Hockey IHF : ಎಫ್ಐಎಚ್ ಸೀರೀಸ್ ಫೈನಲ್; ಪ್ರಶಸ್ತಿ ಸುತ್ತಿಗೆ ಭಾರತ… 

ಭರವಸೆಯ ಆಟಗಾರ್ತಿ ಗುರ್ಜಿತ್ ಕೌರ್ ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಭಾರತ 4-2ರಿಂದ ಚಿಲಿ ವಿರುದ್ಧ ಎಫ್ ಐ ಎಚ್ ಸೀರೀಸ್ ಫೈನಲ್ ಹಾಕಿ ಟೂರ್ನಿಯ ಸೆಮಿಫೈನಲ್ಸ್ ನಲ್ಲಿ ಜಯ ಸಾಧಿಸಿ, ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.
ಉಪಾಂತ್ಯದ ಪಂದ್ಯದಲ್ಲಿ ಭಾರತದ ಪರ ಗುರ್ಜಿತ್ (22, 37ನೇ ನಿಮಿಷ), ನವನೀತ್ ಕೌರ್ (31ನೇ ನಿಮಿಷ), ರಾಣಿ (57ನೇ ನಿಮಿಷ) ಗೋಲು ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಚಿಲಿ ಪರ ಕರೋಲಿನ (18ನೇ ನಿಮಿಷ) ಹಾಗೂ ಮೆನ್ಯೂಲಾ (43ನೇ ನಿಮಿಷ) ಗೋಲು ದಾಖಲಿಸಿದರು.
ಲೀಗ್ ಹಂತದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿದ್ದ ಭಾರತ, ಸೆಮಿಫೈನಲ್ಸ್ ಪಂದ್ಯದಲ್ಲಿ ಚೇತೋಹಾರಿ ಪ್ರದರ್ಶನ ನೀಡಿ, ಫೈನಲ್ ಗೆ ಪ್ರವೇಶ ಪಡೆಯುವ ಕನಸಿನೊಂದಿಗೆ ಅಂಗಳ ಪ್ರವೇಶಿಸಿತು. ಆರಂಭಿಕ ಅವಧಿಯಲ್ಲಿ ಉಭಯ ತಂಡಗಳು ಗೋಲು ಬಾರಿಸುವಲ್ಲಿ ವಿಫಲವಾದವು. ಆದರೆ, ಎರಡನೇ ಅವಧಿಯ ಆರಂಭದಲ್ಲಿ ಚಿಲಿ ಭಾರತದ ರಕ್ಷಣ ವಿಭಾಗದ ಕಣ್ಣು ತಪ್ಪಿಸಿ ಮೊದಲ ಗೋಲಿನ ನಗೆ ಬೀರಿತು.
ಇದೇ ಅವಧಿಯಲ್ಲಿ ಭಾರತ ಸಹ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಗೋಲು ದಾಖಲಿಸಿ ಅಂತರವನ್ನು ಸಮನಾಗಿಸಿತು. ಉಭಯ ತಂಡಗಳು ತಲಾ ಒಂದೊಂದು ಗೋಲು ಬಾರಿಸಿದ್ದರಿಂದ ಮೂರನೇ ಅವಧಿಯ ಪಂದ್ಯ ರೋಚಕತೆ ಹೆಚ್ಚಿಸಿತು.
ಮೂರನೇ ಅವಧಿಯಲ್ಲಿ ನವನೀತ್ ಕೌರ್ (31ನೇ ನಿಮಿಷ) ಸಿಕ್ಕ ಅವಕಾಶವನ್ನು ಬಳಸಿಕೊಂಡು ಸೊಗಸಾದ ಫೀಲ್ಡ್ ಗೋಲು ದಾಖಲಿಸಿದರು. ಪರಿಣಾಮ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಇದೇ ಅವಧಿಯಲ್ಲಿ ಭಾರತದ ಪರ ಗುರ್ಜಿತ್ ಮತ್ತೊಂದು ಗೋಲು ದಾಖಲಿಸಿ ಅಬ್ಬರಿಸಿದರು.
ಮೂರನೇ ಅವಧಿಯ ಕೊನೆಯ ಕ್ಷಣದಲ್ಲಿ ಚಿಲಿ ಮತ್ತೊಂದು ಗೋಲು ದಾಖಲಿಸಿ ಅಂತರವನ್ನು 2-3ಕ್ಕೆ ಇಳಿಸಿತು.
ಕೊನೆಯ ಅವಧಿಯಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ಭಾರತದ ಮಹಿಳಾ ತಂಡ, ಎದುರಾಳಿಗೆ ಗೋಲು ನೀಡದಂತೆ ತಡೆದು ಮತ್ತೊಇಂದು ಗೋಲು ಬಾರಿಸಿ ಅಬ್ಬರಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

Social Media Auto Publish Powered By : XYZScripts.com