Twitter ಜಾತಿವಾದ ಮಾಡುತ್ತಿದೆ, ತಳಸಮುದಾಯಗಳನ್ನು ಕಡೆಗಣಿಸುತ್ತಿದೆ – ಪ್ರೊ ಮಂಡಲ್‌..

ಟ್ವಿಟ್ಟರ್‌ ಜಾತಿವಾದ ಮಾಡುತ್ತಿದ್ದು, ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದೆ ಎಂದು ಹಿರಿಯ ಪತ್ರಕರ್ತರಾದ ಪ್ರೊ.ದಿಲೀಪ್‌ ಮಂಡಲ್‌ ಆರೋಪಿಸಿದ್ದಾರೆ.

ಟ್ವಿಟ್ಟರ್‌ ಒರಿಜಿನಲ್‌ ಆದ, ಹೆಚ್ಚು ಬಳಕೆಯ ಖಾತೆಗಳನ್ನು ವೆರಿಫೈಡ್‌ ಮಾಡುತ್ತದೆ. ಅದಕ್ಕಾಗಿ ಖಾತೆಯ ಹೆಸರಿನ ಮುಂದೆ ’ಬ್ಲೂ ಟಿಕ್’ ಚಿಹ್ನೆ ಹಾಕುತ್ತದೆ. ಇದು ಪ್ರಮುಖ ವ್ಯಕ್ತಿಗಳನ್ನು ಗುರುತಿಸಲು, ಅವರ ಖಾತೆಯನ್ನು ದೃಢೀಕರಿಸಲು ಅನುವಾಗುತ್ತದೆ. ಉದಾಹರಣೆಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಅಥವಾ ಬಾಲಿವುಡ್‌ ತಾರೆ ಅಮೀರ್‌ ಖಾನ್‌ರವರ ಹೆಸರಿನಲ್ಲಿ ಹಲವಾರು ಖಾತೆಗಳಿದ್ದಾಗ ಜನರಿಗೆ ಗೊಂದಲವಾಗಬಾರದೆಂದು ಒರಿಜಿನಲ್‌ ಖಾತೆಗೆ ಟ್ವಿಟ್ಟರ್‌ ವೆರಿಫೈಡ್‌ ಎಂದು ’ಬ್ಲೂ ಟಿಕ್’ ಚಿಹ್ನೆ ನೀಡಿರುತ್ತದೆ.

ಈ ವೆರಿಫೈಡ್‌ ವಿಚಾರದಲ್ಲಿ ಟ್ವಿಟ್ಟರ್‌ ಜಾತಿವಾದಿಯಾಗಿ ನಡೆದುಕೊಳ್ಳುತ್ತಿದೆ ಎಂದು ಹಲವಾರು ತಳಸಮುದಾಯದ ಚಿಂತಕರು, ಹೋರಾಟಗಾರರು ಆರೋಪಿಸಿದ್ದಾರೆ. ಇದನ್ನು ಹಿರಿಯ ಪತ್ರಕರ್ತ ಪ್ರೊ.ದಿಲೀಪ್‌ ಮಂಡಲ್‌ರವರು ಮೊದಲು ಆರಂಭಿಸಿದರು. ಜಾತಿ ತಾರತಮ್ಯದ ಹಲವಾರು ಮುಖಗಳನ್ನು ಟ್ವಿಟ್ಟರ್‌ ಮೂಲಕ ಅನಾವರಣ ಮಾಡುತ್ತಿದ್ದ ಅವರ ಖಾತೆಯನ್ನು ಟ್ವಿಟ್ಟರ್‌ ಯಾವುದೇ ಕಾರಣವಿಲ್ಲದೇ ಬ್ಲಾಕ್‌ ಮಾಡಿತು. ಆಗ ಅವರು ಟ್ವಿಟ್ಟರ್‌ ವಿರುದ್ಧ ಅಭಿಯಾನ ಆರಂಭಿಸಿದರು.

ಮೊದಲಿಗೆ ಸ್ಯಾಕ್‌ಮಣಿಸ್‌ ಮಹೇಶ್ವರಿ ಎಂಬುದಾಗಿ ಅವರು ಟ್ರೆಂಡ್‌ ಮಾಡಿದರು. ಅದನ್ನು ಟ್ವಿಟ್ಟರ್‌ ತೆಗೆದುಹಾಕಿತು. ನಂತರ ಕ್ಯಾಸ್ಟಿಸ್ಟ್‌ ಟ್ವಿಟ್ಟರ್‌ ಎಂದು ಆನಂತರ ಜೈಭೀಮ್‌ ಟ್ವಿಟ್ಟರ್‌ ಎಂದು ಟ್ರೆಂಡ್‌ ಮಾಡಿ ಲಕ್ಷಾಂತರ ಜನರ ಗಮನಸೆಳೆದರು. ಇದಾದ ನಂತರ ಟ್ವಿಟ್ಟರ್‌ ಎಚ್ಚೆತ್ತುಕೊಂಡು ಅವರ ಅಕೌಂಟ್‌ಗೆ ವೆರಿಫೈಡ್‌ ಎಂದು ’ಬ್ಲೂ ಟಿಕ್’ ಚಿಹ್ನೆ ನೀಡಿತು.

ಆಗ ಅವರು ಕೇವಲ ನನ್ನೊಬ್ಬನದು ಮಾತ್ರವಲ್ಲದೇ ದೇಶದ ಎಲ್ಲಾ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ಟ್ವಿಟ್ಟರ್‌ ಖಾತೆಗಳಿಗೂ ವೆರಿಫೈಡ್‌ ಎಂದು ’ಬ್ಲೂ ಟಿಕ್’ ಚಿಹ್ನೆ ನೀಡುವಂತೆ ಆಗ್ರಹಿಸಿದರು. #verifySCSTOBCMinority ಹ್ಯಾಷ್‌ಟ್ಯಾಗ್‌ ನೀಡಿದರು. ಆನಂತರ ಈ ವಿಚಾರವಾಗಿ ಇಂದು, ಭೀಮ್ ಆರ್ಮಿ ಮುಂಬೈ ತಂಡವು ಟ್ವಿಟ್ಟರ್ ಇಂಡಿಯಾ ವರ್ಣಭೇದ ನೀತಿಯ ವಿರುದ್ಧ ಪ್ರತಿಭಟನೆಯನ್ನು ನಡೆಸಿ ಇಡೀದಿನ ಟ್ವಟ್ಟರ್‌ ಕಚೇರಿಯನ್ನು ಬಂದ್‌ಮಾಡಿತ್ತು. ಆಗ ಟ್ವಿಟ್ಟರ್‌ನವರು ಭೀಮ್‌ ಆರ್ಮಿ ಸಂಘಟಕರೊಡನೆ ಸಭೆ ಕರೆದಿದ್ದರು.

ಪಾ. ರಂಜಿತ್‌ ಎಂಬ ತಮಿಳು ನಿರ್ದೇಶಕರು ಕಾಲ ಮತ್ತು ಕಬಾಲಿಯಂತಹ ಸಾವಿರಾರು ಕೋಟಿ ಬಂಡವಾಳದ ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಭಾರತದ ಅತ್ಯಂತ ಯಶಸ್ವಿ ಚಿತ್ರಗಳ ನಿರ್ದೇಶಕರಾಗಿದ್ದು, ಟ್ವಿಟ್ಟರ್‌ನಲ್ಲಿ 8 ಲಕ್ಷಕ್ಕೂ ಹೆಚ್ಚು ಅನುಯಾಯಿಗಳಳನ್ನು ಹೊಂದಿರುವ ಅಂಬೇಡ್ಕರೈಟ್ ಆಗಿದ್ದಾರೆ. ಅವರ ಖಾತೆಯನ್ನು ವೈರಫೈ ಮಾಡಿಲ್ಲ ಏಕೆ ಎಂದು ಟ್ವಿಟರ್ ಇಂಡಿಯಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅದೇ ರೀತಿಯಾಗಿ ನೂರಾರು ಜನರ ಉದಾಹರಣೆಯನ್ನು ದಿಲೀಪ್‌ ಮಂಡಲ್‌ರವರು ಟ್ವಿಟ್ಟರ್‌ನಲ್ಲಿ ಹೆಸರಿಸಿದ್ದಾರೆ. ಕಾಕಾವಾಣಿ ಎಂಬುವವರು ಒಂದೂವರೆ ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಟ್ರೈಬಲ್‌ ಆರ್ಮಿ 12ಸಾವರ ಅನುಯಾಯಿಗಳನ್ನು ಹೊಂದಿದೆ. ಜೈಭೀಮ್‌ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್‌ ರಾವಣ್‌ರವರು 67 ಸಾವಿರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇಂತಹ ಅಸಂಖ್ಯ ತಳಸಮುದಾಯದವರ ಟ್ವಿಟ್ಟರ್‌ ಅಕೌಂಟ್‌ ವೆರಿಫೈ ಆಗಿಲ್ಲ. ಆದರೆ ಕೇವಲ 27 ಜನ ಫಾಲೋವರ್ಸ್‌ಗಳನ್ನು ಹೊಂದಿರುವ ಜೈ ಶಾ ಅಕೌಂಟ್‌ ವೈರಿಫೈ ಆಗಿದೆ. 877 ಫಾಲೋವರ್ಸ್‌ಗಳನ್ನು ಹೊಂದಿರುವ ಹಿಂದೂ ವಿಶ್ವ ಎಂಬುವವರ ಅಕೌಂಟ್‌ ವರಿಫೈ ಆಗಲು ಕಾರಣವೇನು? ಎಂದು ಕಿಡಿಕಾರಿದ್ದಾರೆ.

ಇದು ಕೇವಲ ವೆರಿಫೈ ವಿಷಯ ಮಾತ್ರವಲ್ಲ. ಟ್ವಿಟ್ಟರ್‌ನಲ್ಲಿ ತಳಸಮುದಾಯ ವಿಷಯ, ಸುದ್ದಿಗಳನ್ನು, ಬರಹಗಳನ್ನು ಸಹ ಹೆಚ್ಚು ಜನರಿಗೆ ತಲುಪದಂತೆ ಟ್ವಿಟ್ಟರ್‌ ತಡಯುತ್ತಿದೆ ಎಂದು ದಿಲೀಪ್‌ ಮಂಡಲ್‌ರವರ ಆರೋಪಿಸಿದ್ದಾರೆ. ಇದಕ್ಕೆ ಟ್ವಿಟ್ಟರ್‌ ಇಂಡಿಯಾದ ಆಯಾಕಟ್ಟಿಯ ಹುದ್ದೆಗಳಲ್ಲಿ ಕುಳಿತಿರುವ ಜಾತಿವಾದಿಗಳೇ ಕಾರಣ ಎಂದು ದೂರಿದ್ದಾರೆ.

ಇದ್ಯಾವುದಕ್ಕೂ ಟ್ವಿಟ್ಟರ್‌ ಬಳಿ ಉತ್ತರವಿಲ್ಲ. ಮುಕ್ತ ಮತ್ತ ಸ್ವತಂತ್ರ ಎಂದು ಭಾವಿಸುವ ಸೋಷಿಯಲ್‌ ಫ್ಲಾಟ್‌ಫಾರಂಗಳು ಸಹ ಹೇಗೆ ಜಾತಿವಾದಿಗಳಾಗಿವೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಹಾಗಾಗಿ ಇದರ ವಿರುದ್ಧ ಹೋರಾಟ ನಡೆಯುತ್ತಿದೆ ಎಂದು ದಿಲೀಪ್‌ ಮಂಡಲ್‌ ಹೇಳಿದ್ದಾರೆ.

ಈ ಹಿಂದೆಯೂ ಸಹ 7 ಜನ ಮಹಿಳೆಯರೊಂದಿಗೆ ಟ್ವಿಟ್ಟರ್‌ ಸಿಇಓ ಸಭೆ ಮಾಡುವಾಗ ಸ್ಮಾಶ್ ಬ್ರಾಹ್ಮಿನಿಕಲ್ ಪೆಟ್ರಿಯಾರ್ಕಿ ಎಂಬ ಚಿತ್ರ ನೀಡಿದಾಗ ದೊಡ್ಡ ವಿವಾದವಾಗಿತ್ತು. ಅದು ನಿಜ ಎಂಬುದು ಪದೇ ಪದೇ ಸಾಬೀತಾಗುತ್ತಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.