ತಮಿಳುನಾಡು ಉಪಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಪಕ್ಷ ಸಿದ್ಧವೆಂದ ಕಮಲ್‌ಹಾಸನ್

ತಮಿಳುನಾಡಿನ 20 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ತಮ್ಮ ಪಕ್ಷವಾದ ಮಕ್ಕಳ್ ನೀಧಿ ಮೈಮ್ (ಎಂಎನ್ಎಂ) ಸ್ಪರ್ಧಿಸಲು ಸಿದ್ಧವೆಂದು ನಟ ಕಂ ರಾಜಕಾರಣಿ ಕಮಲ್‌ಹಾಸನ್ ಘೋಷಿಸಿದ್ದಾರೆ. ಆ ಮೂಲಕ ತಮಿಳು ಚುನಾವಣಾ ರಾಜಕಾರಣಕ್ಕೆ ಇನ್ನೊಬ್ಬ ಸಿನಿತಾರೆಯ ಪ್ರವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ.

ಯಾವಾಗ ಉಪಚುನಾವಣೆ ನಡೆಯುತ್ತದೆ ಎಂಬ ಬಗ್ಗೆ ಯಾರಿಗೂ ಖಾತರಿ ಇಲ್ಲ. ಆದಾಗ್ಯೂ, ಯಾವಾಗ ಈ ಚುನಾವಣೆ ನಡೆದರೂ ತಮ್ಮ ಪಕ್ಷ ಸ್ಪರ್ಧಿಸಲು ಸಿದ್ಧವಿದೆ ಎಂದು 64ನೇ ಹುಟ್ಟುಹಬ್ಬ ಆಚರಿಸಿಕೊಂಡ ಕಮಲ್ ಹೇಳಿದ್ದಾರೆ.

ಈಗಾಗಲೇ 20 ಕ್ಷೇತ್ರಗಳಲ್ಲಿ ಪಕ್ಷ ಮಟ್ಟದ ವಿವಿಧ ಹಂತಗಳ ಶೇ.80ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿದೆ ಎಂದೂ ಅವರು ಹೇಳಿದ್ದಾರೆ. ಯಾವುದಾದರೂ ಪಕ್ಷದೊಂದಿಗೆ ಮೈತ್ರಿ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕಮಲ್, ಈ ಹಂತದಲ್ಲಿ ನಾನು ಯಾವುದೇ ಭರವಸೆ ನೀಡುವುದಿಲ್ಲ. ಜನರಿಗೆ ಭರವಸೆಗಳನ್ನು ನೀಡುವುದರಲ್ಲಿ ನನಗೆ ವಿಶ್ವಾಸವಿಲ್ಲ. ನಾನು ಜನರಿಂದ ಸಲಹೆಗಳನ್ನು ಕೇಳುತ್ತೇನೆ. ನಾನು ಜನರ ಆಯುಧವೇ ಹೊರತು ಯಾವುದೇ ಗುಂಪು ಅಥವಾ ರಾಜಕೀಯ ಪಕ್ಷದ ಆಯುಧವಲ್ಲ. ಭ್ರಷ್ಟಾಚಾರ ತೊಲಗಬೇಕೆಂಬುದೇ ನನ್ನ ಪಣ ಎಂದು ಇದೇ ವೇಳೆ ಹೇಳಿದ್ದಾರೆ.

ಹೈಕೋರ್ಟ್ ತೀರ್ಪಿನಿಂದಾಗಿ 18 ಶಾಸಕರು ಅನರ್ಹಗೊಂಡಿದ್ದಾರೆ. ಜತೆಗೆ ಕರುಣಾನಿಧಿ ಸಹಿತ ಇಬ್ಬರು ಶಾಸಕರು ಮೃತಪಟ್ಟಿದ್ದಾರೆ. ಹೀಗಾಗಿ ಒಟ್ಟಾರೆ 20 ಕ್ಷೇತ್ರಗಳಿಗೆ 6 ತಿಂಗಳೊಳಗೆ ಉಪಚುನಾವಣೆ ನಡೆಯಬೇಕಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.