ವಿದ್ಯುತ್ ಕಣ್ಣಾಮುಚ್ಚಾಲೆ: ಆಡಳಿತ ಹಾಗೂ ವಿರೋಧ ಪಕ್ಷಗಳ ಮಧ್ಯೆ ಪಾಲಿಕೆ ಸಭೆಯಲ್ಲಿ ವಾಗ್ಯುದ್ಧ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡಳಿತ ಹಾಗೂ ವಿರೋಧ ಪಕ್ಷಗಳ ಮಧ್ಯೆ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿತು.

ಇಂದು ನಡೆದ ಸಾಮಾನ್ಯ ಸಭೆಯ ಮಧ್ಯೆ ಆಗಾಗ ಕರೆಂಟ್ ಕೈಕೊಟ್ಟಿತ್ತು. ಸಭೆ ಆರಂಭವಾದಾಗಿನಿಂದಲೂ ಕರೆಂಟ್ ಕಣ್ಣಾಮುಚ್ಚಾಲೆ ಮುಂದುವರಿದಿತ್ತು. ಪುಲ್ವಾಮಾ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಅರ್ಪಿಸಿದ ನಂತರ ವಿದ್ಯುತ್ ಬರದ ಕಾರಣ ಅನಿವಾರ್ಯವಾಗಿ ಮೇಯರ್ ಸುಧೀರ್ ಸರಾಫ್ ಸಭೆಯನ್ನು ಮುಂದೂಡಿದರು.

ಆಗ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಮೊಬೈಲ್ ಟಾರ್ಚ್ ಹಿಡಿದು ವ್ಯವಸ್ಥೆಯನ್ನು ಅಣಕಿಸಿದರಲ್ಲದೇ ಪಧಾನಿ ಮೋದಿಯವರ ಹೆಸರು ಪ್ರಸ್ತಾಪಿಸಿದ ವಿಪಕ್ಷ ನಾಯಕ ಟಗರಗುಂಟಿ, ಸಮಾವೇಶದಲ್ಲಿ ಮೋದಿಯವರು ಕಾರ್ಯಕರ್ತರಿಗೆ ಮೊಬೈಲ್ ಉಟಾವೋ ಎಂದು ಹುರುದುಂಬಿಸಿ ಮೊಬೈಲ್ ಟಾರ್ಚ್ ಹೊತ್ತಿಸುತ್ತಿದ್ದರು ಎಂದು ವ್ಯಂಗ್ಯವಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಮೋದಿ ಹೆಸರು ಇಲ್ಲೇಕೆ ಪ್ರಸ್ತಾಪಿಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರಲ್ಲದೇ ಆಡಳಿತ ಹಾಗೂ ವಿಪಕ್ಷ ಮಧ್ಯ ವಾಕ್ಸಮರಕ್ಕೆ ಕಾರಣವಾಯಿತು.

ಅಲ್ಲದೇ ಇಂದಿನ ಸಭೆಯಲ್ಲಿ ನಗರದಲ್ಲಿ ಬಿಡಾಡಿ ನಾಯಿಗಳ ಹಾಗೂ ಹಂದಿಗಳ ಹಾವಳಿ ಕುರಿತು ಸದಸ್ಯರು ಗಮನ ಸೆಳೆದರು. ಬೀದಿ ನಾಯಿಗಳ ಕಡಿತದಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಡಸ್ಟ್ ಬಿನಗಳಲ್ಲಿನ ಅಹಾರ ತಿಂದು ನಾಯಿ ಹಾಗೂ ಹಂದಿಗಳು ಬದುಕುತ್ತಿರುವುದು ಸ್ವಚ್ಚತಾ ಕಾರ್ಯದ ನಿಷ್ಕಾಳಜಿ ಪ್ರದರ್ಶಿಸುತ್ತಿದೆ. ಕಸ ವಿಲೇವಾರಿ ಸರಿಯಾದ ರೀತಿಯಲ್ಲಿ ಆಗಿದ್ದರೇ ಹಂದಿ,ನಾಯಿಗಳ ಸಂತತಿಯ ಬೆಳೆಯುತ್ತಿರಲಿಲ್ಲ ಅಲ್ಲದೇ ಹಂದಿ ಹಾಗೂ ನಾಯಿಗಳು ನಿಯಂತ್ರಣಕ್ಕೆ ಬರುತ್ತಿತ್ತು ಎಂದರಲ್ಲದೇ ಅಧಿಕಾರಿಗಳ ನಿಷ್ಕಾಳಜಿ ವಿರುದ್ಧ ಪಕ್ಷಾತೀತವಾಗಿ ಪಾಲಿಕೆ ಸದಸ್ಯರು ಹರಿಹಾಯ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.