ಯುದ್ಧ ಮತ್ತು ಅಧಿಕಾರದಾಹದ ತೀವ್ರತೆಯನ್ನು ಬಿಚ್ಚಿಡುವ ನಾಟಕ ’ಬಾಹುಬಲಿ ವಿಜಯಂ’

ಯುದ್ಧ ಮಾಯದ ಗಾಯ ಎಂಬ ಮಾತು ಸಿದ್ದಲಿಂಗಯ್ಯ ನವರು ರಚಿಸಿದ ಕಾಲಜ್ಞಾನಿ ಕನಕ ನಾಟಕದಲ್ಲಿ ಕನಕ ಹೇಳುವ ಮಾತು. ನಮ್ಮ ಇತಿಹಾಸದ ಪುಟಗಳಲ್ಲಿ ಮೊದಲನೆ ಮಹಾಯುದ್ದ ಮತ್ತು ಎರಡನೇ ಮಹಾಯುದ್ದದ  ಬೀಕರತೆಯನ್ನು ಸಾರಿ ಸಾರಿ ಹೇಳಿದರೂ ಸಹ ಜಾಗತಿಕ ಬಂಡವಾಳಶಾಹಿಗಳು, ಶಸ್ತ್ರಾಸ್ತ್ರ ಮಾರಾಟಗಾರರು ಪರೋಕ್ಷವಾಗಿ ದ್ವೇಷ ಬಿತ್ತುವ ಕಾರ್ಯಗಳಿಗೆ ಬಂಡವಾಳ ಒದಗಿಸುವ ಅರೋಪಗಳು ಕೇಳಿ ಬರುತ್ತಿವೆ.

ಪ್ರಸ್ತುತ ಸಮಾಜದಲ್ಲಿ  ಜಾತಿ, ಧರ್ಮವನ್ನು ಬಳಸಿಕೊಂಡು ಅಧಿಕಾರಕ್ಕೆ ಬರುವ  ರಾಜಕೀಯ ಪಕ್ಷಗಳು, ಒಡ ಹುಟ್ಟಿದ ಸಹೋದರರೇ ದಾಯಾದಿಗಳಾಗಿ ಹೊಡೆದಾಡುವ ಸ್ಥಿತಿಯನ್ನು ಸೃಷ್ಟಿಸಿವೆ. ಹೀಗಾಗಿ ಯುದ್ದ ಮುಗಿದ ಮೇಲೆ ಶಾಂತಿಯ ಬಗ್ಗೆ ಮಾತನಾಡುವ ಬದಲು ಯುದ್ದದ ವಾತಾವರಣವೇ ಸೃಷ್ಟಿಯಾಗದಂತೆ ತಡೆಯುವ ಜವಾಬ್ದಾರಿ ರಂಗಕಲೆಯದ್ದೂ ಕೂಡ ಹಾಗಿದೆ.  ಯುದ್ದ ಯಾವ ರೀತಿಯಲ್ಲಿ ಮನುಷ್ಯನಲ್ಲಿ ಕ್ರೌರ್ಯತೆಯನ್ನು ತುಂಬುತ್ತದೆ, ಪ್ರೀತಿಯ ಸಹೋದರರೇ ಕಾದಾಡುವಂತೆ ಮಾಡುತ್ತದೆ ಎಂಬುದನ್ನು ವಿವರವಾಗಿ ಬಿಚ್ಚಿಡುವಂತಹ ಮನೋಜ್ಞ ಅಭಿನಯದ ನಾಟಕ ’ಬಾಹುಬಲಿ ವಿಜಯಂ’.

ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯಲ್ಲಿ ಹಮ್ಮಿಕೊಂಡಿದ್ದ ’ರಂಗಸಂಗಮ ಮತ್ತು ಗುರುವಂದನೆ’  ಎಲ್ಲಾ ಹಿಂದಿನ ಮತ್ತು ಇಂದಿನ ವಿದ್ಯಾರ್ಥಿಗಳ ಸಮಾಗಮದಲ್ಲಿ ಬಾಹುಬಲಿ ವಿಜಯಂ ನಾಟಕವನ್ನು ಧಾತ್ರಿ ಸಂಸ್ಥೆಯಿಂದ ಪ್ರದರ್ಶಿಸಲಾಯಿತು. ಭರತ ಮತ್ತು ಬಾಹುಬಲಿ ಕಥೆ ಮೊದಲಿನಿಂದಲೂ ಸಹ ಜನಜನಿತವಾಗಿರುವ ಕಥೆ. ‘ಅಧಿಕಾರದ ಅಮಲು ಪ್ರೀತಿಯನ್ನು  ಅಳಿಸಿ ಬರೀ ದ್ವೇಷವನ್ನು  ಮಾತ್ರ ಉಳಿಸುತ್ತದೆ’ ಎಂದು ಬಾಹುಬಲಿಯು ತನ್ನ ಸಹೋದರನ ವಿರುದ್ದವೇ ಕಾದಾಡಿ ಗೆದ್ದ ನಂತರ ತಾಳುವ ವೈರಾಗ್ಯ ಜಗಜ್ಜಾಹಿರು ಮಾಡುತ್ತದೆ.

ಇಂದು ತಮ್ಮ ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಮಾತ್ರ ಅಲ್ಲದೇ, ಮಾಧ್ಯಮಗಳು ಸಹ ಇನ್ನೊಂದು ದೇಶದ ಮೇಲಿನ ದ್ವೇಶವೇ ಪ್ರಧಾನವಾಗಿ ಕೊಚ್ಚಿ ಕೊಲ್ಲಿ ಎನ್ನುವಭಾಷೆ ಬಳಸುತ್ತಾ ಮಾಧ್ಯಮಗಳ ನಿರ್ವಹಿಸಬೇಕಾದ ಮೌಲ್ಯವನ್ನು ಮರೆತಿರುವುದು ದುರಂತ.

ಬಾಹುಬಲಿ ವಿಜಯಂ ಪಂಪನ ಆದಿಪುರಾಣ ಮಹಾಕಾವ್ಯದ ಆಯ್ದ ಭಾಗವಾದ ಭರತ ಮತ್ತು ಬಾಹುಬಲಿಯ ದಾಯಾದಿ ಕಲಹವಾಗಿದ್ದು, ಜೊತೆಗೆ ಜಿ.ಪಿ.ರಾಜರತ್ನಂ ರವರ ಬಾಹುಬಲಿ ವಿಜಯ ನಾಟಕದ ಕೆಲವು  ಆಯಾಮಗಳನ್ನು  ಬಳಸಿ ಶ್ರೀರಂಗ ಪಾರ್ವತೀಕರವರು ರಂಗ ಪಠ್ಯವಾಗಿಸಿದ್ದಾರೆ. ಯುವ ರಂಗಕರ್ಮಿ ಭೀಮೇಶ್.ಹೆಚ್.ಎನ್ ರವರು ಈ ನಾಟಕವನ್ನು ಪ್ರೇಕ್ಷಕರಿಗೆ ಆಪ್ತವಾಗುವಂತೆ ನಿರ್ದೇಶನ ಮಾಡಿದ್ದಾರೆ.  ಇದು ಹತ್ತನೇ ಶತಮಾನದ ಕಥೆಯಾದರೂ ಪ್ರಸ್ತುತ ರಾಜಕೀಯ, ಮನುಷ್ಯನ ದುರಾಸೆಯನ್ನು ಎತ್ತಿ ತೋರಿಸುತ್ತದೆ.

ಈ ನಾಟಕವನ್ನು ಧಾತ್ರಿ ಸಂಸ್ಥೆಯ ಕಲಾವಿದರು ಅಭಿನಯಿಸಿದ್ದು, ಸಂಗೀತವನ್ನು ಅರುಣ್‌ ಕುಮಾರ್‍ ಮಾಡಿದ್ದಾರೆ ಹಾಗೂ ಸಂಗೀತ ನಿರ್ವಹಣೆಯನ್ನು ಶಿವರಾಜ್ ಬಳ್ಳಾರಿ, ಭರತ್ ಡಿಂಗ್ರಿ ಮಾಡಿದ್ದಾರೆ.. ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕಿನ ಸಿರಿಗೆರೆಯೆಂಬ ಗ್ರಾಮದಲ್ಲಿ ಯುವ ಗೆಳೆಯರು ಕಟ್ಟಿರುವ ಈ ಸಂಸ್ಥೆ ಹಲವು ವರ್ಷಗಳಿಂದ  ಯುವರಂಗಕರ್ಮಿಗಳೇ ಸೇರಿ ಹೊಸ ಹೊಸ ನಾಟಕಗಳನ್ನು ಕಟ್ಟಿ ರಾಜ್ಯದ್ಯಾಂತ ರಂಗಸಂಚಾರ  ಮಾಡುತ್ತಿದ್ದಾರೆ.

ಬಾಹುಬಲಿ ವಿಜಯಂ ಜೊತೆಗೆ  ’ಮುದ್ದಣ್ಣನ ಪ್ರಮೋಷನ್ ಪ್ರಸಂಗ” ಎಂಬ ವೈನೋದಿಕ ನಾಟಕದ ಪ್ರದರ್ಶನವನ್ನು ನೀಡುತ್ತಾ ಬರುತ್ತಿದ್ದು ಈ ನಾಟಕವನ್ನು ಸಹ ಭೀಮೇಶ್.ಹೆಚ್.ಎನ್ ರವರು ನಿರ್ದೇಶನ ಮಾಡಿದ್ದಾರೆ.  ಈ ನಾಟಕ ಪ್ರದರ್ಶನಗಳನ್ನು ಆಯೋಜಿಸುವವರು 9902617950, 7899018729 ಗೆ ಸಂಪರ್ಕಿಸಬಹುದಾಗಿದೆ.

Also Read: ನಟಿ ಪಾರ್ವತಿ ತಿರುವೋತ್ ಅವರಿಗೆ ಕಿರುಕುಳ: ಆರೋಪಿ ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights