ಚಳಿಗಾಲದಲ್ಲೂ ಹೆಚ್ಚಿದ ವಿದ್ಯುತ್‌ ಬೇಡಿಕೆ : ಬೇಸಿಗೆಗೆ ಭಾರಿ ಪೆಟ್ಟು ಬೀಳುವ ಸಾಧ್ಯತೆ

ಡಿಕೆ ಶಿವಕುಮಾರ್ ಅವರು ಇಂಧನ ಸಚಿವರಾದಾಗಿನಿಂದಲೂ ವಿದ್ಯುತ್ ವ್ಯತ್ಯಯ ಆಗುವುದಿಲ್ಲ , ರಾಜ್ಯಕ್ಕೆ ಇನ್ಮುಂದೆ ಯಾವುದೇ ರೀತಿಯ ವಿದ್ಯುತ್ ಸಮಸ್ಯೆ ಬರುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಪ್ರತೀ ಬಾರಿ ಅವಶ್ಯಕತೆ ಇರುವಷ್ಟು ವಿದ್ಯುತ್ ಖರೀದಿ ಮಾಡಲಾಗುವುದು, ಅದಕ್ಕಾಗಿ ಹೈಟೆಕ್ಷನ್ ಟವರ್ ಗಳ ನಿರ್ಮಾಣ, ಕಲ್ಲಿದ್ದಲು ಖರೀದಿ ಹೀಗೆ ಕೋಟಿ ಕೋಟಿ ಹಣ ಖರ್ಚು ಮಾಡಲಾಗುವುದು ಎನ್ನುವ ವಿಚಾರ ಮಾತ್ರ ಬಹಳ ಸ್ಪಷ್ಟವಾಗಿ ಡಿಕೆಶಿ ಹೇಳುತ್ತಾರೆ. ಆದರೆ ಅದರಿಂದ ಯಾವ ಪ್ರಯೋಜವಾಗಿದೆ ಅನ್ನೋದೇ ಯಕ್ಷ ಪ್ರಶ್ನೆ.

ಹೌದು.. ಬೇಸಿಗೆಯ ದಿನಗಳಲ್ಲಿ ವಿದ್ಯುತ್‌ ಬಳಕೆ ಪ್ರಮಾಣ ಏರಿಕೆಯಾಗುವುದು ಸಹಜ. ಆದರೆ ಚಳಿಗಾಲದಲ್ಲೂ ವಿದ್ಯುತ್‌ ಬಳಕೆ ದಾಖಲೆ ಮಟ್ಟ ಹೆಚ್ಚಾಗಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಕರೆಂಟ್‌ ಬೇಡಿಕೆ ಒಂದು ದಿನಕ್ಕೆ 6-7 ಸಾವಿರ ಮೆಗಾವ್ಯಾಟ್‌ ದಾಟುವುದಿಲ್ಲ.ಆದರೆ ಈಗ ನಿತ್ಯ ಸರಾಸರಿ 11,000-11,230 ಮೆ.ವ್ಯಾಗೆ ಮುಟ್ಟಿದೆ. ಇದೊಂದು ಸರ್ವಕಾಲಿಕ ದಾಖಲೆಯಾಗಿದೆ. ಚಳಿಗಾಲದಲ್ಲೇ ಹೀಗಾದರೆ, ಬೇಸಿ ನಿಭಾಯಿಸುವುದು ಹೇಗೆ ಎನ್ನುವ ದುಗುಡ ಕೆಪಿಸಿಗೆ ಶುರುವಾಗಿದೆ. ಒಂದು ವೇಳೆ ಬೇಸಿಗೆಯ ದಿನಗಳಲ್ಲೂ ದಿನದ ವಿದ್ಯುತ್‌ ಬಳಕೆ ಹೀಗೆ ಮುಂದುವರೆದು, ಥರ್ಮಲ್‌ ಘಟಕಗಳಿಗೆ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ರಾಜ್ಯಕ್ಕೆ ಕತ್ತಲು ಆವರಿಸುವುದು ಕಂಡಿತ.

ಪ್ರತಿ ವರ್ಷ ಬೇಸಿಗೆಯ ದಿನಗಳಲ್ಲಿ ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ಪ್ರಮಾಣ 10 ಸಾವಿರ ಮೆ.ವ್ಯಾ. ದಾಟುತ್ತದೆ. ಈಗ ಡಿಸೆಂಬರ್‌ನಲ್ಲೇ ಫೆಬ್ರವರಿಯಲ್ಲಿ ಉಂಟಾಗುವ ಬೇಡಿಕೆ ಪ್ರಮಾಣವನ್ನು ಮುಟ್ಟಿದೆ. ರಾಜ್ಯದ ಉತ್ತರ ಭಾಗದಲ್ಲಿ ಪ್ರಸಕ್ತ ವರ್ಷ ಮುಂಗಾರು, ಹಿಂಗಾರು ಮಳೆ ಅಭಾವವೇ ವಿದ್ಯುತ್‌ ಬಳಕೆಯ ಪ್ರಮಾಣ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ. ಕೊಳವೆಬಾವಿ ಆಶ್ರಿತ ಕೃಷಿ ಹಾಗೂ ಕುಡಿವ ನೀರಿನ ಯೋಜನೆಗಳಿಗೆ ಹೆಚ್ಚಿನ ವಿದ್ಯುತ್‌ ಬಳಕೆಯಿಂದ ಈ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದರಿಂದ ಬೇಸಿಗೆಯಲ್ಲಿ ದೊಡ್ಡ ಸವಾಲು ಎದುರಾಗಲಿದೆ. ವಿದ್ಯುತ್‌ ಬಳಕೆಯ ಪ್ರಮಾಣ ಏರುತ್ತಿದ್ದಂತೆಯೇ ಬಹುತೇಕ ಜಲವಿದ್ಯುತ್‌ ಘಟಕಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಶರಾವತಿ ವಿದ್ಯುತ್‌ ಕೇಂದ್ರದ 10 ಘಟಕಗಳ ಪೈಕಿ 9 ರಲ್ಲಿ ವಿದ್ಯುತ್‌ ಉತ್ಪಾದನೆ ನಡೆದಿದ್ದರೆ, ಸೂಪಾದಲ್ಲೂ ಪೂರ್ಣ ಪ್ರಮಾಣದ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಇನ್ನು ಉಷ್ಣ ವಿದ್ಯುತ್‌ ಘಟಕಗಳ ಮೇಲೂ ಈ ಒತ್ತಡ ಅನಿವಾರ್ಯವಾಗಿದೆ.

ಆದರೆ ಶಾಖೋತ್ಪನ್ನ ಘಟಕಗಳಿಗೆ ಕಲ್ಲಿದ್ದಲೂ ಪೂರೈಕೆ ಇನ್ನು ನಿಚ್ಚಳವಾಗಿಲ್ಲ. ಆರ್‌ಟಿಪಿಎಸ್‌ನಲ್ಲಿ ಕೇವಲ 70.19ಸಾವಿರ ಮೆ.ಟನ್‌ ಕಲ್ಲಿದ್ದಲು ಸಂಗ್ರವಿದೆ. ಇದು ಮೂರರಿಂದ ನಾಲ್ಕು ದಿನಗಳಿಗೆ ಮಾತ್ರ ಸಾಕಾಗುತ್ತದೆ. ವೈಟಿಪಿಎಸ್‌ನಲ್ಲಿ 43.54 ಸಾವಿರ ಮೆ.ಟನ್‌, ಬಿಟಿಪಿಎಸ್‌ ನಲ್ಲಿ 115.28ಸಾವಿರ ಮೆ.ಟನ್‌ ಕಲ್ಲಿದ್ದಲು ಸಂಗ್ರಹವಿದೆ. ಕಲ್ಲಿದ್ದಲು ಗಣಿ ಕಂಪನಿಗಳಿಂದ ಪೂರೈಕೆಯಲ್ಲಿ ಆಗುತ್ತಿರುವ ಸಮಸ್ಯೆ ನಿವಾರಣೆಗೆ ಕಳೆದ ತಿಂಗಳು ಕೆಪಿಸಿ ಅಧಿಕಾರಿಗಳು ಸಭೆ ನಡೆಸಿದ್ದರೆ, ಈ ಅವಧಿಯಲ್ಲಿ ಪೂರೈಕೆಯಲ್ಲಿ ಸುಧಾರಣೆಯಾಗಿ ನಿತ್ಯ ಐದರಿಂದ ಆರು ರೇಕುಗಳಲ್ಲಿ ಕಲ್ಲಿದ್ದಲು ದೊರೆಯುತ್ತಿತ್ತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.