ವಿಂಬಲ್ಡನ್ 2019 ಟೆನ್ನಿಸ್ ಟೂರ್ನಿ : ಫೆಡರರ್ ಮಣಿಸಿದ ಜೊಕೊವಿಕ್ ಗೆ ಚಾಂಪಿಯನ್ ಪಟ್ಟ

ಒಂದೆಡೆ ಕ್ರಿಕೆಟ್‌ ರೋಚಕ ಹಣಾಹಣಿ. ಮಗದೊಂದು ಕಡೆ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ರೋಜರ್ ಫೆಡರರ್ ಹಾಗೂ ನೋವಾಕ್ ಜೊಕೊವಿಕ್ ನಡುವೆ ಜಿದ್ದಾಜಿದ್ದಿನ ಫೈನಲ್ ಮುಖಾಮುಖಿ. ಕೊನೆಗೂ ಸರಿ ಸುಮಾರು ಐದು ತಾಸುಗಳಷ್ಟು ಸಾಗಿದ ಥ್ರಿಲ್ಲಿಂಗ್ ಫೈನಲ್‌ನಲ್ಲಿ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಮಣಿಸಿದ ಸೆರ್ಬಿಯಾದ ನೊವಾಕ್ ಜೊಕೊವಿಕ್, ವಿಂಬಲ್ಡನ್ ಮುಕುಟವನ್ನು ಧರಿಸಿದ್ದಾರೆ. ಪ್ರತಿಷ್ಠಿತ ವಿಂಬಲ್ಡನ್ 2019 ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಪುರುಷ ಸಿಂಗಲ್ಸ್ ವಿಭಾಗದಲ್ಲಿ 7-6 (7-5), 1-6, 7-6 (7-4), 4-6, 13-12 (7/3) ರ ಅಂತರದ ಅತ್ಯಂತ ಕಠಿಣ ಪಂದ್ಯದಲ್ಲಿ ಮಾಜಿ ವಿಶ್ವ ನಂಬರ್ ಆಟಗಾರ ವಿರುದ್ಧ ಜೊಕೊವಿಕ್ ಸವಾರಿ ಮಾಡಿದರು. ಇದರೊಂದಿಗೆ 37ರ ಹರೆಯದ ಫೆಡರರ್ ದಾಖಲೆಯ ಒಂಬತ್ತನೇ ವಿಂಬಲ್ಡನ್ ಹಾಗೂ ಒಟ್ಟಾರೆಯಾಗಿ 21ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಕನಸು ಭಗ್ನವಾಗಿದೆ. ಇನ್ನೊಂದೆಡೆ 16ನೇ ಗ್ರ್ಯಾನ್‌ಸ್ಲಾಮ್ ಸಾಧನೆ ಮಾಡಿರುವ ಜೊಕೊವಿಕ್ ಸತತ ಎರಡನೇ ಸೇರಿದಂತೆ ಐದು ಬಾರಿ ವಿಂಬಲ್ಡನ್ ಗೆದ್ದ ದಾಖಲೆ ಬರೆದಿದ್ದಾರೆ.

ಆಲ್ ಇಂಗ್ಲೆಂಡ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಭಾನುವಾರ ನಡೆದ ಜಿದ್ದಾಜಿದ್ದಿನ ಫೈನಲ್ ಮುಖಾಮುಖಿಯಲ್ಲಿ ಪ್ರತಿಯೊಂದು ಅಂಕ ಗಳಿಸಲೂ ಸಾಕಷ್ಟು ಬೆವರಿಳಿಸಿದರು. ಎಲ್ಲರ ನಿರೀಕ್ಷೆಯಂತೆಯೇ 21 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ರೋಜರ್ ಫೆಡರರ್ ಹಾಗೂ 15 ಬಾರಿಗ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ನೊವಾಕ್ ಜೊಕೊವಿಕ್ ನಡುವಣ ಪಂದ್ಯವು ಅತ್ಯಂತ ರೋಚಕತೆಯಿಂದ ಕೂಡಿತ್ತು. ಅಲ್ಲದೆ ಕ್ಷಣ ಕ್ಷಣದಲ್ಲೂ ಬಹಳಷ್ಟು ಕುತೂಹಲತೆ ಮನೆ ಮಾಡಿತ್ತು.

ಮೊದಲ ಸೆಟ್ ಟ್ರೈ ಬ್ರೇಕರ್ ವರೆಗೂ ಸಾಗಿದಾಗಲೇ ಅಭಿಮಾನಿಗಳಲ್ಲಿ ರೋಮಾಂಚನವನ್ನುಂಟು ಮಾಡಿತ್ತು. ಅಲ್ಲದೆ ಮೊದಲ ಸೆಟ್ ಜೊಕೊವಿಕ್ ವಶಪಡಿಸಿಕೊಂಡು ಮುನ್ನಡೆ ಕಾಯ್ದುಕೊಂಡರು. ಆದರೆ ದ್ವಿತೀಯ ಸೆಟ್‌ನಲ್ಲಿ ತಿರುಗೇಟು ನೀಡಿದ ಫೆಡರರ್ ಎದುರಾಳಿಗೆ ಯಾವುದೇ ಅವಕಾಶವನ್ನು ನೀಡಲಿಲ್ಲ. ಮೂರನೇ ಸೆಟ್ ಮಗೆದೂಮ್ಮೆ ಟ್ರೈ-ಬ್ರೇಕರ್ ವರೆಗೂ ಸಾಗಿತ್ತು. ಇಲ್ಲೂ ಫೆಡರರ್ ಸ್ವಲ್ಪದರಲ್ಲೇ ಎಡವಿ ಬಿದ್ದರು. ಆದರೂ ಹೋರಾಟ ಮನೋಭಾವ ಕೈಬಿಡದ ಫೆಡರರ್ ನಿರ್ಣಾಯಕ ನಾಲ್ಕನೇ ಸೆಟ್ ವಶಪಡಿಸಿಕೊಂಡು ಪಂದ್ಯವನ್ನು ಅಂತಿಮ ಸೆಟ್‌ಗೆ ಕೊಂಡೊಯ್ದರು.

ಇಲ್ಲಿಂದ ಬಳಿಕ ನೈಜ ಥ್ರಿಲ್ಲರ್ ಪಂದ್ಯವು ಆರಂಭಗೊಂಡಿತು. ಒಂದು ಹಂತದಲ್ಲಿ ಎರಡೆರಡು ಬಾರಿ ಚಾಂಪಿಯನ್ ಅಂಕದ ಸನಿಹ ತಲುಪಿದರೂ ಫೆಡರರ್‌ಗೆ ಅದರ ಸದುಪಯೋಗಪಡಿಸಲಾಗಲಿಲ್ಲ. ಇದರಿಂದಾಗಿ ಪಂದ್ಯ ಮಗದೊಮ್ಮೆ ಟ್ರೈ ಬ್ರೇಕರ್‌ನತ್ತ ಮುನ್ನಡೆಯಿತು. ಆಗಲೇ ಎರಡು ಟ್ರೈ-ಬ್ರೇಕರ್‌ಗಳನ್ನು ತಮ್ಮದಾಗಿಸಿರುವ ಜೊಕೊವಿಕ್ ಕೊನೆಯ ಬಾರಿಯೂ ಫೆಡರರ್ ಮೇಲೆ ಮೇಲುಗೈ ಸಾಧಿಸುವ ಮೂಲಕ ವಿಂಬಲ್ಡನ್ ಕಿರೀಟಕ್ಕೆ ಮುತ್ತಿಕ್ಕಿದರು. ಇವರಿಬ್ಬರ ನಡುವಣ ಐತಿಹಾಸಿಕ ಕದನವು ನಾಲ್ಕು ತಾಸು ಹಾಗೂ 57 ನಿಮಿಷಗಳ ವರೆಗೂ ಸಾಗಿತ್ತು.ಹಾಗೆಯೇ 71 ವರ್ಷಗಳಲ್ಲೇ ಎದುರಾಳಿಗೆ ಮ್ಯಾಚ್ ಪಾಯಿಂಟ್ ನೀಡಿದರೂ ಅಲ್ಲಿಂದ ಪುಟಿದೆದ್ದು ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಹಿರಿಮೆಗೆ ಜೊಕೊವಿಕ್ ಪಾತ್ರವಾಗಿದ್ದಾರೆ.

ನೊವಾಕ್ ಜೊಕೊವಿಕ್ ಗ್ರ್ಯಾನ್‌ ಸ್ಪ್ಯಾಮ್‌ ಸಾಧನೆ
ಆಸ್ಪ್ರೇಲಿಯನ್‌ ಓಪನ್‌: 2008, 2011, 2012, 2013, 2015, 2016, 2019
ಫ್ರೆಂಚ್‌ ಓಪನ್‌: 2016
ವಿಂಬಲ್ಡನ್‌ : 2011, 2014, 2015, 2018, 2019
ಯು.ಎಸ್‌ ಓಪನ್‌ : 2011, 2015, 2018

ಫೆಡರರ್ ಗ್ರ್ಯಾನ್‌ಸ್ಲಾಮ್ ಸಾಧನೆಗಳು:
ಆಸ್ಟ್ರೇಲಿಯನ್ ಓಪನ್: (2004, 2006, 2007, 2010, 2017, 2018)
ಫ್ರೆಂಚ್ ಓಪನ್: (2009)
ವಿಂಬಲ್ಡನ್ (2003, 2004, 2005, 2006, 2007, 2009, 2012, 2017)
ಅಮೆರಿಕನ್ ಓಪನ್ (2004, 2005, 2006, 2007, 2008)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.