PM ಮತ್ತು CM ಅವರೊಂದಿಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡ ಉನ್ನಾವೋ ಅತ್ಯಾಚಾರ ಆರೋಪಿ..

ಉನ್ನಾವೋದಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಯತ್ನದ ಆರೋಪಿ, ಸದಕ್ಕೆ ಜೈಲುವಾಸಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರು ಸ್ವಾತಂತ್ರ್ಯ ದಿನಾಚರಣೆಯ ಜಾಹೀರಾತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಹಿಂದಿ ದಿನಪತ್ರಿಕೆಯ ಸ್ಥಳೀಯ ಆವೃತ್ತಿಯ ಪೂರ್ಣ ಪುಟದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ತಿಂಗಳ ಆರಂಭದಲ್ಲಿ ಬಿಜೆಪಿಯಿಂದ ಹೊರಹಾಕಲ್ಪಟ್ಟ ಸೆಂಗಾರ್, ಉನ್ನಾವೊದಲ್ಲಿನ ಉಗೂ ಪ್ರದೇಶದ ಪಂಚಾಯತ್ ಅಧ್ಯಕ್ಷರು ಧನಸಹಾಯ ನೀಡಿದ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ಆಗಸ್ಟ್ 15 ರಂದು ರಕ್ಷಾ ಬಂಧನ್ ಹಬ್ಬದ ಸಲುವಾಗಿ ಅಲ್ಲಿನ ನಿವಾಸಿಗಳನ್ನು ಹಾರೈಸುವ ಉದ್ದೇಶದಿಂದ ಕೂಡಿದ ಜಾಹೀರಾತುಗಳಲ್ಲಿ ಸೆಂಗಾರ್ ಅವರ ಪತ್ನಿಯ ಫೋಟೋಗಳೂ ಸಹ ಇವೆ.

ಈ ಶಾಸಕನ ಮೇಲೆ ಹಲವಾರು ಆರೋಪಗಳಿವೆ. ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಕೊಲೆಯತ್ನ, ಸಾಕ್ಷ್ಯ ನಾಶ, ಆಕೆಯ ತಂದೆಯ ಕೊಲೆ, ಅಧಿಕಾರ ದುರುಪಯೋಗ ಸೇರಿ ಹಲವು ಮೊಕದ್ದಮೆಗಳು ಸಹ ದಾಖಲಾಗಿ ದೇಶದ ಗಮನಸೆಳೆದಿವೆ. ಇಂತಹ ಕುಖ್ಯಾತ ಶಾಸಕನ ಭಾವಚಿತ್ರವನ್ನು ಜಾಹಿರಾತುಗಳಲ್ಲಿ ಹಾಕುವ ಮೂಲಕ ನೀವು ಯಾವ ಸಂದೇಶವನ್ನು ನೀಡುತ್ತಿದ್ದೀರಿ ಎಂದು ಪತ್ರಕರ್ತರೊಬ್ಬರು ಜಾಹೀರಾತು ನೀಡಿದವರಿಗೆ ಪ್ರಶ್ನಿಸಿದ್ದಾರೆ.

ಜಾಹೀರಾತನ್ನು ಕೊಟ್ಟಿದ್ದ ಉಗು ಪಂಚಾಯತ್ ಅಧ್ಯಕ್ಷ ಮತ್ತು ವಕೀಲ ಅನುಜ್ ಕುಮಾರ್ ದೀಕ್ಷಿತ್, ನಾನು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧವನ್ನು ಹೊಂದಿಲ್ಲ . “ಕುಲದೀಪ್ ಸಿಂಗ್ ನಮ್ಮ ಪ್ರದೇಶದ ಶಾಸಕರಾಗಿದ್ದಾರೆ ಮತ್ತು ಆದ್ದರಿಂದ ಅವರ ಚಿತ್ರವಿದೆ. ನಾನು ಯಾವುದೇ ಪಕ್ಷವನ್ನು ಜಾಹೀರಾತಿನಲ್ಲಿ ಉಲ್ಲೇಖಿಸಿಲ್ಲ. ಅವರು ಶಾಸಕರಾಗುವವರೆಗೂ ನಾವು ಅವರ ಚಿತ್ರಗಳನ್ನು ಹಾಕುತ್ತೇವೆ” ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಕಳೆದ ವಾರ ದೆಹಲಿ ನ್ಯಾಯಾಲಯವು ಸೆಂಗಾರ್ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಆರೋಪಗಳನ್ನು ರೂಪಿಸಿತ್ತು. ಸಂತ್ರಸ್ತೆಯ ತಂದೆಯ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲೂ ಆತನನ್ನು ಆರೋಪಿಯನ್ನಾಗಿಸಿದ್ದು ಎಲ್ಲಾ ಪ್ರಕರಣಗಳನ್ನು ಉತ್ತರ ಪ್ರದೇಶದಿಂದ ದೆಹಲಿ ಕೋರ್ಟ್ ಗೆ ವರ್ಗಾಹಿಸಿದೆ ಮತ್ತು ಪ್ರತಿದಿನವೂ ವಿಚಾರಣೆ ನಡೆಸುತ್ತಿದೆ.

ಉನ್ನಾವೋ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರಿಗೆ ಕಳೆದ ತಿಂಗಳು ಮಾರಣಾಂತಿಕ ಅಪಘಾತ ನಡೆದ ನಂತರ ಅದು ಸಹ ಈ ಶಾಸಕನ ಪಿತೂರಿ ಎಂದು ಈತನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಪ್ರಸ್ತುತ ಅವರನ್ನು ದೆಹಲಿ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.

ಬಹಳಷ್ಟು ದೇಶಗಳಲ್ಲಿ ಜನರಿಗೆ ಕೇವಲ ಸ್ವಾತಂತ್ರ್ಯವಲ್ಲ ಸ್ವೇಚ್ಛಾಚಾರಕ್ಕೂ ಅವಕಾಶವಿದೆ. ಆದರೆ ಅಲ್ಲಿ ಸಾರ್ವಜನಿಕ ಜೀವನದಲ್ಲಿರುವ ಆಳುವವರು, ಜನಪ್ರತಿನಿಧಿಗಳು ಮಾತ್ರ ಬಹಳ ಚಾರತ್ರ್ಯವಂತರಾಗಿ ನಡೆದುಕೊಳ್ಳಬೇಕಿರುತ್ತದೆ. ಯಾವುದೇ ಒಂದು ಸಣ್ಣ ಆರೋಪ ಕೇಳಿಬಂದರೂ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.

ಅದರೆ ನಮ್ಮ ದೇಶದಲ್ಲಿ ಇಂತಹ ನಡೆತೆಗೆಟ್ಟ, ಮಾನಗೆಟ್ಟ ಶಾಸಕರು ಸಿಗುತ್ತಾರೆ ಮಾತ್ರವಲ್ಲ ಅವರ ಭಾವಚಿತ್ರ ನಮ್ಮ ಮನೆಗೆ ತಲುಪುವ ದಿನಪತ್ರಿಕೆ ಮುಖಪುಟದಲ್ಲಿ ದೊಡ್ಡದಾಗಿ ಮಿಂಚುತ್ತಿರುತ್ತದೆ!!! ಈಗ ಹೇಳಿ ಇದು ಭಾರತದಲ್ಲಿ ಮಾತ್ರ ಸಾಧ್ಯ ಅಲ್ಲವೇ?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.