ಗೋಡ್ಸೆ ಪರ ಟ್ವೀಟ್ ವಿವಾದ : ಬಿಜೆಪಿ ಮೂರೂ ನಾಯಕರಿಗೆ ನೋಟಿಸ್..

ನಾಥೂರಾಂ ಗೋಡ್ಸೆ ಕುರಿತು ಬಿಜೆಪಿಯ ವಿವಿಧ ನಾಯಕರು ನೀಡುತ್ತಿರುವ ಹೇಳಿಕೆಗಳು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಗೋಡ್ಸೆಯನ್ನು ದೇಶಭಕ್ತ ಎಂದು ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಸಂಭೋದಿಸಿದ ಬೆನ್ನಲ್ಲೇ ಕರ್ನಾಟಕದ ಇಬ್ಬರು ಬಿಜೆಪಿ ನಾಯಕರು ಗೋಡ್ಸೆ ಪರ ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದಾರೆ. ಕೇಂದ್ರ ಸಚಿವ ಅನಂತ್‌ಕುಮಾರ್‌ ಹೆಗಡೆ ಹಾಗೂ ಸಂಸದ ನಳಿನ್‌ ಕುಮಾರ್‌ ಕಟೀಲ್ ವಿವಾದಾತ್ಮಕ ಟ್ವೀಟ್ ಮಾಡಿದ್ದು, ಬಿಜೆಪಿ ನಾಯಕತ್ವಕ್ಕೆ ಇರುಸು ಮುರುಸು ಉಂಟುಮಾಡಿದೆ. ಮೂರೂ ನಾಯಕರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಶುಕ್ರವಾರ ಸಾಧ್ವಿ, ಹೆಗಡೆ ಹಾಗೂ ಕಟೀಲ್ಗೆ ನೋಟಿಸ್‌ ಜಾರಿ ಮಾಡಿ, 10 ದಿನಗಳೊಳಗಾಗಿ ಪಕ್ಷದ ಶಿಸ್ತು ಸಮಿತಿಗೆ ವಿವರಣೆ ನೀಡುವಂತೆ ಖಡಕ್‌ ಸೂಚನೆ ನೀಡಿದ್ದಾರೆ. ಜತೆಗೆ, ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಾರದೇಕೆ ಎಂದೂ ಪ್ರಶ್ನಿಸಿದ್ದಾರೆ.

ವಕ್ತಾರ ಅಮಾನತು: ಈ ಬೆಳವಣಿಗೆಗಳ ನಡುವೆಯೇ ಮಧ್ಯಪ್ರದೇಶದ ಬಿಜೆಪಿ ವಕ್ತಾರ ಅನಿಲ್ ಸೌಮಿತ್ರಾ, ಫೇಸ್‌ಬುಕ್‌ನಲ್ಲಿ ಗಾಂಧೀಜಿ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿದ್ದಲ್ಲದೆ, ಅವರನ್ನು ‘ಪಾಕಿಸ್ತಾನದ ರಾಷ್ಟ್ರಪಿತ’ ಎಂದು ಕರೆದಿದ್ದಾರೆ. ಈ ವಿಚಾರ ಬಹಿರಂಗವಾಗುತ್ತಿದ್ದಂತೆ, ಸೌಮಿತ್ರಾರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿ ರಾಜ್ಯ ಬಿಜೆಪಿ ಅಧ್ಯಕ್ಷ ರಾಕೇಶ್‌ ಸಿಂಗ್‌ ಆದೇಶ ಹೊರಡಿಸಿದ್ದಾರೆ.

ಕಟೀಲ್, ಹೆಗಡೆ ಹೇಳಿದ್ದೇನು?: ಗೋಡ್ಸೆಯನ್ನು ಮಾಜಿ ಪ್ರಧಾನಿ ರಾಜೀವ್‌ಗಾಂಧಿಗೆ ಹೋಲಿಸಿ ಟ್ವೀಟ್ ಮಾಡಿರುವ ಸಂಸದ ನಳಿನ್‌ ಕುಮಾರ್‌ ಕಟೀಲ್, ‘ಗೋಡ್ಸೆ ಒಬ್ಬರನ್ನು ಕೊಂದರೆ, ಕಸಬ್‌ 72 ಮಂದಿಯನ್ನು ಕೊಂದರೆ, ರಾಜೀವ್‌ ಗಾಂಧಿ 17 ಸಾವಿರ ಮಂದಿಯನ್ನು ಕೊಂದರು. ಈ ಮೂವರಲ್ಲಿ ಹೆಚ್ಚು ಕ್ರೂರಿ ಯಾರು ಎಂದು ನೀವೇ ನಿರ್ಧರಿಸಿ’ ಎಂದು ಬರೆದಿದ್ದಾರೆ. ಇನ್ನು ಸಚಿವ ಅನಂತ್‌ಕುಮಾರ್‌ ಹೆಗಡೆ, ‘7 ದಶಕಗಳ ಬಳಿಕ ಇಂದಿನ ತಲೆಮಾರು ಬದಲಾದ ಪರಿಕಲ್ಪನೆಯಲ್ಲಿ ಚರ್ಚೆ ನಡೆಸುವ ಅವಕಾಶ ಪಡೆದಿರುವುದು ಖುಷಿಯ ಸಂಗತಿ. ನಾಥೂರಾಂ ಗೋಡ್ಸೆ ಕೊನೆಗೂ ಈ ಚರ್ಚೆಯಿಂದ ಸಂತೋಷಗೊಂಡಿರಬಹುದು’ ಎಂದು ಟ್ವೀಟ್ ಮಾಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.