Maharashtrsa election : ಮಹಾರಾಷ್ಟ್ರದ ಶಾಸನಾಸಭಾ ಚುನಾವಣೆಗಾಗಿ ತೀವ್ರ ಪೈಪೋಟಿ

ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷಕ್ಕಿರುವ ಹೊಸ ಅವಕಾಶವೇನು?

ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳು ಮಹಾರಾಷ್ಟ್ರದ ಚುನಾವಣಾ ಪ್ರಚಾರಗಳನ್ನು ಆ ರಾಜ್ಯದ ಸಾಮಾಜಿಕ ಸಾಂಸ್ಕೃತಿಕ ನೆಲೆಗಳ ಮೇಲೆ ನಿಲ್ಲುವಂತೆ ಮಾಡಿದೆ.

ಅಕ್ಟೋಬರ್ ೨೧ರಂದು ನಡೆಯಲಿರುವ ಮಹಾರಾಷ್ಟ್ರದ ಶಾಸನಾಸಭಾ ಚುನಾವಣೆಗಾಗಿ ನಡೆಯುತ್ತಿರುವ ಪ್ರಚಾರಗಳು ತೀವ್ರಗತಿಯನ್ನು ಪಡೆದುಕೊಳ್ಳುತ್ತಿವೆ. ಆದರೆ ಕಳೆದೆರಡು ವಾರಗಳಲ್ಲಿ ನಡೆದಿರುವ ಬೆಳವಣಿಗೆಗಳು ಮಾತ್ರ ಚುನಾವಣಾ ಕಣದಲ್ಲಿ ಅನಿಶ್ಚತತೆಯನ್ನು ಹುಟ್ಟುಹಾಕಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಯ ಮುಖ್ಯಸ್ಥರಾದ ಶರದ್ ಪವಾರ್ ಅವರಿಗೆ ಜಾರಿ ನಿರ್ದೇಶನಾಲಯವು ನೋಟಿಸು ಕಳಿಸಿರುವುದು ಮತ್ತು ಈ ಬೆಳವಣಿಗೆಯನ್ನು ಸೇಡಿನ ರಾಜಕಾರಣವೆಂದು ಬಿಂಬಿಸಿ ಜನರ ಅಸಮಾಧಾನವನ್ನು ಕ್ರೂಡೀಕರಿಸುವಲ್ಲಿ ಯಶಸ್ವಿಯಾಗುತ್ತಿರುವ ಶರದ್ ಪವಾರರ ಪ್ರತಿಕ್ರಿಯೆಗಳು ಖಂಡಿತವಾಗಿ ಆಳುವ ಸರ್ಕಾರಕ್ಕೆ ವ್ಯತಿರಿಕ್ತವಾಗಿ ಪರಿಣಮಿಸಿದೆ. ಆದರೆ ಇದಕ್ಕೆ ಮುಂಚೆಯೂ ಸಹ ಎನ್‌ಸಿಪಿಯ ಅಧ್ಯಕ್ಷರು ನಡೆಸಿದ ನಿರಂತರ ಪ್ರಚಾರಗಳು ಮತ್ತು ಚತುರತೆಯಿಂದ ನೀಡಿದ ರಾಜಕೀಯ ಸಂದೇಶಗಳು ಬಿಜೆಪಿ-ಶಿವಸೇನಾ ಕೂಟದ ಲೆಕ್ಕಾಚರಗಳನ್ನು ತಲೆಕೆಳಗಾಗುವಂತೆ ಮಾಡಿವೆ. ಈ ಪ್ರಚಾರಗಳು ಮತ್ತು ರಾಜಕೀಯ ಸಂದೇಶಗಳು ಒಂದು ಜನವರ್ಗದಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಗ್ರಾಮಿಣ ಯುವಜನತೆಯಲ್ಲಿ ಪ್ರತಿಸ್ಪಂದನೆಯನ್ನು ಪಡೆದುಕೊಳ್ಳುತ್ತಿರಲು ಕಾರಣವೇನು?

ಸ್ಥೂಲವಾಗಿ ಹೇಳುವುದಾದರೆ ಚುನಾವಣಾ ಚರ್ಚೆಗಳಲ್ಲಿ ಸಂಭವಿಸುತ್ತಿರುವ ಬದಲಾವಣೆಗಳು ಮತ್ತು ಸಂಯೋಜನೆಗಳೇ ಈ ಬೆಳವಣಿಗೆಗೆ ಕಾರಣ. ಬಿಜೆಪಿ-ಶಿವಸೇನಾ ಕೂಟವು ಬಹುಮಾಡಿ ನರೇಂದ್ರ ಮೋದಿಯವರನ್ನೂ, ಆರ್ಟಿಕಲ್ ೩೭೦ರ ರದ್ಧತಿಯನ್ನೂ ಮತ್ತು ಶಿವಸೇನಾವು ಬಿಜೆಪಿಯ ಹಿಂದೂತ್ವ ಅಜೆಂಡಾವನ್ನು ನಾಚಿಸುವಂತೆ ಅಯೋಧ್ಯಾ ವಿಷಯಗಳನ್ನು ಆಧರಿಸಿವೆ. ಅಮಿತ್ ಶಾ ಹಾಗೂ ಮತ್ತಿತರ ಬಿಜೆಪಿಯ ಹಿರಿಯ ನಾಯಕರುಗಳು ಮಹಾರಾಷ್ಟ್ರದಲ್ಲೇ ಬೀಡುಬಿಟ್ಟು ಆರ್ಟಿಕಲ್ ೩೭೦ರ ಸುತ್ತಾ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ಮೋದಿಯವರು  ಶರದ್ ಪವಾರ್ ಮಾಡಿದ ಹೇಳಿಕೆಯೊಂದನ್ನು ತಿರುಚಿ ಅವರು ಪಾಕಿಸ್ತಾನದ ಪರ ವಾಗಿದ್ದಾರೆಂಬ ದಾಳಿಯನ್ನೂ ಸಹ ನಡೆಸಿದ್ದರು. ಇವೆಲ್ಲವೂ ಬಿಜೆಪಿಯು ತನ್ನ ಪ್ರಚಾರವನ್ನು ಮಹಾರಾಷ್ಟ್ರಕ್ಕೆ ನಿರ್ದಿಷ್ಟವಾದ ವಿಷಯಗನ್ನು ಮೀರಿದ ಆಕ್ರಮಣಕಾರಿ ರಾಷ್ಟ್ರೀಯವಾದದ ಮೇಲೆ ನೆಲೆ ನಿಂತು ನಡೆಸಲು ತೀರ್ಮಾನಿಸಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇಂಥಾ ಅಜೆಂಡಾಗಳು ಸಾಕಷ್ಟು ಸಂಖ್ಯೆಯ ಜನರನ್ನು ಆಕರ್ಷಿಸುತ್ತಿರುವಾಗ ಅದನ್ನು ಪರಿಣಾಮಕಾರಿಯಾಗಿ ಎದುರಿಸಬೇಕೆಂದರೆ ಮಹಾರಾಷ್ಟ್ರದ ವಾಸ್ತವಗಳಿಗೆ, ಮಹಾರಾಷ್ಟ್ರದ ಮಣ್ಣಿಗೆ ಸಮೀಪವಾದ ವಿಷಯಗಳಿಗೆ ಮರಳದೆ ಗತ್ಯಂತರವಿರಲಿಲ್ಲವೆಂದೇ ಹೇಳಬೇಕು. ಪವಾರ್ ಅವರ ಚುನಾವಣಾ ಪ್ರಚಾರಗಳನ್ನು ತ್ತಿರದಿಂದ  ಗಮನಿಸಿದರೆ ಅದನ್ನು ಹಲವಾರು ರೀತಿಗಳಲ್ಲಿ ಸೂಕ್ಷ್ಮ ಹಾಗೂ ಪರೋಕ್ಷ ರೀತಿಗಳಲ್ಲಿ ಮಾಡಿದ್ದಾರೆಂಬುದು ಅರ್ಥವಾಗುತ್ತದೆ.

ಮೇಲ್ನೋಟಕ್ಕೆ ನೋಡುವುದಾದರೆ ಪವಾರ್ ಮಾಡುತ್ತಿರುವ ಭಾಷಣಗಳು ಕೃಷಿ ಮತ್ತು ಗ್ರಾಮೀಣ ಬಿಕ್ಕಟ್ಟು, ನಿರುದ್ಯೋಗ ಮತ್ತು ಸರ್ಕಾರಗಳ ಸಂವೇದನಾರಹಿತ ಮತ್ತು ಅರೆಬರೆ ಪ್ರತಿಸ್ಪಂದನೆಗಳ ಬಗೆಗಿನ ಮಾತುಗಳ ಪುನರುಚ್ಚರಣೆಯೇ ಆಗಿದೆ. ಆದರೆ ಪವಾರ್ ಅವರು ಮಾಡುತ್ತಿರುವ ಭಾಷಣದ ಹೆಚ್ಚುಗಾರಿಕೆಯೇನೆಂದರೆ ಆ ಸಮಸ್ಯೆಗಳನ್ನು ಅವರು ಮಹಾರಾಷ್ಟ್ರದ ಈವರೆಗೆ ಬಗೆಹರಿಯದ ಸಾಮಾಜಿಕ-ಸಾಂಸ್ಕೃತಿಕ ಸಂಘರ್ಷಗಳ ಇತಿಹಾಸದ ಮುಂದುವರೆಕೆಯೆಂಬಂತೆ ಬೆಸುಗೆ ಹಾಕುತ್ತಿರುವುದು. ಉದಾಹರಣೆಗೆ ಮಹಾರಾಷ್ಟ್ರವನ್ನು ಆಳಿದ ಪೇಶ್ವೆಗಳಲ್ಲಿ ಅತ್ಯಂತ ಭ್ರಷ್ಟ ಆಡಳಿತಗಾರನಾಗಿದ್ದ ನಾನಾ ಫಡ್ನವೀಸನ ಆಳ್ವಿಕೆಯನ್ನು ಹಾಲಿ ಮುಖ್ಯಮಂತ್ರಿಯಾದ ಫಡ್ನವೀಸರ ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ಮಹಾರಾಷ್ಟ್ರವು ಎದುರಿಸುತ್ತಿರುವ ಕೃಷಿ ಬಿಕ್ಕಟ್ಟಿನ ಬಗ್ಗೆ ಹಾಗೂ ನೆರೆ ಹಾಗೂ ಬರಗಳ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯಗಳ ಬಗ್ಗೆ ಮಾತನಾಡುವಾಗ ನೆನಪು ಮಾಡುತ್ತಿರುವುದು ಜನರ ಮೇಲೆ ಪ್ರಭಾವ ಬೀರುತ್ತಿದೆ. ಅಲ್ಲದೆ ಆಳುವ ಸರ್ಕಾರವು ಮಾಡುತ್ತಿರುವ ಪ್ರಚಾರಗಳಲ್ಲಿ ತನ್ನದೇ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪವನ್ನು ಮಾಡದಿರುವುದೂ ಸಹ ಟೀಕೆಗೆ ಗ್ರಾಸವಾಗುತ್ತಿದೆ. ಹಾಲಿ ಸರ್ಕಾರವನ್ನು ನಡೆಸುತ್ತಿರುವವರಿಗೆ ಕೃಷಿ ಅಥವಾ ಗ್ರಾಮೀಣ ಬದುಕಿನ ಬಗ್ಗೆಯಾಗಲೀ ಮತ್ತು ಜನರ ಸಂಕಷ್ಟಗಳ ಬಗ್ಗೆಯಾಗಲೀ ಅರಿವೇ ಇಲ್ಲದಿರುವುದರಿಂದ ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡುವುದು ಜನರನ್ನು ಆಕರ್ಷಿಸುತ್ತಿದೆ. ರಾಜ್ಯವು ಪ್ರವಾಹಪೀಡಿತವಾಗಿದ್ದಾಗಲೂ ಸರ್ಕಾರವು ಪರಿಹಾರ ಕ್ರಮಗಳ ಬಗ್ಗೆ ಬೇಜವಬ್ದಾರಿ ತೋರುತ್ತಾ ಚುನಾವಣಾ ಪ್ರಚಾರವನ್ನು ಮುಂದುವರೆಸಿದೆ. ಆದರೆ ವಿರೋಧ ಪಕ್ಷಗಳು ಮಾತ್ರ ಆಯಾ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದೂ ಸಹ ಈ ಅಭಿಪ್ರಾಯಕ್ಕೆ ಇಂಬುಗೊಟ್ಟಿದೆ. ವಿರೋಧ ಪಕ್ಷಗಳ ನಾಯಕರುಗಳು  ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ-ಶಿವಸೇನಾಗಳನ್ನು ಸೇರುತ್ತಿದ್ದಾರೆ. ಆದರೆ ಇದನ್ನು ತಮ್ಮ ನಂಬಿಕೆ ಬದ್ಧರಾಗಿ ನಡೆದುಕೊಂಡ ಶಿವಾಜಿ ಮಹಾರಾಜರ ಪರಂಪರೆಗೆ ವಿರುದ್ಧವಾದುದೆಂದು ಬಣ್ಣಿಸಲು ವಿರೋಧ ಪಕ್ಷಗಳಿಗೆ ಸಾಧ್ಯವಾಗಿದೆ. ಅಷ್ಟು ಮಾತ್ರವಲ್ಲ, ಈ ನಿಲುವುಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಬೇರೆ ಪಕ್ಷಗಳಿಗೆ ವಲಸೆ ಹೋಗದೆ ಪ್ರಾಮಾಣಿಕವಾಗಿ ಪಕ್ಷದಲ್ಲೇ ಉಳಿದ ಕಾರ್ಯಕರ್ತರನ್ನು ಹುರಿದುಂಬಿಸಿ ಸಧೃಡೀಕರಿಸಿಕೊಳ್ಳಲೂ ಸಾಧ್ಯವಾಗಿದೆ. ಛತ್ರಪತಿ ಶಿವಾಜಿಯವರ ಮಗನಾದ ಸಾಂಭಾಜಿ ರಾಜೆಯವರನ್ನು ಮಹಾರಾಷ್ಟ್ರದ ಕುಲೀನ ವರ್ಗಕ್ಕೆ ಸೇರಿದ ವರ್ಗಗಳೇ ಕುಟಿಲತನದಿಂದ ದ್ರೋಹ ಬಗೆದ ಇತಿಹಾಸವೂ ಸಹ ವಿರೋಧ ಪಕ್ಷಗಳಿಗೆ ಪೂರಕವಾಗುತ್ತಿದೆ. ಅದರಲ್ಲೂ ಸಾಂಭಾಜಿ ರಾಜೆಯ ಪಾತ್ರವಹಿಸಿದ್ದ ಜನಪ್ರಿಯ ನಟ ಎನ್‌ಸಿಪಿ ಪಕ್ಷದ ಸಂಸದರಾಗಿದ್ದು ಚುನಾವಣಾ ಪ್ರಚಾರಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಿರುವುದೂ ಸಹ ಮತ್ತಷ್ಟು ಪೂರಕವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ಥಾಪಿತಗೊಂಡಿದ್ದ ಹಳೆಯ ನಾಯಕರುಗಳನ್ನು ಕಿತ್ತುಹಾಕಿರುವುದು ಜನರಿಗೆ ಅತ್ಯುನ್ನತ ನಾಯಕರೊಂದಿಗೆ ನೇರ ಸಂಬಂಧಗಳನ್ನು ಸ್ಥಾಪಿಸಿಕೊಳ್ಳಲು ಸಹಾಯ ಮಾಡಿದೆ. ಇದು ಶರದ್ ಪವಾರರ ಚುನಾವಣಾ ರ್‍ಯಾಲಿಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಗ್ರಾಮೀಣ ಯುವಜನರು ಪಾಲ್ಗೊಳ್ಳುತ್ತಿರುವುದರಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತಗೊಳ್ಳುತ್ತಿದೆ.

ಇನ್ನಷ್ಟು ಅಳವಾಗಿ ಗಮನಿಸಿದಲ್ಲಿ ಗ್ರಾಮೀಣ ಯುವಕರಲ್ಲಿರುವ ಅಸಮಾಧಾನ ಮತ್ತು ಮರಾಠಾ ಸಮುದಾಯವು ಎದುರಿಸುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪರಾಯೀಕರಣದಿಂದಾಗಿಯೂ ಈ ಪ್ರತಿಸ್ಪಂದನೆಗಳು ಹುಟ್ಟಿಬರುತ್ತಿವೆ. ಈ ವಿದ್ಯಮಾನಗಳು ಎಲ್ಲಕ್ಕಿಂತಲೂ ಹೆಚ್ಚಾಗಿ ಮರಾಠಾ ಸಮುದಾಯದ ಸಣ್ಣ ರೈತಾಪಿ ಮತ್ತು ಶ್ರಮಜೀವಿ ವರ್ಗಗಳನ್ನು ಪ್ರಭಾವಿಸಿದೆ. ಮಹಾರಾಷ್ಟ್ರದ ಆಧುನಿಕ ಇತಿಹಾಸದಲ್ಲಿ ಮರಾಠಾ ಸಮುದಾಯದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಚಲನೆಯ ದಿಕ್ಕುಗಳು ಸಾರ್ವಜನಿಕ ಜೀವನದ ನಡಿಗೆಯ ದಿಕ್ಕನ್ನೂ ಪ್ರಭಾವಿಸಿದೆ. ಮತ್ತು ಸಮಾಜದಲ್ಲಿ ಪ್ರಮಾಣಾತ್ಮಕವಾಗಿ ಪ್ರಧಾನವಾದ ಸಮುದಾಯವಾಗಿರುವುದರಿಂದ ಮರಾಠಾ ಸಮುದಾಯವು ರಾಜ್ಯದ ಉದಾರವಾದಿ ಪ್ರಜಾತಾಂತ್ರಿಕ ಸಂಸ್ಥೆಗಳ ಹುಟ್ಟು ಮತ್ತು ಬೆಳವಣಿಗೆಗಳ ಪ್ರಮುಖ ಅಡಿಗಲ್ಲೂ ಆಗಿದೆ. ಈ ಸಮುದಾಯದ ಪರಾಯೀಕರಣವು ಪ್ರಾರಂಭವಾದದ್ದು ಕಳೆದ ಐದು ವರ್ಷಗಳಲ್ಲೇನೂ ಅಲ್ಲ. ಆದರೂ ಹಾಲೀ ಸರ್ಕಾರವು ಬಹಳ ಯೋಜಿತವಾಗಿ ಕೃಷಿ ಸಮುದಾಯಗಳ ಕೆಲವು ವರ್ಗಗಳ ಅಧಿಕಾರವನ್ನು ಕಿತ್ತುಕೊಂಡಿದೆ. ರೈತರಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಖಾತರಿ ಪಡಿಸಲು ನಿರಾಕರಿಸಿದ್ದರಲ್ಲಿ, ಕೋಪರೇಟೀವ್ ಸೊಸೈಟಿಗಳ ಮೇಲಿನ ದಾಳಿಗಳಲ್ಲಿ ಹಾಗೂ ಮಹಾರಾಷ್ಟ್ರ, ಹರ್ಯಾಣ ಮತ್ತು ಗುಜರಾತಿನ ಮುಖ್ಯಮಂತ್ರಿಗಳಂಥ ಕೃಷಿಯೇತರ ಉನ್ನತ ಜಾತಿಯವರಿಗೆ ಮಣೆ ಹಾಕಿದ್ದರಲ್ಲಿ ಈ ಪ್ರಯತ್ನಗಳು ಸ್ಪಷ್ಟವಾಗಿ ಕಾಣತೊಡಗಿತು. ಹೀಗಾಗಿ ಈ ಚುನಾವಣೆಗಳು ಮಹಾರಾಷ್ಟ್ರದ ರಾಜಕಾರಣದಲ್ಲಿ ಮರಾಠಾ ಸಮುದಾಯಗಳಿಗಿದ್ದ ಕೇಂದ್ರೀಯ ಸ್ಥಾನವನ್ನು ಉಳಿಸಿಕೊಳ್ಳುವ ಪರೀಕ್ಷೆಯೂ ಆಗಿಬಿಟ್ಟಿದೆ. ತಮ್ಮದೇ ಸಮುದಾಯದ ಸ್ಥಾಪಿತ ನಾಯಕರುಗಳ ವಿರುದ್ಧ ಅಸಮಾಧಾನದ ಅಭಿವ್ಯಕ್ತಿಯೂ ಆಗಿರುವ ಇಂದಿನ ಸಂದರ್ಭವನ್ನು ಬಳಸಿಕೊಂಡು ಹೊಸ ನಾಯಕತ್ವವನ್ನೂ ಮತ್ತು ಅವರಲ್ಲಿ ಪ್ರಗತಿಪರ ಚಿಂತನೆಯನ್ನೂ ಬೆಳೆಸುವುದು ವಿರೋಧ ಪಕ್ಷದ ಶಕ್ತಿಯನ್ನು ಹೆಚ್ಚಿಸಬಲ್ಲದು.

ವಿರೋಧಪಕ್ಷಗಳಲ್ಲಿ ಕಂಡುಬರುತ್ತಿರುವ ಈ ಹೊಸ ಅಲೆಯು ಓಟುಗಳಾಗಿ ಪರಿವರ್ತನೆಯಾಗುತ್ತದೆಯೇ ಎಂಬುದನ್ನು ಊಹಿಸುವುದು ಅಪಾಯಕಾರಿ. ಆದರೆ ಈ ಬೆಳವಣಿಗೆಗಳು ಎರಡು ಮುಖ್ಯ ಸಂದೇಶಗಳನ್ನಂತೂ ನೀಡುತ್ತಿವೆ. ಮೊದಲನೆಯದು ಜನರ ಬಳಿ ಹೋಗುವುದು ಮತ್ತು ಸಂಕಷ್ಟದ ಸಮಯದಲ್ಲೂ ಜನರ ಜೊತೆಗೆ ನೇರ ಸಂಪರ್ಕವನ್ನು ಇಟ್ಟುಕೊಳ್ಳುವುದು ರಾಜಕೀಯವಾಗಿ ಅತ್ಯಂತ ಪ್ರಮುಖವಾದದ್ದು. ಎರಡನೆಯದು ಅದನ್ನು ಧೈರ್ಯದಿಂದ ಮಾಡಬೇಕೆಂದರೆ ಕಾರ್ಯಕರ್ತರ ಮತ್ತು ಬೆಂಬಲಿಗರ ನಡುವಿನಿಂದಲೇ ಹೊಸ ನಾಯಕತ್ವವನ್ನು ಬೆಳೆಸುವುದು. ವಿರೋಧ ಪಕ್ಷಗಳು ಈ ಸಂದರ್ಭವನ್ನು ಬಳಸಿಕೊಂಡು ಈ ಎರಡನೇ ಸಂದೇಶವನ್ನು ಪಾಲಿಸಲು ಸಾಧ್ಯವಾಗುತ್ತದೆಯೇ ಎಂಬುದು ಸದ್ಯದ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರದಿದ್ದರೂ ವಿರೋಧ ಪಕ್ಷಗಳ ಪ್ರಸ್ತುತತೆಯ ಮೇಲಂತೂ ಪ್ರಭಾವ ಬೀರಲಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights