ಪಶುವೈದ್ಯೆ ಶವಸುಟ್ಟ ಸ್ಥಳಕ್ಕೆ ಮತ್ತೆ ಭೇಟಿ ನೀಡಿದ ಕಾಮುಕರು : ತನಿಖೆಯಿಂದ ಬಯಲಾದ ಸತ್ಯ

ದೇಶಾದ್ಯಂತ ವ್ಯಾಪಕ ಆಕ್ರೋಶ ಭುಗಿಲೆದ್ದಿರುವ ಪಶುವೈದ್ಯೆ ಡಾ. ಪ್ರಿಯಾಂಕಾ ರೆಡ್ಡಿ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆಯ ಪೈಶಾಚಿಕ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಹೈದರಾಬಾದ್ ಪೊಲೀಸರಿಗೆ ಇನ್ನೂ ಕೆಲವು ಆಘಾತಕಾರಿ ಸಂಗತಿಗಳು ತಿಳಿದುಬಂದಿವೆ.

ಬಲವಂತವಾಗಿ ಮದ್ಯ ಕುಡಿಸಿ ಚಿತ್ರ ಹಿಂಸೆ ನೀಡಿ, ಸರಣಿ ಲೈಂಗಿಕ ದಾಳಿ ನಡೆಸಿದ ಬಳಿಕ ನಾಲ್ವರು ನೀಚರು ಆಕೆಯನ್ನು ಸುಟ್ಟು ಹಾಕಿದ್ದರು. ಅಪರಾಧ ಎಸಗಿದ ಅಪರಾಧಿಗಳು ಆ ಸ್ಥಳಕ್ಕೆ ಮತ್ತೆ ಭೇಟಿ ನೀಡುತ್ತಾರೆ ಎಂಬ ಆಂಗ್ಲ ಗಾದೆ ಮಾತಿನಂತೆ ಈ ನರರಾಕ್ಷಸರು ತಾವು ಶವಸುಟ್ಟ ಸ್ಥಳಕ್ಕೆ ಮತ್ತೆ ಭೇಟಿ ನೀಡಿ ಮೃತದೇಹ ಸಂಪೂರ್ಣ ಸುಟ್ಟಿದೆಯೇ ಎಂಬುದನ್ನು ಖಚಿತಪಡಿಸಿಕೊಂಡಿದ್ದರೆಂಬ ಸಂಗತಿ ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ನಾಲ್ವರು ಆರೋಪಿಗಳಲ್ಲಿ ಜೊಳ್ಳು ಶಿವ ಮತ್ತು ಜೊಳ್ಳು ನವೀನ್, ಅತ್ಯಾಚಾರಕ್ಕೆ ಒಳಗಾದ ಪ್ರಿಯಾಂಕಾ ಅವರ ಕೆಂಪು ಬಣ್ಣದ ಮಾಯಿಸ್ಟ್ರೋ ಸ್ಕೂಟರ್‍ನಲ್ಲಿ ಶಂಷಾಬಾದ್ ಮತ್ತು ಶಾದ್‍ನಗರಗಳ ನಡುವೆ ರಾಷ್ಟ್ರೀಯ ಹೆದ್ದಾರಿ-44ರ ನಿರ್ಜನ ಸ್ಥಳದಲ್ಲಿ ಶವ ಸುಡಲು ಸೂಕ್ತ ಸ್ಥಳಕ್ಕಾಗಿ ಪರಿಶೀಲಿಸಿದ್ದರು. ಇವರ ಹಿಂದೆ ಇನ್ನಿಬ್ಬರು ಆರೋಪಿಗಳು ಟ್ರಕ್‍ನಲ್ಲಿ ಬರುತ್ತಿದ್ದರು. ಆ ಟ್ರಕ್‍ನ ಕ್ಯಾಬಿನ್‍ನಲ್ಲಿ ಪ್ರಿಯಾಂಕಾ ಶವವಿತ್ತು.

ಸ್ಕೂಟರ್‍ನಲ್ಲಿದ್ದ ಆರೋಪಿಗಳು ಎರಡು-ಮೂರು ಸ್ಥಳಗಳನ್ನು ಶವ ಸುಡಲು ಪರಿಶೀಲಿಸಿದರು. ಆದರೆ ಅಲ್ಲಿ ಜನಸಂಚಾರ ಇದ್ದ ಕಾರಣ ಸಾಧ್ಯವಾಗಲಿಲ್ಲ. ಅಂತಿಮವಾಗಿ ಚಟ್ಟನ್‍ಪಲ್ಲಿ ಗ್ರಾಮದ ಬಳಿ ಹೈವೇಯ ಫ್ಲೈಒವರ್ ಕೆಳಗೆ ಅಂಡರ್‍ಪಾಸ್ ಸನಿಹ ನಿರ್ಜನ ಸ್ಥಳವಿರುವುದನ್ನು ದುಷ್ಕರ್ಮಿಗಳು ಹುಡುಕಿದ್ದು, ಕಿರಿದಾದ ಕೊಳಕು ಮಾರ್ಗದಲ್ಲಿ ಆಕೆಯ ಶವವನ್ನು ಟ್ರಕ್‍ನಿಂದ ಇಳಿಸಿ ಅಲ್ಲಿಗೆ ಎಳೆತಂದು ಸುಟ್ಟು ಹಾಕಿದರು.

ಆ ನಂತರ ಅಲ್ಲಿಂದ ಪರಾರಿಯಾದ ಅತ್ಯಾಚಾರಿಗಳು ಕೆಲ ಸಮಯದ ಬಳಿಕ ಆ ಸ್ಥಳಕ್ಕೆ ಹಿಂದಿರುಗಿ ಶವ ಸಂಪೂರ್ಣ ಸುಟ್ಟಿದೆಯೇ ಮತ್ತು ಸಾಕ್ಷ್ಯಾಧಾರಗಳು ನಾಶವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಂಡು ಹಿಂದಿರುಗಿದ್ದರು ಎಂದು ಆಘಾತಕಾರಿ ಪ್ರಕರಣದ ತನಿಖೆ ಮುಂದುವರಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ ನಿನ್ನೆ ಸಂಜೆ ಹೆಚ್ಚುವರಿ ತನಿಖೆಗಾಗಿ ಪೊಲೀಸ್ ಮಹಾ ನಿರ್ದೇಶಕ ಎಂ.ಮಹೇಂದ್ರ ರೆಡ್ಡಿ, ಸೈಬರಾಬಾದ್ ಆಯುಕ್ತ ವಿ.ಸಿ.ಸಜ್ಜನರ್ ಮತ್ತು ಇತರ ಉನ್ನತಾಧಿಕಾರಿಗಳು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.