#ಮಿಟೂ: ಕರ್ನಾಟಕ ಬಿಜೆಪಿ ಮಾಜಿ ಸಚಿವನ ಮೇಲೆ ಲೈಂಗಿಕ ಕಿರುಕುಳ ಆರೋಪ

ಕರ್ನಾಟಕ ರಾಜ್ಯ ರಾಜಕಾರಣಕ್ಕೂ #ಮಿಟೂ ಬಿಸಿ ತಟ್ಟಿದ್ದು ಬಿಜೆಪಿಯ ಮತ್ತು ಆರ್‌ಎಸ್‌ಎಸ್‌ನಲ್ಲಿ ಗುರುತಿಸಿಕೊಂಡ ಮುಖಂಡ ಹಾಗೂ ಮಾಜಿ ಮಂತ್ರಿ ಒಬ್ಬರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಲಾಗಿದೆ. ಬಾಗಲಕೋಟೆ ಮೂಲದ ಮಹಿಳೆ ಒಬ್ಬರು ಬಿಜೆಪಿ ಮಾಜಿ ಸಚಿವರೊಬ್ಬರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ ಜೊತೆಗೆ ಆರ್‌ಎಸ್‌ಎಸ್‌ ಮುಖಂಡರೆನಿಸಿಕೊಂಡವರು ತಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡ ಬಗ್ಗೆಯೂ ಬರೆದುಕೊಂಡಿದ್ದಾರೆ.

ಒಟ್ಟು ಮೂರು ಪ್ರಕರಣಗಳ ಬಗ್ಗೆ ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದ ಅವರು, ಆ ನಂತರ ಅವುಗಳನ್ನು ಡಿಲೀಟ್ ಮಾಡಿದ್ದಾರೆ ಆದರೆ ಅದರ ಸ್ಕ್ರೀನ್‌ ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮಾಜಿ ಸಚಿವರೊಬ್ಬರು ತಮ್ಮ ಮೊಬೈಲ್‌ ಸಂಖ್ಯೆ ಪಡೆದು ಐಶಾರಾಮಿ ಹೊಟೆಲ್‌ಗೆ ಕರೆದು, ಅಲ್ಲಿ ರೂಮ್‌ ಬುಕ್‌ ಮಾಡುತ್ತೇನೆ ಎಂದಿದ್ದರು ಎಂದು ಸಹ ಆ ಮಹಿಳೆ ಬರೆದಿದ್ದಾರೆ. ತಾವು ಪ್ರತಿಭಟಿಸಿ ಅಲ್ಲಿಂದ ಹೊರಟಾಗ 50 ಸಾವಿರ ರೂಪಾಯಿಯನ್ನು ತನ್ನ ಬ್ಯಾಗಿಗೆ ಆ ಮಾಜಿ ಸಚಿವ ಹಾಕಿದ್ದರು ಎಂದು ಸಹ ಅವರು ಬರೆದುಕೊಂಡಿದ್ದಾರೆ. #ಮಿಟೂ ಅಡಿಯಲ್ಲಿ ಆರೋಪ ಮಾಡುತ್ತಿರುವ ಮಹಿಳೆ ಬಿಜೆಪಿಯ ಸಕ್ರಿಯ ಸದಸ್ಯರು ಎನ್ನಲಾಗಿದೆ. ಹಲವು ಬಿಜೆಪಿ ಸಭೆ ಮತ್ತು ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾರೆ. ಯಡಿಯೂರಪ್ಪ ಅವರಿಗೆ ಸಿಎಂ ಸ್ಥಾನ ಸಿಗದೇ ಹೋದಾಗ ಬಿಜೆಪಿ ನಡೆಸಿದ್ದ ಪ್ರತಿಭಟನೆ ಸಮಯದಲ್ಲಿ ನಡೆದ ಕೆಟ್ಟ ಘಟನೆ ಬಗ್ಗೆಯೂ ಅವರು ಬರೆದುಕೊಂಡಿದ್ದು, ಬಿಜೆಪಿಯ ಇಬ್ಬರು ಪ್ರಮುಖರು ಬೇಕೆಂದೇ ನನ್ನನ್ನು ಕೆಟ್ಟದಾಗಿ ಮುಟ್ಟಿದರು ಎಂದು ಹೇಳಿದ್ದಾರೆ. ಈ ಆರೋಪಗಳನ್ನು ಮಾಡಿದ ಕೆಲವೇ ನಿಮಿಷಗಳನ್ನು ಅವರು ಅದನ್ನು ತಮ್ಮ ಫೇಸ್‌ಬುಕ್‌ ಖಾತೆಯಿಂದ ಅಳಿಸಿಹಾಕಿದ್ದಾರೆ. ಮಾಧ್ಯಮಗಳು ನನಗೆ ಕಿರುಕುಳ ನೀಡುತ್ತಿವೆ, ನಾನು ಹೇಳದ ಹೆಸರುಗಳನ್ನು ಅವರು ಸುದ್ದಿಗಳಲ್ಲಿ ಉಲ್ಲೇಖಿಸುತ್ತಿದ್ದಾರೆ ಹಾಗಾಗಿ ನಾನು ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.