿದ್ರು ಎಂದು ಹೇಳಲಾಗ್ತಿದೆ. ಅಲ್ಲದೇ ಈ ಹಿಂದೆ ಗ್ರಾಮದಲ್ಲಿ ಮಹಿಳೆಯೋರ್ವರ ಕೊಲೆಯ ವಿಚಾರವಾಗಿ ಪೊಲೀಸರಿಗೆ ದೂರು ನೀಡಿ ಊರಿನವರ ವಿರೋಧ ಕೂಡ ಕಟ್ಟಿಕೊಂಡಿದ್ದು ಈ ಬಗ್ಗೆ ಕೂಡ ಇವರ ವಿರುದ್ದ ಪ್ರಕರಣ ದಾಖಲಾಗಿತ್ತು.ಇತ್ತೀಚೆಗೆ ಈ ಪ್ರಕರಣದಲ್ಲಿ ರವೀಂದ್ರ ಖುಲಾಸೆಯಾಗಿದ್ದರು. ಅಲ್ಲದೇ ವಕೀಲರಾಗಿ ಸಾಕಷ್ಟು ದಲಿತಪರ ಹೋರಾಟಗಳಲ್ಲಿ ಭಾಗಿಯಾಗಿದ್ದು  ಈ ಹಿನ್ನೆಲೆಯಲ್ಲಿ ವಕೀಲ ರವೀಂದ್ರ ಕೊಲೆಯಾಗಿದೆ ಎಂದು ಶಂಕಿಸಲಾಗಿದೆ.

ವಕೀಲನ ಕೊಲೆಯಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್  ಭದ್ರತೆ ಹಾಕಿ ಒಂದು ಪೊಲೀಸ್ ತುಕಡಿಯನ್ನು ಬಂದೋಬಸ್ತ್ ಮಾಡಲಾಗಿದೆ.

ಒಟ್ಟಾರೆ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಸ್ತೂರು ಪೊಲೀಸರು ತನಿಖೆ ನಡೆಸ್ತಿದ್ದಾರೆ. ವಕೀಲನ ಕೊಲೆಯ ಹಿಂದೆ  ಹಲವು ಕಾರಣಗಳಿರೋ ಬಗ್ಗೆ ಮಾಹಿತಿ ಪಡೆದಿರೋ ಪೊಲೀಸರು ಇದೀಗ ತನಿಖೆ‌ ಆರಂಭಿಸಿದ್ದಾರೆ. ಶೀಘ್ರವಾಗಿ ಪ್ರಕರಣ ಭೇದಿಸಿ ವಕೀಲನ ಕೊಲೆಯ ರಹಸ್ಯ ಭೇದಿಸಿ ಕೊಲೆಗೈದ ದುಷ್ಕರ್ಮಿಗಳನ್ನು ಬಂಧಿಸುವ  ಕೆಲಸಕ್ಕೆ ಮುಂದಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights