KPL Cricket : ಶಿವಮೊಗ್ಗ, ಬಳ್ಳಾರಿಗೆ ಜಯದ ಸಿಹಿ, ಬೆಳಗಾವಿ, ಹುಬ್ಬಳ್ಳಿಗೆ ಸೋಲಿನ ಕಹಿ…

ಶುಕ್ರವಾರ ಮಳೆಯ ಆರಂಭ ಕಂಡ ಕೆಪಿಎಲ್ ಪಂದ್ಯಾವಳಿಯ ಎರಡನೇ ದಿನದ ಪಂದ್ಯಗಳಲ್ಲಿ ಶಿವಮೊಗ್ಗ ಹಾಗೂ ಬಳ್ಳಾರಿ ತಂಡಗಳು ಜಯದ ಆರಂಭ ಕಂಡಿವೆ.

ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ಶನಿವಾರ ನಡೆದ ಎರಡು ಪಂದ್ಯಗಳಲ್ಲಿ ಶಿವಮೊಗ್ಗ ತಂಡವು ಹುಬ್ಬಳ್ಳಿಯನ್ನು ಮಣಿಸಿದರೇ ಬಳ್ಳಾರಿ ಟಸ್ಕರ್ಸ್‌ ತಂಡವು ಬೆಳಗಾವಿ ಪ್ಯಾಂಥರ್ಸ್‌‌ಗೆ ಸೋಲುಣಿಸಿತು.

ದಿನದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್‌ ತಂಡವು ಕೆಬಿ ಪವನ್ ಅವರ ಅರ್ಧ ಶತಕ (53) ನೆರವಿನಿಂದ 20 ಓವರುಗಳಲ್ಲಿ 154 ರನ್ನುಗಳಿಗೆ ಸರ್ವಪತನ ಕಂಡಿತು. ರಿಶಬ್ ಸಿಂಗ್ ಹಾಗೂ ಪ್ರದೀಪ್ ತಲಾ 3 ವಿಕೆಟ್ ಕಬಳಿಸಿದರು.

ಉತ್ತರವಾಗಿ ನಮ್ಮ ಶಿವಮೊಗ್ಗ ತಂಡವು ಇನ್ನೂ ಎರಡು ಓವರ್ ಇರುವಂತೆಯೇ ಕೇವಲ 4 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಆರು ವಿಕೆಟ್ಟುಗಳ ಭರ್ಜರಿ ಜಯ ಸಂಪಾದಿಸಿತು. ಆರಂಭಿಕ ನಿಹಾಲ್ ಉಲ್ಲಾಳ್ ಅಜೇಯ 88 ರನ್ ಮಾಡುವ ಮೂಲಕ ಜಯವನ್ನು ಸುಲಭ ಸಾಧ್ಯವಾಗಿಸಿದರು.

ಬಳಿಕ ನಡೆದ ಮತ್ತೊಂದು ಪಂದ್ಯದಲ್ಲಿ ಬಳ್ಳಾರಿ ತಂಡವು ಐದು ರನ್ನುಗಳಿಂದ ಬೆಳಗಾವಿ ತಂಡವನ್ನು ಪರಾಭವಗೊಳಿಸಿ ಜಯದ ಖಾತೆ ತೆರೆಯಿತು.

ರೋಚಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಳ್ಳಾರಿ ತಂಡವು ಪಡಿಕ್ಕಲ್ 54 ಹಾಗೂ ನಾಯಕ ಗೌತಮ್ ಗಳಿಸಿದ 27 ರನ್ನುಗಳ ನೆರವಿನಿಂದ 20 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 143 ರನ್ ಮೊತ್ತ ಕಲೆ ಹಾಕಿತು.

ಉತ್ತರವಾಗಿ ಬೆಳಗಾವಿ ತಂಡವು ಅನುಭವಿ ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಹಾಗೂ ಪ್ರಸಿದ್ಧ ಕೃಷ್ಣ (ತಲಾ 2 ವಿಕೆಟ್) ಮುಂದೆ ವಿಕೆಟ್ ಕಳೆದುಕೊಂಡು 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಲಷ್ಟೇ ಶಕ್ತವಾಯಿತು. ಕಡೆಯ ಓವರಿನಲ್ಲಿ ಗೆಲ್ಲಲು ಬೆಳಗಾವಿಗೆ 13ರನ್ ಅವಶ್ಯಕತೆ ಇತ್ತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.