ಪರೀಕ್ಷೆಗಳು ಇದ್ದೇ ಇರುತ್ತೆ; ಬೇಸಿಗೆ ರಜೆ ಇಲ್ಲ; ಮುಂದಿನ ಶೈಕ್ಷಣಿಕ ವರ್ಷದಲ್ಲಿ ಬದಲಾವಣೆ ಇಲ್ಲ: ಡಿಸಿಎಂ ಅಶ್ವತ್ಥ ನಾರಾಯಣ

ಕೋವಿಡ್‌ ಕಾರಣಕ್ಕೆ ಪ್ರಸಕ್ತ ನಡೆಯುತ್ತಿರುವ ಪರೀಕ್ಷೆ ಹಾಗೂ ಶೈಕ್ಷಣಿಕ ಚಟುವಟಿಕೆಗಳು ನಿಲ್ಲುವುದಿಲ್ಲ. ನಿಗದಿತ ವೇಳಾಪಟ್ಟಿಯಂತೆ ಎಲ್ಲವೂ ಮುಂದುವರಿಯುತ್ತವೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರದಂದು ಸಂಸ್ಕೃತ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು; “ವಿಶ್ವವಿದ್ಯಾಲಯದ ಮಟ್ಟದಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಎಂಜಿನಿಯರಿಂಗ್‌, ಡಿಪ್ಲೋಮೋ ಸೇರಿದಂತೆ ಉನ್ನತ ಶಿಕ್ಷಣ ವ್ಯಾಪ್ತಿಗೆ ಬರುವ ಯಾವುದೇ ವಿಭಾಗದ ಪರೀಕ್ಷೆಗಳು ಯಥಾವತ್‌ ನಡೆಯುತ್ತವೆ. ಯಾವ ಬದಲಾವಣೆಯೂ ಇರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದಿನ ವರ್ಷ, ಅಂದರೆ 2021-22 ನೇ ಸಾಲಿನ ಶೈಕ್ಷಣಿಕ ವರ್ಷದ ಯಾವ ಚಟುವಟಿಕೆಗಳಲ್ಲೂ ವ್ಯತ್ಯಯ ಆಗುವುದಿಲ್ಲ. ಈಗ ಪರೀಕ್ಷೆಗಳು ಮುಗಿದ ನಂತರ ಬೇಸಿಗೆ ರಜೆಗಳು ಇರುವುದಿಲ್ಲ. ಹಿಂದೆಯೇ ತರಗತಿಗಳು ಆರಂಭವಾಗುತ್ತವೆ. ಅದರಲ್ಲಿ ಆಫ್‌ಲೈನ್‌ ಮತ್ತು ಆನ್‌ಲೈನ್‌ ತರಗತಿಗಳು ಇರುತ್ತವೆ. ಮೊದಲು ಆನ್‌ಲೈನ್‌ ತರಗತಿಗಳು ಆರಂಭವಾಗುತ್ತವೆ. ವಿದ್ಯಾರ್ಥಿಗಳು ಎರಡರ ಪೈಕಿ ಒಂದಕ್ಕೆ ಕಡ್ಡಾಯವಾಗಿ ಹಾಜರಾಗಬೇಕಾಗುತ್ತದೆ ಎಂದರು ತಿಳಿಸಿದ್ದಾರೆ.

ಯಾರು ಕಾಲೇಜಿಗೆ ಬರುತ್ತಾರೋ ಅವರ ಸುರಕ್ಷತೆಗೆ ಕಾಲೇಜಿನಲ್ಲಿ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಕೋವಿಡ್‌ ಮಾರ್ಗಸೂಚಿ ಪ್ರಕಾರ ಎಲ್ಲ ವ್ಯವಸ್ಥೆ ಮಾಡಲಾಗಿರುತ್ತದೆ. ತರಗತಿ ಕೊಠಡಿಗಳ ಸ್ಯಾನಿಟೈಸೇಷನ್‌, ಸ್ವಚ್ಛತೆ, ಕೋವಿಡ್‌ ಪರೀಕ್ಷೆ, ದೈಹಿಕ ಅಂತರ ಹಾಗೂ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿರುತ್ತದೆ ಎಂದು ಅವರು ಮಾಹಿತಿ ನೀಡಿದರು.

ಕೋವಿಡ್‌ ಕಾರಣಕ್ಕಾಗಿ ಈಗಾಗಲೇ ಸಮಗ್ರ ಕಲಿಕಾ ನಿರ್ವಹಣಾ ವ್ಯವಸ್ಥೆ (ಎಲ್‌ಎಂಎಸ್)‌ ಯನ್ನು ಜಾರಿಗೆ ತರಲಾಗಿದೆ. ವಿದ್ಯಾರ್ಥಿಗಳು ಎಲ್ಲೇ ಇದ್ದರೂ ಕಲಿಯಬಹುದು. ಅದಕ್ಕೆ ನೆರವಾಗುವಂತೆ ಈ ವರ್ಷ ಸರಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 1.60 ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್‌ಲೆಟ್‌ ಪಿಸಿಗಳನ್ನು ನೀಡಲಾಗಿದೆ. ಕಳೆದ ವರ್ಷ 1.10 ಲಕ್ಷ ವಿದ್ಯಾರ್ಥಿಗಳಿಗೆ ಇವನ್ನು ಕೊಡಲಾಗಿತ್ತು. ಕ್ಲಾಸ್‌ ರೂಮುಗಳನ್ನೇ ಸ್ಟುಡಿಯೋಗಳ್ನಾಗಿ ಪರಿವರ್ತಿಸಲಾಗಿದೆ. ಎಲ್ಲವೂ ಸ್ಮಾರ್ಟ್‌ ಕ್ಲಾಸ್‌ ರೂಮುಗಳಾಗಿವೆ. ಮನೆಯಿಂದಲೇ ವ್ಯಾಸಂಗವನ್ನು ಮುಂದುವರಿಸಬಹುದು ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

ಈಗಾಗಲೇ ಮುಂದಿನ ಶೈಕ್ಷಣಿಕ ವರ್ಷದ ನಾಲ್ಕೈದು ತಿಂಗಳು ನಷ್ಟವಾಗಿದೆ. ಅಂದರೆ, ತಡವಾಗಿದೆ. ಇನ್ನೂ ತಡ ಆಗುವುದು ಬೇಡ. ಒಂದು ವೇಳೆ ತಡವಾದರೆ, ಓದು, ಪರೀಕ್ಷೆ, ತೇರ್ಗಡೆ, ಉದ್ಯೋಗ, ಮುಂದಿನ ವ್ಯಾಸಂಗದ ಚೈನ್‌ ಕಟ್‌ ಆಗಿಬಿಡುತ್ತದೆ. ಹಾಗೆ ಆಗುವುದು ಬೇಡ ಎಂದರು ಅವರು.

ಸಮಗ್ರ ಕಲಿಕಾ ನಿರ್ವಹಣಾ ವ್ಯವಸ್ಥೆಯಲ್ಲಿ ಸರಿಯಾಗಿ ಕಂಟೆಂಟ್‌ ಅನ್ನು ಅಪ್‌ಲೋಡ್‌ ಮಾಡಲಾಗುತ್ತಿಲ್ಲ ಎಂಬ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಅವರು: ಈ ಕೂಡಲೇ ಅದನ್ನು ಸರಿ ಮಾಡುತ್ತೇವೆ. ಈ ಬಗ್ಗೆ ಸಂಬಂಧಪಟ್ಟವರ ಜತೆ ಮಾತನಾಡುತ್ತೇನೆ. ಇಡೀ ದೇಶದಲ್ಲೇ ಮೊತ್ತ ಮೊದಲಿಗೆ ಇಂಥ ಕಲಿಕಾ ವ್ಯವಸ್ಥೆಯನ್ನು ಜಾರಿಗೆ ತಂದ ರಾಜ್ಯ ಕರ್ನಾಟಕ. ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದರು.

Read Also: ರಸ ಗೊಬ್ಬರ ಬೆಲೆ ಏರಿಕೆ : ಇದು ದೇಶ ವಿನಾಶದ ಕೃತ್ಯ ಎಂದು ಸಿದ್ದರಾಮಯ್ಯ ಆಕ್ರೋಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights