ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ : ಶಿಂಧೆ ನಾಲ್ಕು ದಿನ ಸಿಸಿಬಿ ವಶಕ್ಕೆ : ನಟ-ನಟಿಯರ ಮೇಲೆ ಶಂಕೆ

ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ನ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಬಂಧಿತರಾಗಿರುವ ಕ್ರಿಕೆಟಿಗರ ಜೊತೆ ಚಲನಚಿತ್ರರಂಗದ ಕೆಲ ನಟ-ನಟಿಯರು ಸಂಪರ್ಕ ದಲ್ಲಿರುವುದು ಕಂಡುಬಂದಿದ್ದು, ಅವರನ್ನೂ ವಿಚಾರಣೆಗೊಳಪಡಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ನಗರ ಪೊಲೀಸ್ ಆಯುಕ್ತರಾದ ಭಾಸ್ಕರರಾವ್ ಅವರು, ಮ್ಯಾಚ್ ಬಳಿಕ ನಡೆಯುವ ಪಾರ್ಟಿಯಲ್ಲಿ ಚಲನಚಿತ್ರರಂಗದ ಕೆಲ ನಟ-ನಟಿಯರು ಭಾಗವಹಿಸಿದ್ದಾರೆ. ಈ ಮೂಲಕ ಆಟಗಾರರು ಹಾಗೂ ಆಡಳಿತ ಮಂಡಳಿಯ ಜೊತೆ ಸಿನಿಮಾ ನಟ-ನಟಿಯರು ಕಾಣಿಸಿಕೊಂಡಿದ್ದಾರೆ. ಅವರಿಗೆಲ್ಲ ಹಣದ ಮೂಲ ಹೇಗೆ ಎಂಬ ಬಗ್ಗೆ ತನಿಖೆ ನಡೆಸಬೇಕಾಗಿದೆ. ಎರಡು ಸಿನಿಮಾ ಮಾಡಿದ ತಕ್ಷಣ ಅಷ್ಟೊಂದು ಹಣ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ ಭಾಸ್ಕರರಾವ್ ಅವರು, ಕ್ರಿಕೆಟಿಗರ ಜೊತೆ ಅನುಮಾನಾಸ್ಪದವಾಗಿ ಕಾಣಿಸಿಕೊಂಡಿರುವ ನಟ-ನಟಿಯರನ್ನು ಮುಂದಿನ ದಿನಗಳಲ್ಲಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಕಳೆದ ನಿನ್ನೆ ರಾತ್ರಿ ಬೆಳಗಾವಿ ಫ್ಯಾಂಥರ್ಸ್ ಮಾಲೀಕರಿಗೆ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಸಹಾಯ ಮಾಡಿದ್ದಾರೆ ಎನ್ನಲಾದ ಮಾಹಿತಿಯ ಮೇರೆಗೆ ಬೆಳಗಾವಿ ಫ್ಯಾಂಥರ್ಸ್ ಕೋಚ್ ಸುಧೀಂದ್ರ ಶಿಂಧೆಯವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇಂತಹ ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಆರೋಪಿಯನ್ನು ಸಿಸಿಬಿ ಪೊಲೀಸರಿಗೆ ನಾಲ್ಕು ದಿನಗಳ ಕಾಲ ವಶಕ್ಕೆ ನೀಡಿ 1ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.

ಬೆಳಗಾವಿ ಫ್ಯಾಂಥರ್ಸ್ ತಂಡದ ಕೋಚ್ ಸುಧೀಂದ್ರ ಶಿಂಧೆ ಅವರನ್ನು ಕಳೆದ ರಾತ್ರಿ ಬೆಂಗಳೂರಿನ ದೊಮ್ಮಲೂರಿನಲ್ಲಿರುವ ನಿವಾಸದಲ್ಲಿ ಸಿಸಿಬಿ ಪೊಲೀಸರು ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಬಂಧಿಸಿದ್ದರು. ಇಂತಹ ಆರೋಪಿಯನ್ನು ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಆರೋಪಿಯಿಂದ ಹಲವು ಮಾಹಿತಿಯನ್ನು ತನಿಖೆಯ ಮೂಲಕ ಪಡೆಯುವುದಿದೆ. ಹೀಗಾಗಿ ತಮ್ಮ ವಶಕ್ಕೆ ನೀಡುವಂತೆ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ 1ನೇ ಎಸಿಎಂಎಂ ಕೋರ್ಟ್ ಬೆಳಗಾವಿ ಫ್ಯಾಂಥರ್ಸ್ ಕೋಚ್ ಸುಧೀಂದ್ರ ಶಿಂಧೆ ಅವರನ್ನು ನಾಲ್ಕು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಆದೇಶಿಸಿದೆ. ಹೀಗಾಗಿ ಆರೋಪಿ ಸುಧೀಂದ್ರ ಶಿಂಧೆಯನ್ನು ಸಿಸಿಬಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.