Karnataka Election : ಕಾಣದ ಆಶಾಭಾವ ಕಳಾಹೀನ ಮೋದಿ …..!

ರಾಜ್ಯದಲ್ಲಿ ಬಿಜೆಪಿ ಪರ ಅಲೆ ಅಷ್ಟಾಗಿ  ಕಾಣಿಸದಿರುವುದು, ದೇಶದ 21 ರಾಜ್ಯಗಳಲ್ಲಿ ಸರ್ಕಾರ ರಚಿಸಿ ಇದೀಗ ಕರ್ನಾಟಕದತ್ತ ದೃಷ್ಟಿ ನೆಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮುಖವನ್ನು ಕಳಾಹೀನ ಮಾಡಿದೆ.
2016ರ ನವೆಂಬರ್‌ 8ರಂದು ‘ನೋಟ್‌ ಬಂದಿ’ ನಿರ್ಧಾರ ಕೈಗೊಳ್ಳುವ ಮೂಲಕ ಅಬ್ಬರವೆಬ್ಬಿಸಿ ಉತ್ತರ ಪ್ರದೇಶದಲ್ಲಿ ಮಾಯಾವತಿ ಮತ್ತು ಅಖಿಲೇಶ್‌ ಯಾದವ್‌ ಅವರ ಮತ ಬುಟ್ಟಿಗೇ ಕೈಹಾಕಿ ಗೆದ್ದಿದ್ದ ಮೋದಿಯ ಮೋಡಿ ಕರ್ನಾಟಕದಲ್ಲೂ ಸಂಚಲನ ಮೂಡಿಸಬಹುದು ಎಂಬ ಬಿಜೆಪಿ ಮುಖಂಡರ ನಂಬಿಕೆ ಹುಸಿಯಾಗುವ ಎಲ್ಲ ನಿರೀಕ್ಷೆಗಳೂ ಇವೆ.
ಚುನಾವಣೆ ಘೋಷಣೆಗೆ ಮೊದಲು (ಮಾರ್ಚ್‌ 27) ಮೂರು ಬಾರಿ ರಾಜ್ಯ ಪ್ರವಾಸ ಕೈಗೊಂಡಿದ್ದ ಮೋದಿ ಬಹುಶಃ ಕರ್ನಾಟಕದ ಜನರಿಗೆ ತಮ್ಮ ಪಕ್ಷದತ್ತ ಅಷ್ಟಾಗಿ ಇಲ್ಲ ಎಂಬ ಸತ್ಯ ಅರಿವಾಗಿದ್ದರಿಂದಲೇ ಅವರು ಮತ್ತೆ ಇತ್ತ ತಲೆ ಹಾಕುವುದಕ್ಕೆ ಮನಸ್ಸು ಮಾಡದಂತೆ ತಡೆದಿದೆ ಎಂಬುದು ರಾಜಕೀಯ ವಿಶ್ಲೇಷಕರ ಅನಿಸಿಕೆ.
ಆಂತರಿಕ ಕಚ್ಚಾಟ, ಭಿನ್ನಾಭಿಪ್ರಾಯ, ಬಂಡಾಯಗಳಿಗೆ ಅವಕಾಶವನ್ನೇ ನೀಡದೆ ದಶಕಗಳ ನಂತರ ಪಂಚವರ್ಷದ ಅವಧಿ ಪೂರೈಸಿರುವ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯ ಸಿದ್ದರಾಮಯ್ಯ ಸರ್ಕಾರವು ಜನಪರ ನಿಲುವಿನಿಂದಾಗಿ ರಾಜ್ಯದಲ್ಲಿ ಬಿಜೆಪಿಗೆ ಜಾಗವೇ ಇಲ್ಲದಂತೆ ಮಾಡಿರುವುದೂ ದಿಟ. ಹಲವು ಭಾಗ್ಯಗಳ ಮೂಲಕ, ಜಾತ್ಯತೀತ ನಿಲುವುಗಳ ಮೂಲಕವೂ ಜನಮಾನಸದಲ್ಲಿ ಉಳಿದಿರುವ ಸಿದ್ದರಾಮಯ್ಯ ದೇಶದಲ್ಲಿ ಅಳಿವಿನ ಅಂಚನ್ನೇ ತಲುಪಿರುವ ಕಾಂಗ್ರೆಸ್‌ಗೆ ಉಳಿದಿರುವ ಏಕೈಕ ಆಶಾಕಿರಣ. ಹೊಸದಾಗಿ ಪಕ್ಷದ ಚುಕ್ಕಾಣಿ ಹಿಡಿದಿರುವ ರಾಹುಲ್‌ ಗಾಂಧಿ ಅವರಿಗೂ ಕನ್ನಡ ನಾಡೇ ಆಸರೆ. ಪ್ರವಾಹಕ್ಕೆ ಸಿಲುಕಿ ಮುಳುಗುತ್ತಿರುವವರಲ್ಲಿ ಆಶಾಭಾವ ಮೂಡಿಸಿರುವ ಹುಲ್ಲುಕಡ್ಡಿ.
ಇಡೀ ದೇಶವೇ ಈಗ ಕರ್ನಾಟಕ ವಿಧಾನಸಭೆಯ ಚುನಾವಣೆಯತ್ತ ದೃಷ್ಟಿ ನೆಟ್ಟಿದ್ದು, ಮೋದಿ ಬೆಂಬಲಿಗರು ಮತ್ತು ವಿರೋಧಿಗಳ ಕುತೂಹಲದ ಕೇಂದ್ರವಾಗಿದೆ.
ದೆಹಲಿ ಒಳಗೊಂಡಂತೆ ಬಹುತೇಕ ಸಮಗ್ರ ಉತ್ತರ ಭಾರತದ ರಾಜಕಾರಣದ ಮೊಗಸಾಲೆಗಳಲ್ಲಿ ಈಗ ನಡೆದಿರುವುದು ಕರ್ನಾಟಕದ್ದೇ ಚರ್ಚೆ. ಒಂದರ ಮೇಲೊಂದು ರಾಜ್ಯಗಳನ್ನು ಗೆಲ್ಲುತ್ತ, ಎದುರಾಳಿಗಳನ್ನು ಸದೆಬಡಿಯುತ್ತ ಏಕಮೇವಾದ್ವಿತೀಯ ಎಂಬ ಅಹಂಭಾವದೊಂದಿಗೆ ಮುನ್ನುಗ್ಗುತ್ತಿರುವ ಬಿಜೆಪಿಗೆ ಅಡ್ಡಗಾಲಾಗಿರುವುದೇ ಸಿದ್ದರಾಮಯ್ಯ ಎಂಬುದು ಹಿಂದಿ ಭಾಷಿಕ ನಾಡಿನ ಜನರಲ್ಲೂ ದಿಗಿಲು ಮೂಡಿಸಿದೆ.
‘ಅಲೆಗಳಿಲ್ಲದ ಮೇಲೆ ಅಬ್ಬರವಿರದು. ಅಬ್ಬರ ಇಲ್ಲದ ಮೇಲೆ ಅಲೆಯೂ ಇರದು’  ಎಂದೇ ಕರ್ನಾಟಕದ ಚುನಾವಣೆಯನ್ನು ಬಣ್ಣಿಸುತ್ತಿರುವುದೂ ಇದೇ ಕಾರಣಕ್ಕೆ. ಯಾವುದೇ ಚುನಾವಣೆಗೆ ಹೋಲಿಸಿದರೂ, ಅಲ್ಲಿ ಅವರಿವರ ಅಲೆ ಇದ್ದೇ ಇರುತ್ತದೆ. ಏನಿಲ್ಲದಿದ್ದರೂ ‘ಆಡಳಿತ ವಿರೋಧಿ ಅಲೆ’ಯಾದರೂ ಇರಬೇಕು. ಕರ್ನಾಟಕದಲ್ಲಿ ಅದೂ ಇಲ್ಲ ಎಂದ ಮೇಲೆ, ‘ಅಬ್ಬರದ ಆಟ’ ನಡೆಯುವುದಿಲ್ಲ ಎಂಬುದು ಆ ಬಣ್ಣನೆಯ ಹಿಂದಿನ ಗೂಢಾರ್ಥ.
‘ಸೋಲು ಶತಸಿದ್ಧ ಅಥವಾ ಗೆಲುವು ಮರೀಚಿಕೆ’ ಎಂಬಲ್ಲಿ ಮೋದಿ ಅಷ್ಟಾಗಿ ಆಸಕ್ತಿ ತಾಳುವುದಿಲ್ಲ ಎಂಬ ಮಾತೂ ಇದೆ. 2016ರ ಆರಂಭದಲ್ಲಿ ಪಂಜಾಬ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯೇ ಇದಕ್ಕೆ ಸ್ಪಷ್ಟ ನಿದರ್ಶನ.
ತಮ್ಮ ಪ್ರಚಾರದಿಂದ ಶಿರೋಮಣಿ ಅಕಾಲಿದಳದ ಬಾದಲ್‌ಗಳಿಗೆ ನೆರವಾಗದು ಎಂಬುದನ್ನು ಮನಗಂಡಿದ್ದ ಮೋದಿ, ಹಾಗೊಮ್ಮೆ ಪ್ರಚಾರ ನಡೆಸಿದಲ್ಲಿ ಅದು ಅರವಿಂದ ಕೇಜ್ರಿವಾಲ್‌ ಅವರ ಆಮ್‌ ಆದ್ಮಿ ಪಕ್ಷಕ್ಕೇ ಪರೋಕ್ಷವಾಗಿ ನೆರವಾಗಬಹುದು ಎಂಬ ಸುಳಿವನ್ನೂ ನೀಡಿತ್ತು.
ಅಂತೆಯೇ ಹಳೆಯ ಕಾಲದಲ್ಲಿ, ತಾವು ಮುಖ್ಯಮಂತ್ರಿಯಾಗಿದ್ದಾಗ ಆಪ್ತಮಿತ್ರರಾಗಿದ್ದ ಭಟಿಂಡಾದ ಅರಸ, ಕ್ಯಾಪ್ಟರ್‌ ಅಮರಿಂದರ್‌ ಸಿಂಗ್‌ಗೇ ನೆರವಾದರೆ ಆಗಲಿ ಎಂಬ ನಿಲುವಿಗೆ ಬಂದುಬಿಟ್ಟಿದ್ದೇ ಪಂಜಾಬ್‌ನಲ್ಲಿ ಕಾಂಗ್ರೆಸ್‌ ಸರ್ಕಾರ ಮತ್ತೆ ಅವಕಾಶ ಒಲಿದು ಬರಲು ಸಹಕಾರಿಯಾಯಿತು. ಒಂದೊಮ್ಮೆ ಮೋದಿ ಒಂದಷ್ಟು ಪ್ರಚಾರಸಭೆಗಳಲ್ಲಿ ಭಾಗವಹಿಸಿದ್ದೇ ಆಗಿದ್ದರೆ ಕಾಂಗ್ರೆಸ್‌ನ ಅಲ್ಪಸ್ವಲ್ಪ ಮತಗಳನ್ನು ಅಕಾಲಿದಳ ಸೆಳೆದುಕೊಂಡು ಆಮ್‌ ಆದ್ಮಿ ಪಕ್ಷಕ್ಕೆ ನೇರವಾಗಿ ಲಾಭವಾಗುವ ಸಾಧ್ಯೆತಗಳೂ ಇದ್ದವು. ಕಣ್ಣಿಗೆ ಕಾಣಿಸದಂತಹ ಈ ಮಾದರಿಯ ಒಳ ಒಪ್ಪಂದಗಳನ್ನೂ ಮೋದಿ ಪಡೆ ಮಾಡಿಕೊಳ್ಳುವುದೂ ಇದೆ. ಇದು ಅನೇಕ ರಾಜ್ಯಗಳಲ್ಲಿ ನಡೆದಿರುವಂಥ ವಿದ್ಯಮಾನವೇ.
ಕರ್ನಾಟಕದಲ್ಲಿ ಜೆಡಿಎಸ್‌ ಬಗ್ಗೆ ಬಿಜೆಪಿ ಮೃಧು ಧೋರಣೆ ತಾಳಿರುವುದೂ, ಬೇರೊಂದು ಸಾಧ್ಯತೆಯನ್ನು ಸ್ಪಷ್ಟಪಡಿಸುತ್ತಲೇ ಸಾಗಿದೆ.
2019ರ ಲೋಕಸಭೆ ಚುನಾವಣೆಯತ್ತ ದೃಷ್ಟಿ ನೆಟ್ಟಿರುವ ಮೋದಿಗೆ ಇನ್ನೂ ಎರಡು ಅಡೆತಡೆಗಳು ಎದುರಾಗುವುದು ಬಾಕಿ ಇದೆ.
ಎನ್‌ಡಿಎ ಮಿತ್ರಕೂಟದಲ್ಲಿ ಒಬ್ಬೊಬ್ಬರನ್ನೇ ಕಳೆದುಕೊಳ್ಳುತ್ತಲೇ ಸಾಗಿರುವ ಬಿಜೆಪಿ, ಈಗಿರುವ ಸ್ಥಾನಗಳನ್ನು ಉಳಿಸಿಕೊಂಡರೆ ಸಾಕು ಎಂಬ ಉದ್ದೇಶವನ್ನೂ ಹೊಂದಿರಬಹುದು. ಈ ವರ್ಷದ ಅಂತ್ಯಕ್ಕೆ ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳಲ್ಲೂ ಅಗ್ನಿಪರೀಕ್ಷೆಯನ್ನೋ, ಸತ್ವ ಪರೀಕ್ಷೆಯನ್ನೋ ಎದುರಿಸುವ ಅನಿವಾರ್ತಯೆಗೆ ಒಳಗಾಗಿರುವ ಬಿಜೆಪಿ, ದೇಶದಲ್ಲಿದ್ದ ಮೂಲ ರಾಜಕೀಯ ಭಾಷ್ಯವನ್ನೇ ಬದಲಿಸಲು ಹೊರಟಂತಿದೆ. ಅದೇ ಮುಳುವಾಗುವ ಎಲ್ಲ ಸಾಧ್ಯತೆಗಳೂ ಈಗ ಗೋಚರಿಸತೊಡಗಿವೆ.
ಉತ್ತರ, ಪಶ್ಚಿಮ, ಈಶಾನ್ಯವನ್ನು ಗೆದ್ದು ಬೀಗುತ್ತಿರುವ ಮೋದಿ ಮತ್ತು ಅಮಿತ್‌ ಶಾ ಬಳಗ ಈಗ ದಕ್ಷಿಣದಲ್ಲೂ ತನ್ನ ಸಾಮ್ರಾಜ್ಯ ವಿಸ್ತರಿಸುವುದು ಕಷ್ಟ ಸಾಧ್ಯವೇನಲ್ಲ ಎಂದೇ ಭಾವಿಸಿರುವ ಉತ್ತರ ಭಾರತದ ಜನರಿಗೆ ಕರ್ನಾಟಕದ ಜನರ ನಾಡಿಮಿಡಿತದ್ದೇ ಚಿಂತೆ.
ಪಕ್ಷಕ್ಕೆ ಗಟ್ಟಿ ನೆಲೆಯೇ ಇಲ್ಲದಲ್ಲಿ ಗೆಲುವು ಸಾಧಿಸಿ ಸೈ ಎನ್ನಿಸಿಕೊಂಡವರಿಗೆ, ತಮ್ಮ ಪಕ್ಷ ಕರ್ನಾಟಕದಲ್ಲಿ ಈ ಹಿಂದೆಯೇ ಆಡಳಿತ ನಡೆಸಿದೆಯಲ್ಲ ಎಂಬ ಉಮೇದಿಯೂ ಇದೆ ಎಂಬುದು ಈ ಜನರ ಭಾವನೆ.  ಬಿಜೆಪಿ, ಯಡಿಯೂರಪ್ಪ ಅವರಿಗೆಲ್ಲ ಪೂರಕವಾದ ವಾತಾವರಣ ಈಗಂತೂ ಕಾಣಿಸುತ್ತಿಲ್ಲ ಎಂಬ ಸತ್ಯ ದೇಶದ ಅದರಲ್ಲೂ ಉತ್ತರ ಭಾರತದ ಜನರನ್ನೂ ತಬ್ಬಿಬ್ಬುಗೊಳಿಸಿದ್ದರಲ್ಲಿ ಆಶ್ಚರ್ಯವಿಲ್ಲ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.