ECM- VV pat : ತಪಾಸಣೆಯಲ್ಲಿ ಖಾಸಗಿ ಸಿಬ್ಬಂದಿ ಬಳಕೆ!ವಿಷಯ ಮುಚ್ಚಿಟ್ಟ EC , RTI ಬಹಿರಂಗ..

ಇವಿಎಂ-ವಿವಿಪ್ಯಾಟ್ ತಪಾಸಣೆಯಲ್ಲಿ ಖಾಸಗಿ ಸಿಬ್ಬಂದಿ ಬಳಕೆ!

ಹೊರಗುತ್ತಿಗೆ ವಿಷಯ ಮುಚ್ಚಿಟ್ಟ ಚುನಾವಣಾ ಆಯೋಗ

ಆರ್‌ಟಿಐ ಕಾಯಿದೆಯಡಿ ವಿಷಯ ಬಹಿರಂಗ

ಚುನಾವಣಾ ಅಕ್ರಮ ಶಂಕೆಗೆ ಇನ್ನಷ್ಟು ಪುಷ್ಟಿ

ಪ್ರಜಾಪ್ರಭುತ್ವದಲ್ಲಿ ಅತ್ಯಂತ ಸೂಕ್ಷ್ಮವಾಗಿರುವ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಖಾಸಗಿ ಸಂಸ್ಥೆ ಭಾಗಿಯಾಗಿರುವುದಿಲ್ಲ ಮತ್ತು ಹೊರಗುತ್ತಿಗೆ ನೀಡಲಾಗಿರುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಹೇಳುತ್ತಲೇ ಬಂದಿದೆ. ಆದರೆ, ಹಿಂದಿನ ಕೆಲವು ವಿಧಾನಸಭಾ ಚುನಾವಣೆಗಳು ಮತ್ತು ಕಳೆದ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಅಕ್ರಮ ನಡೆದಿರುವ ಬಗ್ಗೆ ವ್ಯಾಪಕ ಆರೋಪ ಮತ್ತು ಸಂಶಯಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ‘ದಿ ಕ್ವಿಂಟ್’ ನಡೆಸಿದ ತನಿಖೆಯಿಂದ ಇದು ಸುಳ್ಳೆಂದು ಬಹಿರಂಗವಾಗಿದ್ದು, ಇಂತಹಾ ಸಂಶಯಗಳಿಗೆ ಮತ್ತು ಸಾಧ್ಯತೆಗಳಿಗೆ ಮರುಹುಟ್ಟು ನೀಡಿದೆ.

ಹಿಂದೆ, ಅಂದರೆ 2017ರಿಂದಲೇ ‘ಕ್ವಿಂಟ್’ ಬಳಿ ಇರುವ ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ)ಯಡಿ ಪಡೆದ ಉತ್ತರವೊಂದರ ಪ್ರಕಾರ, ಇಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಮತ್ತು ವೋಟರ್ ವೆರಿಫೈಡ್‌ ಪೇಪರ್ ಅಡಿಟ್ ಟ್ಟ್ರೈಲ್ (ವಿವಿಪ್ಯಾಟ್) ಯಂತ್ರಗಳನ್ನು ತಯಾರಿಸುವ ಸಾರ್ವಜನಿಕ ರಂಗದ ಉದ್ದಿಮೆಯಾಗಿರುವ ಇಲೆಕ್ಟ್ರಾನಿಕ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಸಂಸ್ಥೆಯು, ಮುಂಬಯಿ ಮೂಲದ ಖಾಸಗಿ ಸಂಸ್ಥೆಯಾಗಿರುವ ಟಿ ಎಂಡ್ ಎಂ ಸರ್ವಿಸ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯಿಂದ ಇಂಜಿನಿಯರ್‌ಗಳನ್ನು “ಸಮಾಲೋಚಕರು”
(Consultants) ಎಂಬ ನೆಲೆಯಲ್ಲಿ ನೇಮಿಸಿಕೊಂಡಿತ್ತು.

ಈ ಖಾಸಗಿ ‘ಸಮಾಲೋಚಕ’ ಇಂಜಿನಿಯರ್‌ಗಳನ್ನು 2019ರ ಲೋಕಸಭಾ ಚುನಾವಣಾ ಪ್ರಕ್ರಿಯೆಯುದ್ದಕ್ಕೂ ಬಳಸಿಕೊಳ್ಳಲಾಗಿತ್ತು ಎಂದು ‘ಕ್ವಿಂಟ್’ ಪತ್ತೆಹಚ್ಚಿದೆ. ಅವರ ಕೆಲಸಗಳು ಅತ್ಯಂತ ಸೂಕ್ಷ್ಮ ಸ್ವರೂಪದವುಗಳಾಗಿದ್ದು, ಅವುಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಚುನಾವಣಾ ಪ್ರಕ್ರಿಯೆಯ ಆರಂಭದಿಂದ ಅಂದರೆ, ಮೊದಲ ಹಂತದ ಪರಿಶೀಲನೆ (ಎಫ್ಎಲ್‌ಸಿ)ಯಿಂದ ಹಿಡಿದು, ಮತ ಎಣಿಕೆ ಮುಕ್ತಾಯವಾಗುವ ವರೆಗೂ ಪರೀಕ್ಷಿಸುವುದು ಮತ್ತು ನಿರ್ವಹಿಸುವುದು ಸೇರಿತ್ತು.

ಲೋಕಸಭಾ ಚುನಾವಣೆಯಲ್ಲಿ ಬಳಸಲಾದ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಪರಿಶೀಲಿಸಲು ಇಸಿಐಎಲ್ ಸಂಸ್ಥೆಯು ಖಾಸಗಿ ಸಮಾಲೋಚಕರನ್ನು ಬಳಸಿದೆಯೇ ಎಂದು ‘ಕ್ವಿಂಟ್’ ಕಳೆದ ವಾರ ಚುನಾವಣಾ ಆಯೋಗವನ್ನು ಪ್ರಶ್ನಿಸಿದಾಗ, ಅದು ‘ಇಲ್ಲ’ ಎಂಬ ಉತ್ತರ ನೀಡಿತ್ತು.

“ಬಿಇಎಲ್ ಮತ್ತು ಇಸಿಐಎಲ್ ಸಂಸ್ಥೆಗಳಿಗೆ ಇಂಜಿನಿಯರ್‌ಗಳನ್ನು ಒದಗಿಸಲು ಯಾವುದೇ ಖಾಸಗಿ ಸಂಸ್ಥೆಯನ್ನು ನೇಮಿಸಲಾಗಿಲ್ಲ” ಎಂದು ಚುನಾವಣಾ ಆಯೋಗದ ವಕ್ತಾರೆ ಶಿಫಾಲಿ ಶರಣ್ ಉತ್ತರ ನೀಡಿದ್ದರು. (ಇಲ್ಲಿ ಬಿಇಎಲ್ ಎಂದರೆ, ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ತಯಾರಿಸಲು ಸರಕಾರ ನೇಮಿಸಿದ ಸಾರ್ವಜನಿಕ ರಂಗದ ಇನ್ನೊಂದು ಉದ್ದಿಮೆಯಾಗಿರುವ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್)

ಚುನಾವಣಾ ಆಯೋಗವು ಸಾರ್ವಜನಿಕರಿಂದ ಸತ್ಯವನ್ನು ಮುಚ್ಚಿಡುತ್ತಿದೆ ಎಂಬುದು ಸ್ಪಷ್ಟ. ಆದರೆ, ಯಾಕಾಗಿ?

‘ಸಮಾಲೋಚಕ’ ಸಂಸ್ಥೆಯ ನಿಗೂಢತೆ

2017ರಲ್ಲಿ ಉತ್ತರಖಂಡ ವಿಧಾನಸಭಾ ಚುನಾವಣೆಯ ವೇಳೆ ವಕೀಲ ಅಮಿತ್ ಅಹ್ಲುವಾಲಿಯಾ ಎಂಬವರು ಮಾಹಿತಿ ಹಕ್ಕು ಕಾಯಿದೆಯಡಿ ಒಂದು ಅರ್ಜಿ ಸಲ್ಲಿಸಿದ್ದರು. ಅವರು ಆ ಹೊತ್ತಿಗೆ ಇಸಿಐಎಲ್ ಸಂಸ್ಥೆಗೆ ಕೇಳಿದ್ದ ಪ್ರಶ್ನೆ ಮತ್ತು ಪಡೆದಿದ್ದ ಉತ್ತರ ಕೆಳಗಿವೆ:

“ಇಸಿಐಎಲ್‌ಗೆ ಸಮಾಲೋಚಕರನ್ನು ಒದಗಿಸುವ/ಪೂರೈಸುವ ಯಾವುದೇ ಸಂಸ್ಥೆ ಇದೆಯೇ? ಹೌದಾದಲ್ಲಿ, ಸಮಾಲೋಚಕರ ನೇಮಕಾತಿಗೆ ಇರುವ ಮಾನದಂಡಗಳ ಜೊತೆಗೆ ಈ ಮಾಹಿತಿಯನ್ನು ದಯವಿಟ್ಟು ನೀಡಿರಿ.”

“ಇಸಿಐಎಲ್ ನುರಿತ/ಅರೆನುರಿತ “ಸಮಾಲೋಚಕ”ರನ್ನು ನೇಮಿಸುತ್ತಿದೆ. ಹೌದು. ಅಧಿಕೃತವಾದ ಒಂದೇ ಒಂದು ಮಾನವಶಕ್ತಿ ಪೂರೈಕೆ ಸಂಸ್ಥೆ ಎಂದರೆ, M/s ಟಿ ಎಂಡ್ ಎಂ ಸರ್ವಿಸ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ (ಮುಂಬಯಿ ವಿಳಾಸ ಹೊಂದಿದೆ). (ಇದ್ದದ್ದು ಇದ್ದ ಹಾಗೆ- ಅಂದರೆ, ವಿಳಾಸ ಕೊಡಲಾಗಿಲ್ಲ!)

ಈ ಆರ್‌ಟಿಐ ಮಾಹಿತಿಯ ಆಧಾರದಲ್ಲಿ ‘ಕ್ವಿಂಟ್’,  2017ರ ಉತ್ತರಖಂಡ ವಿಧಾನಸಭಾ ಚುನಾವಣೆಯ ವೇಳೆ ಭಾಗಿಯಾಗಿದ್ದ ಕೆಲವು ‘ಸಮಾಲೋಚಕ’ ಇಂಜಿನಿಯರ್‌ಗಳ ಜೊತೆಗೆ ಮಾತನಾಡಿತು. ಅವರಲ್ಲಿ ಕೆಲವರು ತಮ್ಮನ್ನು 2019ರ ಲೋಕಸಭಾ ಚುನಾವಣೆ ಮತ್ತು 2018ರ ಮಧ್ಯಪ್ರದೇಶ ಹಾಗೂ ರಾಜಸ್ಥಾನ ಸೇರಿದಂತೆ ಕೆಲವು ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ನಿರ್ವಹಣೆಗೆ ನೇಮಿಸಲಾಗಿತ್ತು ಎಂದು ದೃಢಪಡಿಸಿದರು.

ಮುಕ್ತ, ನ್ಯಾಯಬದ್ಧ ಚುನಾವಣೆ ಜೊತೆ ರಾಜಿ?

‘ಕ್ವಿಂಟ್’, ಮಾಜಿ ಮುಖ್ಯ ಚುನಾವಣಾ ಕಮೀಷನರ್ ಎಸ್. ವೈ. ಖುರೇಶಿ ಅವರೊಂದಿಗೆ ಮಾತನಾಡಿತು. 2017ರ ಚುನಾವಣೆ ನಡೆದು ಕೆಲವು ತಿಂಗಳುಗಳ ಬಳಿಕ ಇಸಿಐಎಲ್ ಸಂಸ್ಥೆಯು ಇವಿಎಂ ಮತ್ತು ವಿವಿಪ್ಯಾಟ್ ತಪಾಸಣೆಗೆ ಹೊರಗುತ್ತಿಗೆ ಕೊಟ್ಟಿರುವ ಬಗ್ಗೆ ಆರೋಪಗಳು ಬಂದಿದ್ದವು ಎಂದು ಅವರು ತಿಳಿಸಿದರು. ಆದರೆ, ತಾನು ಆಗಿನ ಚುನಾವಣಾ ಆಯೋಗವನ್ನು ಕೇಳಿದಾಗ, ಕೇವಲ ಸಂಸ್ಥೆಯೊಳಗಿನ ಇಂಜಿನಿಯರ್‌ಗಳನ್ನು ಮಾತ್ರ ಬಳಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿತ್ತು ಎಂದು ಖುರೇಶಿ ತಿಳಿಸಿದರು.

ಚುನಾವಣಾ ಆಯೋಗ ಅವರಿಗೆ ಈ ಭರವಸೆ ಜೊತೆ ಲಿಖಿತ ಮಾರ್ಗದರ್ಶಿ ಸೂತ್ರವನ್ನೂ ನೀಡಿದ್ದು, ಆ ಕುರಿತು ಅವರು ಟ್ವೀಟ್ ಕೂಡಾ ಮಾಡಿದ್ದರು. ಅದು ಹೀಗೆ ಹೇಳುತ್ತದೆ: “ಬಿಇಎಲ್/ಇಸಿಐಎಲ್‌ನ ಸಂಬಳ ಪಟ್ಟಿಯಲ್ಲಿ ಇರುವ ಇಂಜಿನಿಯರ್‌ಗಳನ್ನು ಮಾತ್ರ ಎಫ್ಎಲ್‌ಸಿ (ಮೊದಲ ಹಂತದ ತಪಾಸಣೆ)ಗಾಗಿ ಬಳಸಲಾಗಿದೆ.”

ಅದರೆ, ಇಸಿಐಎಲ್ ಸಂಸ್ಥೆ ಆರ್‌ಟಿಐ ಪ್ರಶ್ನೆಗೆ  ನೀಡಿದ ಉತ್ತರದಲ್ಲಿ 2017ರಿಂದಲೇ ಟಿ ಎಂಡ್ ಎಂ ಸರ್ವಿಸ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್‌ನಿಂದ ಹೊರಗುತ್ತಿಗೆ ಇಂಜಿನಿಯರ್‌ಗಳನ್ನು ಪಡೆಯುತ್ತಿರುವುದನ್ನು ಸ್ಪಷ್ಟವಾಗಿ ಒಪ್ಪಿಕೊಂಡಿದೆ. ಹೀಗಿರುವಾಗ ಚುನಾವಣಾ ಆಯೋಗವು ಖುರೇಶಿಯವರಂತಹ ಒಬ್ಬ ಮಾಜಿ ಕೇಂದ್ರ ಮುಖ್ಯ ಚುನಾವಣಾ ಕಮೀಷನರ್‌ಗೇ ಸುಳ್ಳು ಯಾಕೆ ಹೇಳಿತು?
(ಮೂಲ ವರದಿಯಲ್ಲಿ ಇದನ್ನು ಸಾಬೀತುಪಡಿಸುವ ಲಿಖಿತ ವಿವರಗಳಿದ್ದು, ಅದನ್ನು ಇಲ್ಲಿ ನೀಡಲಾಗಿಲ್ಲ).

ಖುರೇಶಿಯವರು ತನ್ನ ಪುಸ್ತಕ “ಎನ್ ಅನ್‌ಡಾಕ್ಯುಮೆಂಟೆಡ್ ವಂಡರ್: ದಿ ಮೇಕಿಂಗ್ ಆಫ್ ದಿ ಗ್ರೇಟ್ ಇಂಡಿಯನ್ ಇಲೆಕ್ಷನ್’ನಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಖಾಸಗಿಯವರನ್ನು ಬಳಸದಿರುವ ಮಹತ್ವವನ್ನು ವಿವರಿಸಿದ್ದಾರೆ. ಅವರು ಹೇಳಿರುವುದರ ಸಾರಾಂಶವೆಂದರೆ, ಸರಕಾರಿ ನೌಕರರನ್ನೇ ಬಳಸಲಾಗುವುದು ಏಕೆಂದರೆ, ಅವರ ಮೇಲೆ ಆಡಳಿತಾತ್ಮಕ ನಿಯಂತ್ರಣ ಇರುತ್ತದೆ. ಖಾಸಗಿಯವರ ಮೇಲೆ ಚುನಾವಣೆ ಮುಗಿದ ತಕ್ಷಣ ಯಾವುದೇ ನಿಯಂತ್ರಣ ಇರುವುದಿಲ್ಲ. ಅವರಿಗೆ ಯಾವುದೇ ಭಯವಿಲ್ಲದ ಕಾರಣ ಅಕ್ರಮ ನಡೆಸುವುದು ಸುಲಭ.

2019ರ ಲೋಕಸಭಾ ಚುನಾವಣೆಗೆ ಒದಗಿಸಲು ಇಸಿಐಎಲ್ ಬಳಿ ಸಾಕಷ್ಟು ಇಂಜಿನಿಯರ್‌ಗಳು ಇದ್ದಿರಲಾರರು. ಇವಿಎಂ ತಯಾರಿಸುವ ಎರಡೇ ಸಂಸ್ಥೆಗಳಾದ ಇಸಿಐಎಲ್ ಮತ್ತು ಬಿಇಎಲ್ ಒಟ್ಟು 2,220 ಇಂಜಿನಿಯರ್‌ಗಳನ್ನು ಪೂರೈಸಿದ್ದವು. ಪ್ರಶ್ನೆ ಎಂದರೆ, ಇಸಿಐಎಲ್ ಅರ್‌ಟಿಐ ಅಡಿಯಲ್ಲಿ ಗುತ್ತಿಗೆ ಇಂಜಿನಿಯರ್‌ಗಳ ಬಳಕೆಯನ್ನು ಒಪ್ಪಿಕೊಂಡಿರುವಾಗ, ಚುನಾವಣಾ ಆಯೋಗವು ನಿರಾಕರಿಸುತ್ತಿರುವುದು ಏಕೆ? ಸಾರ್ವಜನಿಕರೊಂದಿಗೆ ಈ ಮಾಹಿಯನ್ನು ಏಕೆ ಹಂಚಿಕೊಂಡಿಲ್ಲ? ಇಂತಹಾ ಸೂಕ್ಷ್ಮ ಜವಾಬ್ದಾರಿಗೆ ಆಯ್ಕೆಯದ ಈ ನಿರ್ದಿಷ್ಟ ಸಂಸ್ಥೆಯನ್ನು ಯಾವ ಮಾನದಂಡ ಅಥವಾ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಯಿತು? ಪ್ರಕ್ರಿಯೆ ನಡೆದಿಲ್ಲವಾದರೆ, ಯಾರ ಶಿಫಾರಸಿನ ಮೇಲೆ ಆಯ್ಕೆ ನಡೆಯಿತು? ಸಂಸ್ಥೆಯ ಅರ್ಹತೆ ಮತ್ತು ಹಿನ್ನೆಲೆ ಏನು? ಬಳಸಿಕೊಳ್ಳಲಾದ ಖಾಸಗಿ ಇಂಜಿನಿಯರ್‌ಗಳ ಹಿನ್ನೆಲೆಯನ್ನು ಚುನಾವಣಾ ಆಯೋಗ ತಪಾಸಣೆ ಮಾಡಿದೆಯೇ?

(ಮೂಲ ವರದಿಯಲ್ಲಿ ಉತ್ತರಖಂಡ ಚುನಾವಣೆಯಲ್ಲಿ ಇಸಿಐಎಲ್ ಹೊರಗುತ್ತಿಗೆ ಇಂಜಿನಿಯರ್‌ಗಳ ಬಳಕೆ ಒಪ್ಪಿಕೊಂಡಿರುವ ಬಗ್ಗೆ ಆರ್‌ಟಿಐ ಪತ್ರ ವ್ಯವಹಾರಗಳ ವಿವರಗಳಿದ್ದು, ಅದನ್ನಿಲ್ಲಿ ನೀಡಲಾಗಿಲ್ಲ. ಮುಖ್ಯ ವಿಷಯ ಎಂದರೆ, ಈ ಖಾಸಗಿ ‘ಸಮಾಲೋಚಕ’ರನ್ನು ತಪಾಸಣೆ, ಮತದಾನ ಮಾತ್ರವಲ್ಲ; ಎಣಿಕೆ ವೇಳೆಯೂ ಬಳಸಿಕೊಳ್ಳಲಾಗಿತ್ತು ಎಂಬುದು! ಪಾರದರ್ಶಕತೆಗಾಗಿ ಹೋರಾಡುತ್ತಿರುವ ಕಾರ್ಯಕರ್ತರು ಇದರಲ್ಲಿ ಗಂಭೀರ ಲೋಪ ಮತ್ತು ವಂಚನೆಯ ಸಾಧ್ಯತೆಯನ್ನು ಕಾಣುತ್ತಿದ್ದಾರೆ.)

ಆರ್‌ಟಿಐ ಮಾಹಿತಿಯು ಇಂತಹ ಕೆಲವು ಇಂಜಿನಿಯರ್‌ಗಳ ಹೆಸರು ಹಾಗೂ ಮೊಬೈಲ್ ನಂಬರ್‌ಗಳನ್ನು ಒಳಗೊಂಡಿತ್ತು. ವಿಚಾರಿಸಿದಾಗ, ತಾವು ಟಿ ಎಂಡ್ ಎಂ ಸಂಸ್ಥೆಗೆ ಅರ್ಜಿ ಹಾಕಿ, ಇಸಿಐಎಲ್‌ನಲ್ಲಿ ಕೆಲಸದ ಗುತ್ತಿಗೆ ಪಡೆದಿರುವುದಾಗಿ ಅವರು ತಿಳಿಸಿದರು. ಕೆಲವೇ ಕೆಲವು ಇಸಿಐಎಲ್‌ನ ಖಾಯಂ ನೌಕರರನ್ನು ಚುನಾವಣೆಗೆ ನಿಯೋಜಿಸಲಾಗಿತ್ತು ಎಂದೂ ಅವರು ತಿಳಿಸಿದರು. ಯಾವುದೇ ಒಂದು ಪಕ್ಷ ತನ್ನ ಜನರನ್ನೇ ಅರ್ಜಿ ಹಾಕಿಸಿ, ಈ ಮೂಲಕ ಒಳಸೇರಿಸಲು ಸಾಧ್ಯವಿಲ್ಲವೆ ಎಂಬುದೊಂದು ಗಂಭೀರ ಪ್ರಶ್ನೆ.

ಚುನಾವಣೆ ನಡೆಯುವುದಕ್ಕೆ ಕೇವಲ ಹದಿನೈದು ದಿನಗಳಿರುವಾಗಿನ ತನಕ ಅಂದರೆ, ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡ ನಂತರದಲ್ಲಿ ಈ ಖಾಸಗಿ ‘ಸಮಾಲೋಚಕ’ರಿಗೆ ಇವಿಎಂ ಮತ್ತು ವಿವಿಪ್ಯಾಟ್ ತೆರೆಯುವ ಅವಕಾಶವಿದ್ದು, ಅವರು ಅಭ್ಯರ್ಥಿಗಳ ಹೆಸರು, ಚಿಹ್ನೆ ಮುಂತಾದವುಗಳನ್ನು ಅಳವಡಿಸಬೇಕಾಗಿತ್ತು. ಇಂತಹಾ ಸೂಕ್ಷ್ಮ ಕೆಲಸಕ್ಕೆ ಹೊರಗಿನವರನ್ನು ನೇಮಿಸುವುದರಿಂದ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಂತಾಗಲಿಲ್ಲವೆ? ಇದು ಚುನಾವಣಾ ಆಯೋಗಕ್ಕೆ ಗೊತ್ತಿಲ್ಲ ಅಂದರೆ ಹೇಗೆ? ಚುನಾವಣೆ ನಡೆಯುತ್ತಿರುವಾಗಲೂ, ನಡೆದ ಬಳಿಕವೂ ಇವರನ್ನು ಬಳಸಲಾಗಿರುವಾಗ ಚುನಾವಣಾ ಆಯೋಗಕ್ಕೆ ಗೊತ್ತಿಲ್ಲದೇ ಇರುವುದು ಹೇಗೆ ಸಾಧ್ಯ? ಈ ಕುರಿತು ಇನ್ನಷ್ಟು ವಿವರಗಳನ್ನು ‘ಕ್ವಿಂಟ್’ ಪ್ರಕಟಿಸಲಿದೆ.

ಮೂಲ: ಪೂನಂ ಅಗರ್ವಾಲ್, ‘ದಿ ಕ್ವಿಂಟ್’

ಮರುನಿರೂಪಣೆ: ನಿಖಿಲ್ ಕೋಲ್ಪೆ

ಕೃಪೆ: ದಿ ಕ್ವಿಂಟ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.