‘ನನ್ನನ್ನು ಅರೆಹುಚ್ಚ ಎಂದ ಎಂ.ಬಿ.ಪಾಟೀಲ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ’

ನನ್ನನ್ನು ಅರೆಹುಚ್ಚ ಎನ್ನುತ್ತಿರುವ ಗೃಹಸಚಿವ ಎಂ.ಬಿ.ಪಾಟೀಲ್ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಕೂಡಲೇ ಅವರು ಹುಚ್ಚಾಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು ಎಂದು ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ತಿರುಗೇಟು ನೀಡಿದ್ದಾರೆ.

ಜಿಲ್ಲೆಯ ಮುದ್ದೇಬಿಹಾಳದಲ್ಲಿ ಮಾತನಾಡಿದ ಶಾಸಕರು, ಎಂ.ಬಿ.ಪಾಟೀಲ್ ಮಾನಸಿಕ ಅಸ್ವಸ್ಥರಾಗಿದ್ದಾರೆ. ಹೀಗಾಗಿ ರಾಜ್ಯದ ಗೃಹಮಂತ್ರಿ ಹುದ್ದೆ ನಿರ್ವಹಿಸುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ. ಚಿಕಿತ್ಸೆ ಪಡೆಯುವವರೆಗೂ ಅವರು ಗೃಹಸಚಿವರಾಗಿ ಕಾರ್ಯನಿರ್ವಹಿಸಬಾರದು ಎಂದು ವಾಗ್ದಾಳಿ ನಡೆಸಿದರು.

ನನ್ನ ಯೋಗ್ಯತೆ ಏನು ಅಂತ ಜಿಲ್ಲೆಯ ಜನತೆಗೆ ಗೊತ್ತಿದೆ. ಎಂ.ಬಿ.ಪಾಟೀಲ್ ಹೇಳಿಕೆಯೇ ಅವರ ಯೋಗ್ಯತೆ ಏನು ಎನ್ನುವುದನ್ನು ತೋರಿಸಿಕೊಡುತ್ತದೆ. ನಾನು 3 ಬಾರಿ ಸ್ವಸಾಮರ್ಥ್ಯದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನೀವು ಅಪ್ಪ ನೆಟ್ಟ ರಾಜಕೀಯ ಆಲದ ಮರದ ಆಶ್ರಯದಲ್ಲಿ ಶಾಸಕರಾಗಿ, ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೀರಿ. ಸ್ವಂತ ಶಕ್ತಿಯ ಮೇಲೆ ನೀವು ಆಯ್ಕೆಯಾಗಿಲ್ಲ ಎಂದು ದೂರಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀವು ಗೆದ್ದಿರುವ ರೀತಿಯೇ ಸಂಶಯಾಸ್ಪದ. ಇದಕ್ಕೆ ನಿಮ್ಮ ಎದುರು ಬಬಲೇಶ್ವರ ಮತಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಅವರೇ ಸಾಕ್ಷಿ. ನಿಮ್ಮ ಕ್ಷೇತ್ರದಲ್ಲಿ ವಿದ್ಯುನ್ಮಾನ ಮತ ಯಂತ್ರ  ಸಿಕ್ಕಿದ್ದು ಉದಾಹರಣೆ. ನಿಮ್ಮ ಯೋಗ್ಯತೆ ಏನು ಅನ್ನೋದು, ವಿಜಯಪುರ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದ ಜನತೆಗೆ ಗೊತ್ತಿದೆ ಎಂದು ಹೇಳಿದರು.

ವಿಜಯಪುರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ನಿಮ್ಮ ಹಿಂಬಾಲಕರು ಗಲಾಟೆ ನಡೆಸಿದರು. ಗಲಾಟೆ ಮಾಡಿದವರು ನನ್ನ ಹಿಂಬಾಲಕರು ಅಲ್ಲ ಅಂತ ಹೇಳಲಿಕ್ಕೆ ಆಗಲ್ಲ ಎಂದು ನೀವು ಹೇಳಿಕೆ ನೀಡಿದ್ದೀರಿ. ಹೀಗಾಗಿ ಅವರು ನಿಮ್ಮ ಹಿಂಬಾಲಕರು ಎನ್ನುವುದನ್ನು ಒಪ್ಪಿಕೊಂಡಿದ್ದೀರಿ. ರಾಜ್ಯದ ಗೃಹಸಚಿವರಾಗಿ ಹಿಂಬಾಲಕರನ್ನು ಛೂ ಬಿಟ್ಟು ವಿಪಕ್ಷದ ಶಾಸಕರೊಬ್ಬರ ವಿರುದ್ಧ ಗಲಾಟೆ ನಡೆವುದು ಸರಿಯೇ ಎಂದು ಶಾಸಕರು, ಎಂ.ಬಿ.ಪಾಟೀಲ್ ಅವರಿಗೆ ಪ್ರಶ್ನಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.