ಗರ್ಭಿಣಿಯ ಪ್ರಾಣ ಉಳಿಸಲು ಕತಾರ್‌ನಿಂದ ಕುವೈತ್‌ಗೆ ಬಂದ ಯುವಕ…!

ತಿರುವನಂತಪುರಂ : ಯುವಕನೊಬ್ಬ ಕತಾರ್‌ನಿಂದ ಕುವೈತ್‌ಗೆ ಬಂದು ಕೇರಳ ಮೂಲದ ಗರ್ಭಿಣಿಗೆ ರಕ್ತದಾನ ಮಾಡಿ ಪ್ರಾಣ ಉಳಿಸಿದ ಸಂಗತಿ ಬೆಳಕಿಗೆ ಬಂದಿದೆ.

ರಕ್ತ ನೀಡಿದ ವ್ಯಕ್ತಿಯನ್ನು ನಿಧೀಶ್ ಎಂದು ಹೆಸರಿಸಲಾಗಿದೆ. ಕೇರಳ ಮೂಲದ ಗರ್ಭಿಣಿ ವಿನೀತಾ ಎಂಬುವವರು ಕುವೈತ್‌ನ ಅದಾನ್‌ ಆಸ್ಪತ್ರೆಗೆ ದಾಖಲಾಗಿದ್ದರು. ಬಾಂಬೆ ಗ್ರೂಪ್‌ ರಕ್ತ ಹೊಂದಿದ್ದ ಅವರಿಗೆ ಎಲ್ಲಿಯೂ ರಕ್ತ ಸಿಕ್ಕಿರಲಿಲ್ಲ. ಈ ರಕ್ತದ ಮಾದರಿ ಭಾರತದ 7,600 ಮಂದಿಯಲ್ಲಿ ಒಬ್ಬರಿಗೆ ಮಾತ್ರ ಇದ್ದ ಕಾರಣ ರಕ್ತಕ್ಕಾಗಿ ಹುಡುಕಾಟ ನಡೆದಿತ್ತು.

ಈ ವೇಳೆ ಕೇರಳ ಮೂಲದ ಬ್ಲಡ್‌ ಡೋನರ್ಸ್‌ ಫೋರಂ, ಕೇರಳ,ಕುವೈತ್‌ ಚಾಪ್ಪರ್ ಎಂಬ ರಕ್ತ ದಾನಿಗಳ ಸಂಸ್ಥೆಯಲ್ಲಿ ಆನ್‌ಲೈನ್‌ ಮೂಲಕ ಹುಡುಕಾಟ ಆರಂಭವಾಯಿತು. ಈ ವಿಚಾರ ತಿಳಿದ ಕತಾರ್‌ನಲ್ಲಿದ್ದ ಯುವಕ ನಿಧೀಶ್ ಕೂಡಲೇ ರಕ್ತ ನೀಡಲು ಮುಂದಾಗಿ ತಾವು ಕೆಲಸ ಮಾಡುತ್ತಿದ್ದ ಕಂಪನಿಯಿಂದ ಅನುಮತಿ ಪಡೆದು ಕೂಡಲೆ ವೀಸಾ ವ್ಯವಸ್ಥೆ ಮಾಡಿ ಕುವೈತ್‌ಗೆ ತಲುಪಿದ್ದಾರೆ.

ಬಳಿಕ ಆಸ್ಪತ್ರಗೆ ತೆರಳಿ ರಕ್ತದಾನ ಮಾಡಿದ್ದು, ತಾಯಿ ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಅನಿವಾಸಿ ಭಾರತೀಯರು ಸೇರಿದಂತೆ ಅನೇಕ ಸಂಸ್ಥೆಗಳು ನಿಧೀಶ್‌ಗೆ ಸನ್ಮಾನಿಸಿವೆ.

ಬಾಂಬೆ ಗ್ರೂಪ್ ರಕ್ತ ಎಂದರೇನು ?

ರಕ್ತದ ಕಣಗಳ ಆಧಾರದ ಮೇಲೆ ರಕ್ತದ ಗುಂಪನ್ನು ನಿರ್ಧರಿಸಲಾಗುತ್ತದೆ. ಎ ಗ್ರೂಪ್‌ನಲ್ಲಿ ಎ ಆ್ಯಂಟಿಜನ್‌, ಬಿ ಗುಂಪಿನಲ್ಲಿ ಬಿ ಆ್ಯಂಟಿಜನ್‌ ಒ ಗುಂಪಿನಲ್ಲಿ ಎಚ್‌ ಆ್ಯಂಟಿಜೆನ್‌ ಇರುತ್ತದೆ. ಯಾವ ವ್ಯಕ್ತಿ ಒ ಗುಂಪಿಗೆ ಸೇರಿದ್ದು ಎಚ್‌ ಆ್ಯಂಟಿಜೆನ್‌ ಇರುವುದಿಲ್ಲವೋ ಅದನ್ನು ಬಾಂಬೆ ಗ್ರೂಪ್‌ ರಕ್ತದವರು ಎನ್ನಲಾಗುತ್ತದೆ.

ಮುಂಬೈನಲ್ಲಿ ಮೊದಲು ಈ ರಕ್ತದ ಮಾದರಿ ಪತ್ತೆಯಾದ ಕಾರಣ ಇದಕ್ಕೆ ಬಾಂಬೆ ಬ್ಲಡ್‌ ಎಂದು ಕರೆಯಲಾಗುತ್ತದೆ.

 

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.