ತಾಯಿಯ ಮಡಿಲಿನಷ್ಟು ಸೇಫ್ ಜಾಗ ಜಗತ್ತಿನಲ್ಲಿ ಮತ್ತೊಂದಿಲ್ಲ ಎನ್ನುವುದಕ್ಕೆ ಸಾಕ್ಷಿಯಾದ ಹಕ್ಕಿ…

ತಾಯಿಯ ಮಮತೆಗೆ ಸಾಟಿಯೇ ಇಲ್ಲ, ಆಕೆಯ ಮಡಿಲಿನಷ್ಟು ಸೇಫ್ ಜಾಗ ಜಗತ್ತಿನಲ್ಲಿ ಮತ್ತೊಂದಿಲ್ಲ. ಸದ್ಯ ವೈರಲ್ ಆಗುತ್ತಿರುವ ಚೀನಾದ ವಿಡಿಯೋ ಒಂದು ಇದಕ್ಕೆ ತಕ್ಕ ಉದಾಹರಣೆಯಂತಿದೆ. ತನ್ನ ಮೊಟ್ಟೆಗಳನ್ನು ಕಾಪಾಡಲು ಪುಟ್ಟ ಹಕ್ಕಿಯೊಂದು, ತನ್ನ ಪ್ರಾಣವನ್ನೇ ಒತ್ತೆಯಿಟ್ಟು ಟ್ರ್ಯಾಕ್ಟರ್ ಎದುರು ಬಂದು ನಿಂತ ಈ ವಿಡಿಯೋ ನೋಡುಗರನ್ನು ಬೆಕ್ಕಸ ಬೆರಗಾಗುವಂತೆ ಮಾಡಿದೆ.

CGTN ವರದಿಯನ್ವಯ ಇದು ಚೀನಾದ ಉಲಾಕಬ್ ಎಂಬ ನಗರದಲ್ಲಿ ಸೆರೆ ಹಿಡಿದ ವಿಡಿಯೋ ಎನ್ನಲಾಗಿದೆ. ಟ್ರ್ಯಾಕ್ಟರ್ ಬರುತ್ತಿರುವುದನ್ನು ಗಮನಿಸಿದ ಹಕ್ಕಿ ತನ್ನ ರೆಕ್ಕೆಗಳನ್ನು ಹರಡಿ ಅದನ್ನು ತಡೆಯಲು ಯತ್ನಿಸಿದೆ. ಟ್ರ್ಯಾಕ್ಟರ್ ಚಲಿಸುತ್ತಿದ್ದ ಹಾದಿಯಲ್ಲಿ ಸ್ವಲ್ಪ ದೂರದಲ್ಲೇ ಈ ಹಕ್ಕಿಯ ಮೊಟ್ಟೆಗಳಿತ್ತು. ಇದನ್ನು ಕಾಪಾಡಲು ತಾಯಿ ತನ್ನ ಪ್ರಾಣವನ್ನೇ ಒತ್ತೆ ಇಟ್ಟಿದೆ.

ಹಕ್ಕಿಯ ಈ ವರ್ತನೆ ಗಮನಿಸಿದ ಟ್ರ್ಯಾಕ್ಟರ್ ಡ್ರೈವರ್ ಕೂಡಲೇ ವಾಹನವನ್ನು ನಿಲ್ಲಿಸಿ ಕೆಳಗಿಳಿದಿದ್ದಾನೆ. ಹಕ್ಕಿ ತನ್ನ ಮೊಟ್ಟೆಗಳನ್ನು ಕಾಪಾಡಲು ಹೀಗೆ ವರ್ತಿಸುತ್ತಿದೆ ಎಂದು ತಿಳಿದ ಆತ ಕೂಡಲೇ ಒಂದು ಬಾಟಲ್ ನೀರು ಕೂಡಾ ಅಲ್ಲಿಟ್ಟಿದ್ದಾನೆ. ಬಿಸಿಲಿನ ತಾಪ ಬಹಳಷ್ಟು ಇದ್ದ ಕಾರಣ ಆತ ನೀರಿಟ್ಟಿದ್ದಾನೆ. ಸದ್ಯ ಈ ಹೃದಯಸ್ಪರ್ಶಿ ವಿಡಿಯೋ ಭಾರೀ ವೈರಲ್ ಆಗಿದೆ.

ಒಂದೆಡೆ ತಾಯಿ ಹಕ್ಕಿಯ ಮಮತೆ ಕಂಡು ನೆಟ್ಟಿಗರು ಭಾವುಕರಾಗಿದ್ದರೆ, ಮತ್ತೊಂದೆಡೆ ಟ್ರ್ಯಾಕ್ಟರ್ ಚಾಲಕನ ಮಾನವೀಯತೆಗೆ ಭೇಷ್ ಎಂದಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.