“ಇದು ನನ್ನ ಷರಾ ” 3 – ಯೋಗೇಶ್ ಮಾಸ್ಟರ್ ಕಾಲಂ : ಸಾಮಾನ್ಯ ಪ್ರಜ್ಞೆಗೆ ಅಸಮ್ಮತಿ …

ಅಹಮದ್ ಖಾನ್ ೪೫ ವರ್ಷಗಳ ಭಕ್ತಿ ಗೀತೆಗಳನ್ನು ಹಾಡುವ ಓರ್ವ ಜನಪದ ಗಾಯಕ. ಲಾಂಗ ಮಂಗನಿಯಾರ್ ಜನಾಂಗಕ್ಕೆ ಸೇರುವ ಆತ ಮುಸ್ಲೀಂ ಆಗಿದ್ದರೂತಲೆಮಾರುಗಳಿಂದ ಹಿಂದೂ ದೇವರ ಭಕ್ತಿಗೀತೆಗಳನ್ನು ಹಾಡುವ ಸಂಪ್ರದಾಯವನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದರು. ಅದನ್ನು ಮಾಧ್ಯಮಗಳಲ್ಲಿ ಅಥವಾ ಜನಸಾಮಾನ್ಯರಲ್ಲಿ ಹಿಂದೂ ಮುಸ್ಲೀಂ ಸೌಹಾರ್ದದ ಸಂಕೇತವನ್ನಾಗಿ ತೋರಿಸುವಂತಹ ಮಾದರಿ ಎಂದೆನ್ನಬಹುದು. ಸಾಮಾನ್ಯವಾಗಿ ಹಾಗುಂಟು. ಹಿಂದೂಗಳು ಚರ್ಚುಗಳಜಾತ್ರೆಗಳಲ್ಲಿ, ದರ್ಗಾಗಳ ಉರುಸ್ ಗಳಲ್ಲಿ ಭಾಗವಹಿಸಿದರೆ, ಹಾಗೆಯೇ ಮುಸಲ್ಮಾನರು ಗಣಪತಿಯನ್ನು ಕೂರಿಸಿದರೆ ಅಥವಾ ದುರ್ಗಾ ಮೂರ್ತಿಗೆ ಆರತಿಯನ್ನು ಎತ್ತಿದರೆಧಾರ್ಮಿಕ ಸಾಮರಸ್ಯ ಎಂದು ಸಾಮಾನ್ಯವಾಗಿ ಬಿಂಬಿಸುತ್ತೇವೆ. ಆದರೆ ರಾಜಾಸ್ಥಾನದ ಜೈಪುರದ ದಾಂತಲ್ ಎಂಬ ಗ್ರಾಮದಲ್ಲಿ ಸೆಪ್ಟೆಂಬರ್ ೨೭ರಂದು (೨೦೧೭) ಅಹಮದ್ ಖಾನ್ ಹಾಗೆ ಹಿಂದೂ ದೇವರ ಭಕ್ತಿಗೀತೆಗಳನ್ನು ಹಾಡಿದ್ದಕ್ಕೆಹಲ್ಲೆಗೊಳಗಾಗಿ ಹತ್ಯೆಗೀಡಾದರು. ಕಾರಣ ದೇವರ ಶ್ಲೋಕಗಳನ್ನು ತಪ್ಪಾಗಿ ಪಠಿಸಿದರಂತೆ. ಅದಕ್ಕೆ ಅರ್ಚಕ ರಮೇಶ್ ಸುತಾರ್ ಎಂಬಾತ ತಕರಾರು ತೆಗೆದು ತನ್ನಬೆಂಬಲಿಗರೊಂದಿಗೆ ಬಂದು ಅಹಮದ್ ಖಾನ್ ರವರ ಸಂಗೀತ ಪರಿಕರಗಳನ್ನು ಧ್ವಂಸ ಮಾಡಿ ಖಾನ್ ರವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈಗ ಗಾಯಕರಕೊಲೆಯಿಂದಾಗಿ ಹೆದರಿರುವ ಗ್ರಾಮಸ್ಥರು ತಮ್ಮ ಮನೆಗಳಿಗೆ ಮರಳಲು ಹೆದರುತ್ತಿದ್ದಾರೆ. ಗ್ರಾಮಕ್ಕೆ ಸರ್ಕಾರ ಪ್ಯಾರಾ ಮಿಲಿಟರಿ ಪಡೆಗಳನ್ನು ಕಳುಹಿಸಿ ಭದ್ರತೆಕೈಗೊಳ್ಳಲಾಗಿದೆ. ಈ ಘಟನೆಯೇ ಕೇಂದ್ರವಾಗಿ ಸಮಾಜದ ಹಲವಾರು ಮುಖಗಳ ಅನಾವರಣವಾಗುತ್ತದೆ.   ತಪ್ಪಾಗಿ ಹೇಳುವುದು ಎಂದರೇನು? ಸ್ಪಷ್ಟವಾದ ಉಚ್ಛಾರಣೆ, ಹ್ರಸ್ವಸ್ವರ, ಅಲ್ಪಪ್ರಾಣ ಮತ್ತು ಮಹಾಪ್ರಾಣ ಇತ್ಯಾದಿ ಉಚ್ಚಾರಣೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸುವ ಮಡಿವಂತರಿನ್ನೂ ಇದ್ದಾರೆ.ಭಾಷೆಯ ಮೈಲಿಗೆಯನ್ನು ಸಹಿಸದ ಸಂಪ್ರದಾಯವಾದಿಗಳಿದ್ದಾರೆ. ಪ್ರಾದೇಶಿಕ ಸಂಸ್ಕೃತಿಗಳ ಪ್ರಭಾವದಿಂದ ಅನೇಕರಿಗೆ ಕೆಲವು ಶಬ್ಧಗಳನ್ನು ಅನ್ಯ ಪ್ರಾದೇಶಿಕ ಅಥವಾಸಾಂಸ್ಕೃತಿಕ ರೂಢಿಯ ಉಚ್ಚರಿಸುವ ಅಭ್ಯಾಸವಿರದ ಕಾರಣದಿಂದ ಬೇರೆಯಾಗಿಯೇ ಧ್ವನಿಸುತ್ತದೆ. ಇದು ನಮ್ಮ ದೇಶದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಈ ವಿಷಯವನ್ನುಗಮನಿಸಬಹುದು. ಅ-ಕಾರ, ಇ-ಕಾರ, ಶ-ಕಾರ, ಹ-ಕಾರ, ಟ-ಕಾರ, ಸ-ಕಾರ ಇತರೇ ಸ್ವರಗಳು ಮತ್ತು ವ್ಯಂಜನಗಳ ಉಚ್ಚಾರಣೆಯಲ್ಲಿ ವ್ಯತ್ಯಾಸವಿರುತ್ತದೆ. ಇನ್ನು ಕನ್ನಡವಂತೂ ಮಹಾ ಭಾಷಾಸಂಕರಕ್ಕೆ ಒಳಗಾಗಿ ತನ್ನ ಮೂಲವನ್ನೇ ಮರೆಯುವಷ್ಟು ಸಂಸ್ಕೃತ ಭಾಷೆಯ ಬೆರಕೆಗೆ ಒಳಗಾಗಿದೆ. ಕನ್ನಡದಲ್ಲಿ ಇಲ್ಲದೇ ಇರುವಂತಹಮಹಾಪ್ರಾಣಗಳು, ಅನುನಾಸಿಕ ಶಬ್ಧಗಳನ್ನೆಲ್ಲಾ ಸರಿಯಾಗಿ ಉಚ್ಚರಿಸದ ಗ್ರಾಮೀಣ ಜನರನ್ನು ಅಪಹಾಸ್ಯ ಮಾಡಿದ, ಮಾಡುತ್ತಿರುವ ಪಂಡಿತರಿಗೇನೂ ಕೊರತೆಯಿಲ್ಲ.ನಮ್ಮ ಕನ್ನಡದ ಮೂಲ ಸ್ವರೂಪ ಮತ್ತು ಅದರ ನಿಜವಾದ ಅಭಿವ್ಯಕ್ತಿಯನ್ನು ನಮ್ಮ ಡಿ ಎನ್ ಶಂಕರ ಬಟ್ಟರ ಕನ್ನಡದ ಭಾಷೆಯ ಕುರಿತಾದ ಪುಸ್ತಕ ಸರಣಿಯನ್ನುಓದಬೇಕು ಮತ್ತು ತಿಳಿಯಬೇಕು. ಕನ್ನಡದ ರೂಪ ಮತ್ತು ಸ್ವರೂಪಗಳ ಬಗ್ಗೆ ಅವರಷ್ಟುಉದಾಹರಣೆಗಳ ಸಮೇತ ಅಧಿಕಾರಯುತವಾಗಿ ಕನ್ನಡದ ಮಾತಿನ ಒಳಗುಟ್ಟುಗಳಬಗ್ಗೆ ಬರೆಯಲ್ಪಟ್ಟಿರುವ ಬೇರೆ ಪುಸ್ತಕಗಳಂತೂ ನನ್ನ ಗಮನಕ್ಕೆ ಬಂದಿಲ್ಲ. ಕನ್ನಡವು ಅದೆಷ್ಟು ಕುಲಗೆಟ್ಟಿದೆ ಎಂದರೆ, ಸಂಸ್ಕೃತ ಮತ್ತು ಕನ್ನಡಕ್ಕೂ ಇರುವ ವ್ಯತ್ಯಾಸವೇತಿಳಿಯದಷ್ಟು! ಆದರೆ ತಮಿಳು ಇಷ್ಟು ಕಲುಷಿತಗೊಂಡಿಲ್ಲ. ಆದರೆ ಮಲೆಯಾಳಂ, ತೆಲುಗು ಮತ್ತು ಕನ್ನಡದಲ್ಲಿ ಸಂಸ್ಕೃತದ ಪ್ರಭಾವ ಎಷ್ಟರಮಟ್ಟಿಗೆ ಇದೆಯೆಂದರೆ ಆಯಾಭಾಷಿಕರಿಗೇ ವ್ಯತ್ಯಾಸ ಗುರುತಿಸಲಾಗದಷ್ಟು. ಇದೇ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲೂ ತೊಡಕಾಗಿತ್ತು ಎಂಬುದು ಹಲವರ ಅಂಬೋಣ. ನಿಜವಿರಲೂಬಹುದು. ವ್ಯಕ್ತಿಗತವಾಗಿ ನನ್ನ ಬರವಣಿಗೆ ಮತ್ತು ಉಚ್ಚಾರಣೆಯ ವಿಷಯದಲ್ಲಿ ಒಪ್ಪಿಕೊಳ್ಳಲೇಬೇಕಾದ ವಿಷಯವೆಂದರೆ, ನನ್ನದು ಅಗ್ರಹಾರದ ಭಾಷೆ. ಸಂಸ್ಕೃತ ಪ್ರಭಾವಕ್ಕೆ ಒಳಗಾದಪಂಡಿತರ ಮತ್ತು ಸಾಹಿತಿಗಳ ಸಾಹಿತ್ಯವನ್ನು ಓದಿಕೊಂಡು ಬೆಳೆದವನಾಗಿದ್ದು, ಸಂಸ್ಕೃತ ಸಾಹಿತ್ಯವನ್ನು ಪಠಿಸುತ್ತಾ, ಹಾಡುತ್ತಾ ಬರವಣಿಗೆಯ ಕ್ಷೇತ್ರಕ್ಕೆ ಪ್ರವೇಶಿಸಿದವನುಸಹಜವಾಗಿ ಸಂಸ್ಕೃತ ಕನ್ನಡವನ್ನೇ ಸರಿಯಾದ ಮತ್ತು ಸ್ಪಷ್ಟ ಕನ್ನಡ ಎಂದು ಭ್ರಮಿಸಿದ್ದವನು. ಅದನ್ನೇ ಅಭ್ಯಾಸ ಮಾಡಿದ್ದವನು. ಆ ಭ್ರಮೆಯನ್ನು ಹರಿದವರು ಡಿ ಎನ್ಶಂಕರ್ ಬಟ್. ೧೯೮೬ರಲ್ಲಿ “ಕನಕವಲ್ಲಕಿ ಧಾರಿಣಿ, ನಿಗಮಾಗಮ ಅಮೃತ ರೂಪಿಣಿ” ಎಂದು ಸರಸ್ವತಿಯ ಕುರಿತಾಗಿ ಗೀತೆ ಬರೆದು ಜಾನಪದ ಜಂಗಮ ಕರೀಂಖಾನ್ ರವರ ಬಳಿಹಾಡಿದ್ದೆ. ಅವರು “ಇನ್ಯಾವುದಾದರೂ ಇನ್ನೊಂದು ಕನ್ನಡ ಗೀತೆಯೊಂದನ್ನು ಹಾಡಿ” ಎಂದರು. “ನಾದಲಹರಿ, ಶಿವ ನಾದಲಹರಿ, ನವ ಪುಷ್ಪಾಯುಕ್ತ ಸುಂದರ ನಾರಿ. ಮೇಘ ಘರ್ಷಣ ವರ್ಷಾಕ್ಷತ ಧಾರ ಹಿಮಾಚ್ಛಾದಿತ ಕುಸುಮಾಸುಮ ವೇದ್ಯ ಸಾಗರ ಅಂಬರ ಧರಾಖಿಲ ವ್ಯಾಪ್ತ ನಿಧಿಗರ್ಭಿತ ವಸುಂಧರ ತೇಜ.” ಹೀಗೆ ಮುಂದುವರಿಯುವ ಹಾಡನ್ನು ಕೇಳಿದ ಕರೀಂ ಖಾನ್ ಕೇಳಿದ್ದರು. “ಇದರಲ್ಲಿ ಕನ್ನಡವೆಲ್ಲಿದೆ? ಇದು ಸಂಪೂರ್ಣ ಸಂಸ್ಕೃತಮಯ. ಮೇಘ, ಘರ್ಷಣೆ, ವರ್ಷ, ಅಕ್ಷತೆ,ಧಾರೆ, ಹಿಮ, ಆಚ್ಛಾದಿತ, ಕುಸುಮ, ಸುಮ, ವೇದ್ಯ, ಸಾಗರ, ಅಂಬರ, ಧರೆ, ಅಖಿಲ, ವ್ಯಾಪ್ತಿ, ನಿಧಿ, ಗರ್ಭಿತ, ವಸುಂಧರ, ತೇಜ- ಇವುಗಳಲ್ಲಿ ಯಾವುವು ಕನ್ನಡ ಹೇಳಿ?”ಆದರೆ, ನಾನಂತೂ ಇವುಗಳನ್ನೆಲ್ಲಾ ಕನ್ನಡವೆಂದೇ ತಿಳಿದಿದ್ದೆ. ಈಗಲೂ ಕೂಡಾ   ನನ್ನ ಭಾಷೆ ಮತ್ತು ಬರವಣಿಗೆ ಸಂಸ್ಕೃತೀಕರಣಗೊಂಡಿರುವ ಕನ್ನಡವೇ. ಭಾಷೆ ಎಂಬುದೂ ಕೂಡ ಕನ್ನಡವಲ್ಲ. ಭಾಷೆಗಿಂತ ನುಡಿ ಎಂಬ ಪದ ಕನ್ನಡವನ್ನು ಧ್ವನಿಸುತ್ತದೆ. ನನಗೆ ಸಂಸ್ಕೃತಗನ್ನಡದ ಪ್ರಾರಂಭಿಕ ಪ್ರಭಾವಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಹಾಗೂ ಅದನ್ನು ನಿವಾರಿಸಿಕೊಳ್ಳಬೇಕೆಂದೂ ನಾನು ಹೆಣಗಾಡುತ್ತಿಲ್ಲ.ಏಕೆಂದರೆ, ನಾನು ನನ್ನ ವಿಷಯಗಳನ್ನು ಅಭಿವ್ಯಕ್ತಗೊಳಿಸಲು ಈ ಬರವಣಿಗೆಯಲ್ಲಿ ಮುಕ್ತವಾದಂತಹ ಓಘವಿದೆ, ಲಹರಿಯಿದೆ. ಪ್ರಜ್ಞಾಪೂರ್ವಕವಾಗಿ ಈ ಪ್ರಭಾವದಿಂದಬಿಡಿಸಿಕೊಳ್ಳಲು ಹೋದರೆ ಮುಕ್ತ ಆಲೋಚನಾ ಲಹರಿಗೆ ತೊಡಕಾಗಬಹುದೆಂದು ಒಂದು ಹಂತಕ್ಕೆ ಒಪ್ಪಿಕೊಂಡಿಬಿಟ್ಟಿದ್ದೇನೆ. ಆದರೆ ಸಂಸ್ಕೃತ, ಪಾರ್ಸೀ ಮತ್ತು ಹಿಂದಿಭಾಷೆಗಳ ಪ್ರಭಾವ ಢಾಳಾಗಿ ಇದೆ ಎಂಬ ಸ್ಪಷ್ಟವಾದ ಅರಿವಿದೆ ಮತ್ತು ಅವನ್ನು ಗುರುತಿಸಬಲ್ಲೆ.

Read more
Social Media Auto Publish Powered By : XYZScripts.com