ಮೋದಿ ಸರ್ಕಾರದ ವಿರುದ್ಧ ಮಾತನಾಡಿದವರಿಗೆಲ್ಲಾ ಆಗಿದ್ದು ಈ ಗತಿ…

ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ-2 ಸರ್ಕಾರವು ಯಾವುದೇ ನೈಜ ಮತ್ತು ಗ್ರಹಿತ ವಿರೋಧಗಳನ್ನು ಮೆಟ್ಟಿ ಹಾಕಲು ಒಂದಿನಿತೂ ಸಮಯವನ್ನು ವ್ಯರ್ಥ ಮಾಡುತ್ತಿಲ್ಲ. ಗುಜರಾತ್ ಗಲಭೆಗಳಲ್ಲಿ ಮೋದಿ ಪಾತ್ರವಿದೆಯೆಂದು ಆರೋಪಿಸಿದ್ದ ಸಂಜೀವ್ ಭಟ್ಟ ಅವರಿಗೆ ಜೀವಾವಧಿ ಶಿಕ್ಷೆ ಆಗುವಂತೆ ಮಾಡುವ ಮೂಲಕ ಇದು ಆರಂಭವಾಯಿತು. ನಂತರದಲ್ಲಿ ಉತ್ತರ ಪ್ರದೇಶದ ಯೋಗಿ ಸರ್ಕಾರದ ಟೀಕಾಕಾರರಾಗಿದ್ದ ಪರ್ತಕರ್ತರ ಮೇಲೆ ದಾಳಿ ಮತ್ತು ಬಂಧನಗಳಾದವು.

ಈ ವಾರವಷ್ಟೇ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಅವರ ಮನೆ ಮತ್ತು ಲಾಯರ್ಸ್ ಕಲೆಕ್ಟಿವ್ ಕಚೇರಿ ಮೇಲೆ ಸಿಬಿಐ ದಾಳಿ ನಡೆದಿದ್ದು ಇದೆಲ್ಲದರ ಮುಂದುವರಿಕೆ. ಇಂದಿರಾರವರು 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಅವರ ಮತ್ತು ಅವರ ನೀತಿಗಳ ಪ್ರಖರ ಟೀಕಾಕಾರರಾಗಿದ್ದಾರೆ.

ಆನಂದ್ ಗ್ರೋವರ್ ಮತ್ತು ಇಂದಿರಾ ಜೈಸಿಂಗ್

ಇಂದಿರಾ ಮತ್ತು ಅವರ ಸಂಸ್ಥೇ ಲಾಯರ್ಸ್ ಕಲೆಕ್ಟಿವ್ ಬಿಜೆಪಿ ವಿರುದ್ಧ ಹಲವಾರು ಕಾನೂನು ಪ್ರಕರಣಗಳನ್ನು ಕೈಗೆತ್ತಿಕೊಂಡಿದೆ. ಸಂಜೀವ್ ಭಟ್ ಮತ್ತು ತೀಸ್ತಾ ಸೆಟೆಲ್ ವಾಡ್ ಕೇಸುಗಳು ಇದರಲ್ಲಿ ಮುಖ್ಯವಾಗಿವೆ. 2002ರ ಗುಜರಾತ್ ಗಲಭೆಯಲ್ಲಿ ಅಂದಿನ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಪಾತ್ರವಿತ್ತು ಎಂದು ಸಂಜೀವ್ ಭಟ್ ಆರೋಪಿಸಿದ್ದರು. 2002ರ ಗುಜರಾತ್ ಗಲಭೆಯ ಸಂತ್ರಸ್ಥರ ಪರವಾಗಿ ತೀಸ್ತಾ ಅವರ ಸಂಸ್ಥೇ ಕಾನೂನಾತ್ಕ ಹೋರಾಟ ನಡೆಸುತ್ತ ಬಂದಿದೆ. ತೀಸ್ತಾರ ಮೇಲಿನ ಹಣ ದುರುಪಯೋಗ ಪ್ರಕರಣದ ಕೇಸನ್ನು ಇಂದಿರಾ ಜೈಸಿಂಗ್ ಅವರೇ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಇಂದಿರಾ ಜೈಸಿಂಗ್ ಯಾರು? ಅವರ ಮೇಲೆ ಮೋದಿ ಶಾಗೇಕೆ ಕೋಪ?

ಗ್ರೀನ್‍ಪೀಸ್ ಕಾರ್ಯಕರ್ತೆ ಪ್ರಿಯಾ ಪಿಳ್ಳೈ ಅವರಿಗೆ ಭಾರತದ ಆಚೆ ಪ್ರವಾಸಿಸದಂತೆ ನಿರ್ಬಂಧ ಹೇರಿದ್ದರ ವಿರುದ್ದವೂ ಇಂದಿರಾ ವಕೀಲಿಕೆ ಮಾಡಿದ್ದರು. ಸುಪ್ರಿಂಕೋರ್ಟಿನಲ್ಲಿ ಹಿರಿಯ ನ್ಯಾಯಾಧೀಶರನ್ನು ನೇಮಿಸುವ ಪ್ರಕ್ರಿಯೆಯನ್ನು ಇಂದಿರಾ ಟಿಕಿಸುತ್ತ ಬಂದಿದ್ದು, 2016ರಲ್ಲಿ ಅವರು ಕೋರ್ಟಿನಲ್ಲಿ ಅದನ್ನು ಪ್ರಶ್ನಿಸಿದ್ದರು. ನ್ಯಾಯಾಧೀಶ ಲೋಯಾ ಸಾವಿನ ಪ್ರಕರಣದ ವಿಚಾರಣಗೆ ನ್ಯಾಯಾಧೀಶರನ್ನು ನೇಮಿಸುವಲ್ಲಿ ಆದ ಲೋಪವನ್ನೂ ಇಂದಿರಾ ವಿರೋಧಿಸಿದ್ದರು.

ಉತ್ತರಪ್ರದೇಶದಲ್ಲಿ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರನ್ನು ಕಾನೂನುಬಾಹಿರವಾಗಿ ಬಂಧಿಸಿದ್ದ ಪ್ರಕರಣದ ನಂತರ ಇಲ್ಲಿವರೆಗೆ ಐವರು ಪತ್ರಕರ್ತರು ಮತ್ತ ಮಾನವ ಹಕ್ಕು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಈ ಪ್ರಕರಣಗಳು ಸಣ್ಣ ಪಟ್ಟಣಗಳಿಗೆ ಸಂಬಂಧಿಸಿದ್ದವಾದ್ದರಿಂದ ಕನೋಜಿಯಾ ಪ್ರಕರಣದಂತೆ ಸುದ್ದಿಯಾಗಲಿಲ್ಲ.

1. 9, ಜೂನ್ 2019ರಂದು ಜಾರ್ಖಂಡಿನಲ್ಲಿ ಪತ್ರಕರ್ತ ಮತ್ತ ಸಾಮಾಜಿಕ ಕಾರ್ಯಕರ್ತ ರೂಪೇಶಕುಮಾರ್ ಮತ್ತು ವಕೀಲ ಮಿಥಿಲೇಶ್ ಕುಮಾರ್ ಸಿಂಗ್ ಬಂಧನ.

2. 8, ಜುಲೈ 2019, ಕೃಪಾಶಂಕರ್ ಮತ್ತು ಅವರ ಪತ್ನಿ ಪ್ರತಿಭಾ ಅವರನ್ನು ಹೊಟೆಲ್ ಒಂದರಿಂದ ಕರೆದೊಯ್ದು ಬಂಧಿಸಲಾಯಿತು. ಕೃಪಾಶಂಕರ್ ಯುಪಿಯ ದಿನಪತ್ರಿಕೆ ‘ವಿರುದ್ಧ್’ನ ಸಂಪಾದಕರು ಮತ್ತು ಹಿಂದೂತ್ವ ಫ್ಯಾಸಿಸಂ ವಿರೋಧಿ ವೇದಿಕೆಯ ಸದಸ್ಯರು.

3. 9, ಜುಲೈ 2019, ಸಾಮಾಜಿಕ ಕಾರ್ಯಕರ್ತರು ಮತ್ತು ಶಿಕ್ಷಕರಾದ ಮನಿಶ್ ಮತ್ತು ಅವರ ಪತ್ನಿ ಅಮಿತಾ ಶ್ರೀವಾಸ್ತವ್ ಬಂಧನ.

ಈ ಎಲ್ಲ ಪ್ರಕರಣಗಳಲ್ಲಿ ಒಂದು ನಿರ್ದಿಷ್ಟ ಪ್ಯಾಟರ್ನ್ ಇದ್ದು, ಮೊದಲಿಗೆ ಅಪಹರಿಸಿ ನಂತರ ಬಂಧಿಸುವುದು. ನಕ್ಸಲ್‍ರೊಂದಿಗೆ ಸಂಪರ್ಕ ಎಂಬ ಆರೋಪದ ಮೇಲೆ ಆ ಮೂರು ಬಂಧನಗಳನ್ನು ಮಾಡಲಾಗಿದೆ. ಕಳೆದ 6 ತಿಂಗಳಿಂದ ಇಂಥವನ್ನೆಲ್ಲ ನಾವು ನೋಡುತ್ತಿದ್ದೇವೆ.

ನಕ್ಸಲ್ ಸಂಪರ್ಕ ಎಂಬ ನಿರಾಧಾರ ಆರೋಪದ ಮೇಲೆ ಮೋದಿ ಸರ್ಕಾರ ಮಾನವ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸುತ್ತ ನಡೆದಿದೆ. ಈ ಕಾರ್ಯಕರ್ತರ ಅಪರಾಧವಾದರೂ ಏನು? ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಅವರು ಮಾತನಾಡುತ್ತಿರುವುದು ಮತ್ತು ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು.

ತನ್ನ ನೀತಿಗಳ ಟೀಕೆ ಮಾಡುವ ಸಣ್ಣ ಪಟ್ಟಣಗಳ ಮಾನವ ಹಕ್ಕು ಕಾರ್ಯಕರ್ತರು, ಪತ್ರಕರ್ತರು ಮತ್ತು ಖ್ಯಾತ ವಕೀಲರನ್ನು ಬಂಧಿಸುವ ಮೂಲಕ ಮೋದಿ ಸರ್ಕಾರವು ತನ್ನ ಟೀಕಾಕಾರರು ಮತ್ತು ವಿರೋಧಿಗಳನ್ನು ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ರವಾನಿಸುತ್ತಿದೆ. ಅದು ಎಲ್ಲಾ ವಿರೋಧ ಮತ್ತು ಭಿನ್ನಮತವನ್ನು ಮಟ್ಟ ಹಾಕಲು ಹೊರಟಿದೆ. ನಮ್ಮ ಮುಂದಿನ ಪ್ರಶ್ನೆ: ಎಷ್ಟು ದಿನಾ ಅಂತ ನಾವು ಮೌನವಾಗಿರುವುದು?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.