ತಮಿಳುನಾಡು ರಾಜ್ಯಪಾಲರ ವಿರುದ್ಧ ಮಾನಹಾನಿ ಲೇಖನ – ಪತ್ರಕರ್ತ ನಕ್ಕೀರನ್ ಬಂಧನ

ತಮಿಳುನಾಡು ರಾಜ್ಯಪಾಲರ ವಿರುದ್ಧ ಮಾನಹಾನಿ ಲೇಖನ ಬರೆದಿರುವ ಆರೋಪದ ಮೇಲೆ ಪತ್ರಕರ್ತ ನಕ್ಕೀರನ್ ಗೋಪಾಲ ಅವರನ್ನು ಮಂಗಳವಾರ ಬೆಳಿಗ್ಗೆ ಬಂಧಿಸಲಾಗಿದೆ. ತಮಿಳಿನ ಜನಪ್ರಿಯ ವಾರಪತ್ರಿಕೆ ‘ನಕ್ಕೀರನ್’ ಸಂಪಾದಕರಾಗಿರುವ ನಕ್ಕೀರನ್ ಗೋಪಾಲ್, ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರ ಬಗ್ಗೆ ಮಾನಹಾನಿ ಲೇಖನ ಬರೆದಿದ್ದರಿಂದ ಚೆನ್ನೈ ಏರ್ಫೊರ್ಟ್ ನಲ್ಲಿ ಬಂಧನಕ್ಕೊಳಗಾಗಿದ್ದಾರೆ.

ಚೆನ್ನೈನಿಂದ ಪುಣೆಗೆ ತೆರಳುತ್ತಿದ್ದ ವಿಮಾನವನ್ನು ಹತ್ತುವುದಕ್ಕೂ ಮುಂಚೆಯೇ ನಕ್ಕೀರನ್ ಗೋಪಾಲ್ ಅವರನ್ನು ಪೋಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 124 ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

ಮಧುರೈ ರಾಮರಾಜ್ ವಿಶ್ವವಿದ್ಯಾಲಯದ ಸೆಕ್ಸ್ ಹಗರಣವೊಂದರಲ್ಲಿ ಬಂಧನಕ್ಕೊಳಗಾಗಿರುವ ಉಪನ್ಯಾಸಕಿ ನಿರ್ಮಲಾದೇವಿ, ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ರನ್ನು ಭೇಟಿಯಾಗಿದ್ದರು.

ಮಧುರೈ ರಾಮರಾಜ್ ವಿಶ್ವವಿದ್ಯಾಲಯದಲ್ಲಿ ಮಹಿಳಾ ವಿದ್ಯಾರ್ಥಿಗಳನ್ನು ‘ಸೆಕ್ಸ್ ಫಾರ್ ಮಾರ್ಕ್ಸ್’ ಗೆ ಬಲವಂತಪಡಿಸಿದ ಆರೋಪದ ಮೇಲೆ ಉಪನ್ಯಾಸಕಿ ನಿರ್ಮಲಾದೇವಿ ಬಂಧನಕ್ಕೊಳಗಾಗಿದ್ದರು.

‘ ನಿರ್ಮಲಾದೇವಿ ಕೆಲವು ವಿದ್ಯಾರ್ಥಿನಿಯರೊಂದಿಗೆ ವಿಶ್ವವಿದ್ಯಾಲಯದ ಕುಲಪತಿಗಳೂ ಆಗಿರುವ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ತಾನು ಭೇಟಿಯಾಗಿದ್ದೆ ಎಂದು ಒಪ್ಪಿಕೊಂಡಿದ್ದಾರೆ ‘ ಎಂದು ಪೋಲೀಸ್ ಅಧಿಕಾರಿಯೊಬ್ಬರ ನೀಡಿರುವ ಹೇಳಿಕೆಯನ್ನು ನಕ್ಕೀರನ್ ಲೇಖನದಲ್ಲಿ ಬರೆದಿದ್ದರು.

 

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.