ರಾಯಚೂರಿನ ಮೃತ ವಿದ್ಯಾರ್ಥಿನಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಬೃಹತ್ ಪ್ರತಿಭಟನೆ

ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ವಿರೋಧಿಸಿ, ತಪ್ಪಿಕಸ್ಥರ ವಿರುದ್ಧ ಶಿಕ್ಷೆಗೆ ಆಗ್ರಹಿಸಿ ಇಂದು ರಾಯಚೂರಿನಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತಿದ್ದಾರೆ ನಾನಾ ಕಾಲೇಜ್ ವಿದ್ಯಾರ್ಥಿಗಳು.

ಮಾಣಿಕಪ್ರಭು ದೇವಸ್ಥಾನದಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಬೇರೆ ಬೇರೆ ಸಂಘಟನೆಗಳು ಸಾಥ್ ನೀಡಿದ್ದಾರೆ.

ತನಿಖೆ ಕೈಗೊಂಡಿರುವ ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ ಮೆಂಟ್ (ಸಿಐಡಿ) ತಂಡಕ್ಕೆ ಆ ಪ್ರದೇಶದ “ಪ್ರಭಾವಿ ಕುಟುಂಬ”ದವರೆನ್ನಲಾದ ಇನ್ನೋರ್ವ ಪುರುಷನ ಸಂಬಂಧದ ಸುಳಿವು ದೊರಕಿದೆ.ಈ ಪ್ರಭಾವಿ ಕುಟುಂಬದ ವ್ಯಕ್ತಿ ಇದೀಗ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯ ಜತೆಗೆ ಕೃತ್ಯದಲ್ಲಿ ಭಾಗಿಯಾಗಿದ್ದನೆನ್ನಲಾಗಿದೆ.ಇನ್ನು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತೆ, ಅತ್ಯಾಚಾರ ಹಾಗೂ ಹತ್ಯೆಯಲ್ಲಿ ಇನ್ನಷ್ಟು ಆರೋಪಿಗಳು ಶಾಮೀಲಾಗಿದ್ದರೆ ಎನ್ನುವ ಕುರಿತು ಸಹ ಸಿಐಡಿ ತಂಡ ತನಿಖೆ ಕೈಗೊಂಡಿದೆ.

ವಿದ್ಯಾರ್ಥಿನಿ ಮೃತದೇಹವು ಅರ್ಧ ಸುಟ್ಟಿದ್ದು ಕೊಳೆತ ಸ್ಥಿತಿಯಲ್ಲಿ ರಾಯಚೂರು ದೇವಾಲಯವೊಂದರ ಸಮೀಪದ ಮೈದಾನದಲ್ಲಿ ಮರವೊಂದಕ್ಕೆ ನೇಣು ಬಿಗಿದಂತೆ ಪತ್ತೆಯಾಗಿತ್ತು. “ವಿದ್ಯಾರ್ಥಿನಿಯ ಮೊಬೈಲ್ ನಿಂದ ಅದೇ ಪ್ರದೇಶದ ಇನ್ನೊಬ್ಬ ವ್ಯಕ್ತಿಗೆ ಟೆಕ್ಸ್ಟ್ ಸಂದೇಶ ರವಾನಿಸಿರುವುದನ್ನು ನಾವು ಪತ್ತೆ ಮಾಡಿದ್ದೇವೆ. ಆರೋಪಿ ಸುದರ್ಶನ್ ಯಾದವ್ ಇತರೆ ಮೂವರು ವ್ಯಕ್ತಿಗಳೊಡನೆ ಆ ದುರಂತದ ಘಟನೆ ನಡೆದ ದಿನ ಸ್ಥಳದಲ್ಲಿದ್ದ ಎನ್ನುವುದು ನಮಗೆ ಅರಿವಿಗೆ ಬಂದಿದೆ. ನಾವೀಗ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು ಅದರಲ್ಲಿ ಇತರ ಮೂವರ ಗುರುತು ಪತ್ತೆಯಾಗಲಿದೆ, ಇವರಲ್ಲಿ ಓರ್ವ ವ್ಯಕ್ತಿ ಸ್ಥಳೀಯ ಶ್ರೀಮಂತ, ಪ್ರಭಾವಶಾಲಿ ಕುಟುಂಬಕ್ಕೆ ಸೇರಿದವರೆನ್ನಲಾಗಿದೆ.”ತನಿಖಾಧಿಕಾರಿಗಳ ಪೈಕಿ ಒಬ್ಬ ಅಧಿಕಾರಿ ವಿವರಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.