Breaking : ನೋಟು ಬಂದಿಯಿಂದ ರೈತರ ಜೀವನ ಬರ್ಬಾದ್: ಒಪ್ಪಿಕೊಂಡ ಮೋದಿ ಸರ್ಕಾರ…

| ಕೆ.ಪಿ ಸುರೇಶ್ |

ನೋಟು ಬಂದಿ ತರುವಾಯ ಲಕ್ಷಾಂತರ ರೈತರು ಸಂಕಷ್ಟ ಅನುಭವಿಸಿದ್ದಾರೆ ಎಂದು ಮೋದಿ ಸರ್ಕಾರದ ಕೃಷಿ ಇಲಾಖೆ ಒಪ್ಪಿಕೊಂಡಿದೆ!! ಸಂಸತ್ತಿನ ಆರ್ಥಿಕ ಸ್ಥಾಯಿ ಸಮಿತಿಗೆ ನೀಡಿದ ವರದಿಯಲ್ಲಿ ಕೃಷಿ ಇಲಾಖೆ ಈ ತಪ್ಪೊಪ್ಪಿಗೆ ವರದಿ ನೀಡಿದೆ. ವ್ಯಂಗ್ಯವೆಂದರೆ ಪ್ರಧಾನ ಚೌಕೀದಾರರು “ಕಾಳ ಧನ ಹತ್ತಿಕ್ಕಲು ನೋಟು ಬಂದಿಯಂಥಾ ಕಹಿ ಗುಳಿಗೆ ಪ್ರಯೋಗಿಸಿದೆ” ಎಂದು ಬೊಗಳೆ ಭಾಷಣ ಮಾಡುತ್ತಿದ್ದ ದಿನವೇ ಈ ವರದಿ ಬಹಿರಂಗವಾಗಿದೆ. ಈ ವರದಿ ಇಂದಿನದ್ದಲ್ಲ!! ಕಳೆದ ವರ್ಷದ ನವಂಬರ್ 20ರದ್ದು!! ಮೂರು ರಾಜ್ಯಗಳ ಚುನಾವಣಾ ಸಂದರ್ಭದಲ್ಲಿ ಮೋದಿ ಬೂಸಿ ಭಾಷಣ ಮಾಡುವಾಗ ಈ ವರದಿ ಬಂದಿದ್ದು ಗಮನಾರ್ಹ.

ರೈತರು ಮುಂಗಾರು ಬೆಳೆ ಮಾರಿ ಹಿಂಗಾರು ಬೆಳೆಗೆ ತಯಾರಿ ನಡೆಸುವ ಸಂಕ್ರಮಣ ಘಟ್ಟದಲ್ಲಿ ಬಿದ್ದ ಈ ಹೊಡೆತದಿಂದಾಗಿ ನಗದು ಅಭಾವ ಅನುಭವಿಸಿದ ರೈತರು ಅಪಾರ ಸಂಕಷ್ಟ ಅನುಭವಿಸಬೇಕಾಯಿತು. ದೇಶದ 27 ಕೋಟಿ ರೈತಾಪಿ ವರ್ಗ ಬಹುತೇಕ ನಗದು ಮೂಲಕವೇ ವ್ಯವಹರಿಸುತ್ತಿದ್ದು ಬೀಜ, ಗೊಬ್ಬರ ಕೊಳ್ಳುವುದರಿಂದ ಹಿಡಿದು ಬೇಸಾಯದ ಎಲ್ಲಾ ಕಾರ್ಯಗಳಲ್ಲೂ ತೊಂದರೆ ಅನುಭವಿಸಿದರು. ದೊಡ್ಡ ಜಮೀನುದಾರರೂ ಕೂಲಿ ಸಂಬಳ ಕೊಡಲು ನಗದು ಅಭಾವ ಅನುಭವಿಸಿದರು.

ರಾಷ್ಟ್ರೀಯ ಬೀಜ ನಿಗಮ 1.38 ಲಕ್ಷ ಕ್ವಿಂಟಾಲುಗಳಷ್ಟು ಬಿತ್ತನೆ ಗೋಧಿ ಬೀಜ ಮಾರಾಟ ಮಾಡಲಾರದೇ ಸೋತಿತು. ಹಳೇ ನೋಟು ಬಳಸಬಹುದು ಎಂದು ಸರ್ಕಾರ ಹೇಳಿದ ಮೇಲೂ ಮಾರಾಟ ಹೆಚ್ಚಲಿಲ್ಲ.

ಬೇಸಾಯ ಕುಂಟಿದ ಬಗ್ಗೆ ಕೃಷಿ ಇಲಾಖೆ ವರದಿಯಲ್ಲಿ ಹೇಳಿದೆ. ಆದರೆ ಇದರ ಸಾಮಾಜಿಕ ಪರಿಣಾಮದ ಬಗ್ಗೆ ಅದು ಹೇಳಿಲ್ಲ. ಅತ್ತ ಕಾರ್ಮಿಕ ಸಚಿವಾಲಯ ನೋಟು ಬಂದಿಯಿಂದ ಕಷ್ಟ-ನಷ್ಟ ಉಂಟಾಗಲಿಲ್ಲ ಎಂದು ಹೇಳಿ ಈ ಸಮಿತಿಯಿಂದ ಉಗಿಸಿಕೊಂಡಿದೆ.

ಕೃಷಿ ಕ್ಷೇತ್ರ ಸತತವಾಗಿ ಒಂದೆರಡು ದಶಕಗಳಿಂದ ಕುಂಟುತ್ತಿರುವುದು ಸರ್ಕಾರಕ್ಕೆ ಗೊತ್ತು. ಅಂಥಾ ಸಂದರ್ಭದಲ್ಲಿ ಈ ತಲೆ ಮೇಲೆ ಚಪ್ಪಡಿ ಎಳೆಯುವ ಕೆಲಸ ಮಾಡಿದ ಮೋದಿ ಇಂದಿಗೂ ಈ ಪ್ರಮಾದವನ್ನು ಒಪ್ಪಿಕೊಳ್ಳುತ್ತಿಲ್ಲ. ಗಾಯದ ಮೇಲೆ ಉಪ್ಪು ಸವರಿದ ಹಾಗೆ ರೈತರ ಆದಾಯ ದ್ವಿಗುಣ ಎಂಬ ಬೂಸಿಯನ್ನು ದೇಶದ ಮೇಲೆ ಹೇರುತ್ತಾ ಮೊನ್ನೆ ಮೊನ್ನೆ ವರೆಗೂ ಓಡಾಡುತ್ತಿದ್ದ ಈ ಬೊಗಳೆ ಪ್ರಧಾನಿ ಲೋಕಸಭಾ ಚುನಾವಣೆಯಲ್ಲಿ ಈ ಯಾವ ವಿಷಯವನ್ನೂ ಪ್ರಸ್ತಾಪಿಸದೇ ಕೂತಿದ್ದಾರೆ.

ನಮ್ಮ ದುರಂತವೆಂದರೆ ಎದುರಾಳಿ ಪಕ್ಷಗಳೂ ನಿರುದ್ಯೋಗ, ರೈತ ಸಂಕಷ್ಟದಂಥಾ ವಿಷಯಗಳನ್ನು ಮುಂದೊತ್ತದೇ ಮೋದಿಯೊಬ್ಬರನ್ನೇ ಟಾರ್ಗೆಟ್ ಮಾಡುವ ರಾಜಕೀಯ ಮಾಡುತ್ತಿದ್ದಾರೆ. ಅಷ್ಟೇಕೆ ಮೋದಿ ಸೃಷ್ಟಿಸಿದ ಮರಣಾಂತಿಕ ಗಾಯಗಳಿಗೆ ಪರಿಹಾರ ಏನು ಎಂಬ ನಕಾಶೆಯೂ ಇವರಲ್ಲಿ ಇಲ್ಲ. ಮೇವಿಲ್ಲದ ಹಸುಗಳು ಕೂತಲ್ಲೇ ತೂಕಡಿಸಿ ಒದ್ದಾಡಿ ಸಾಯುತ್ತವೆ. ಪ್ರಾಣಿ ಸಹಜ ಅಸಹಾಯಕತೆ ಅದು. ಒಂದು ವರ್ಗದ ರೈತರು ಈ ಅಸಹಾಯಕತೆಯಲ್ಲಿದ್ದರೆ, ಇನ್ನೊಂದು ವರ್ಗ ಇರುವ ರಾಜಕೀಯ ಪಕ್ಷಗಳ ಮೇಲಾಟವನ್ನೇ ಸಂಭ್ರಮಿಸುತ್ತಾ ಕೂತಿರುವಂತಿದೆ.

ಜಿಂಕೆಯೊಂದು ಹುಲಿಗೆ ಬಲಿಯಾದರೆ ಹಿಂಡಿನ ಉಳಿದ ಜಿಂಕೆಗಳು ಹೋರಾಡಿದ್ದಿಲ್ಲ. ಒಮ್ಮೆ ನೋಡಿ ಮತ್ತೆ ಮೇಯತೊಡಗುತ್ತವೆ. ರೈತರೂ ಇಂಥಾ ಪಶು ಸಹಜ ಮಟ್ಟಕ್ಕೆ ಬಂದಿದ್ದಾರೆ. ಈ ರೂಪಾಂತರಕ್ಕೆ ಮೋದಿಯ ಕೊಡುಗೆ ದೊಡ್ಡದು!

(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.