ವಿಶ್ವಕಪ್ ಬಳಿಕ ಎಂಎಸ್ ಡಿ ನಿವೃತ್ತಿ  ಊಹಾಪೋಹ; ಎಂಎಸ್ ಕೆ ಸ್ಪಷ್ಟನೆ 

ಕಳೆದೊಂದೂವರೆ ದಶಕದಿಂದ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿರುವ ಅದ್ಭುತ ಪ್ರತಿಭೆ ಮಹೇಂದ್ರ ಸಿಂಗ್ ಧೋನಿ 2019ರ ಐಸಿಸಿ ವಿಶ್ವಕಪ್ ಬಳಿಕ ಬ್ಯಾಟ್, ಗ್ಲೌಸ್ ಕಳಚಿಡಲಿದ್ದಾರಾ? ಕಳೆದ ನಾಲ್ಕು ವರ್ಷಗಳಿಂದ ಈ ಪ್ರಶ್ನೆ ಪ್ರತಿದಿನ ಎದ್ದಿದ್ದರೂ ತನ್ನ ಬ್ಯಾಟಿನಿಂದಲೇ ಎಲ್ಲದಕ್ಕೂ ಉತ್ತರ ಕೊಡುತ್ತಾ ಬಂದಿರುವ ಧೋನಿ ವಯಸ್ಸು 37 ಆದರೂ ಇನ್ನೂ ಹಳೇ ಖದರು ಉಳಿಸಿಕೊಂಡಿದ್ದಾರೆ.
ಇತ್ತೀಚೆಗೆ ಆಸ್ಟ್ರೇಲಿಯಾ ಹಾಗೂ ನ್ಯೂಝಿಲ್ಯಾಂಡ್ ಗಳಲ್ಲಿ ಅವರು ಒತ್ತಡದ ಸಂದರ್ಭವನ್ನು ನಿಭಾಯಿಸಿದ ಪರಿಯೇ ಅದಕ್ಕೆ ಸಾಕ್ಷಿ. ಇನ್ನು ತಜ್ಞ ಕೀಪರ್ ಗಳಾದ ದಿನೇಶ್ ಕಾರ್ತಿಕ್, ರಿಷಬ್ ಪಂತ್ ಏಕದಿನ, ಟಿ20ಗಳೆರಡಲ್ಲೂ ಬ್ಯಾಟಿಂಗಿನಿಂದಲೇ ತಂಡದೊಳಗೆ ಸ್ಥಾನ ಗಿಟ್ಟಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದಾದಲ್ಲಿ ಧೋನಿ ಕೀಪಿಂಗ್ ಬಗ್ಗೆ ಹೇಳಬೇಕಾದ ಅಗತ್ಯವೇ ಇಲ್ಲ ಅಲ್ವ?
ಹಾಗಿದ್ರೂ ವಯೋ ಸಹಜ ನಿವೃತ್ತಿಯ ಮಾತು ಎದ್ದಿರುವುದು ಸಹಜವೇ. ಆಯ್ಕೆ ಮಂಡಳಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ಈ ಮಾತನ್ನು ನಿರಾಕರಿಸಿದ್ದಾರೆ. ನಾವೀಗ ಧೋನಿಯ ನಿವೃತ್ತಿಯ ಬಗ್ಗೆ ಯೋಚಿಸುತ್ತಿಲ್ಲ. ಮುಂದಿನ ವಿಶ್ವಕಪ್ ಗೆ ತಂಡ ಕಟ್ಟುವ ಬಗ್ಗೆಯಷ್ಟೇ ಪ್ಲಾನ್ ರೆಡಿ ಮಾಡುತ್ತಿದ್ದೇವೆ. ಸದ್ಯ ಧೋನಿಯ ಬ್ಯಾಟಿನಿಂದ ರನ್ ಗಳು ಹರಿದು ಬರುತ್ತಿವೆ. ಮುಂದಿನ ವಿಶ್ವಕಪ್ ಗೂ ಮೊದಲೇ ನಡೆಯಲಿರುವ ಐಪಿಎಲ್ ಪಂದ್ಯಗಳಲ್ಲೂ ಅವರು ಆಡಲಿರುವುದರಿಂದ ಅವರ ಬ್ಯಾಟಿಂಗ್ ಕ್ಷಮತೆಯನ್ನು ಕಾಯ್ದುಕೊಳ್ಳಲು ಅವಕಾಶವಿದೆ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ಸದ್ಯದ ಮಟ್ಟಿಗೆ ತೆರೆ ಎಳೆದಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.