ಸಿದ್ದರಾಮಯ್ಯ ಮತ್ತು ಹೆಚ್‌ಡಿಕೆ ರಾಜ್ಯದ ಬಫೂನ್‌ಗಳಿದ್ದಂತೆ: ಹಳ್ಳಿಹಕ್ಕಿ ವಿಶ್ವನಾಥ್‌

ರಾಜ್ಯದ ಜನರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ಮುಖಂಡ ಹೆಚ್‌.ಡಿ.ಕುಮಾರಸ್ವಾಮಿಯನ್ನು ಬಫೂನ್‌ಗಳ ತರ ನೋಡುತ್ತಾರೆ ಎಂದು ವಿಧಾನ ಪರಿಷತ್ ಬಿಜೆಪಿ‌ ಸದಸ್ಯ ಹೆಚ್‌‌.ವಿಶ್ವಾನಾಥ್‌ ವ್ಯಂಗ್ಯವಾಡಿದ್ದಾರೆ.

ಪರಿಷತ್‌‌ನ ಉಪಸಭಾಪತಿ ಧರ್ಮೇಗೌಡ ಅವರ ಆತ್ಮಹತ್ಯೆಯ ಬಗ್ಗೆ ಮಾತನಾಡಿದ್ದ ಕುಮಾರಸ್ವಾಮಿ ಧರ್ಮೇಗೌಡ ಅವರದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ತಿರುಗೇಟು ನೀಡಿರುವ ಹೆಚ್​. ವಿಶ್ವನಾಥ್, “ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರೂ ಕರ್ನಾಟಕದ ಬಫೂನ್‌‌ಗಳಾಗಿದ್ದು, ಇವರ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ” ಎಂದು ಅಪಹಾಸ್ಯ ಮಾಡಿದ್ದಾರೆ.

ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರ ವಿರುದ್ಧವೂ ಕಿಡಿಕಾರಿದ ಹೆಚ್. ವಿಶ್ವನಾಥ್​, “ಮಾಜಿ ಸಿಎಂ ಸಿದ್ದರಾಮಯ್ಯ ಯಾವ ಹೋರಾಟ ಮಾಡಿದ್ದಾರೆ? ಜೆಡಿಎಸ್​ ಪಕ್ಷದಲ್ಲಿದ್ದ ಅವರನ್ನು ದೇವೇಗೌಡರು ಪಕ್ಷದಿಂದಲೇ ಹೊರ ಹಾಕಿದ್ದರು. ನಂತರ ಅವರು ಕಾಂಗ್ರೆಸ್​ಗೆ ಬಂದರು. ಅಲ್ಲೂ ಅವರೇನು ಹೋರಾಟ ಮಾಡಿಲ್ಲ. ನಾವು ಹೋರಾಟ ಮಾದ್ದೇವೆ, ಅವರು ಮುಖ್ಯಮಂತ್ರಿ ಆದರು. ಬೇಕಿದ್ದರೆ ನಾನೇ ಹೋರಾಟದ ಕುರಿತು ಸಿದ್ದರಾಮಯ್ಯ ಅವರಿಗೆ ಪಾಠ ಮಾಡಲು ಸಿದ್ದನಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಯ ಬ್ರಾಹ್ಮಣ್ಯ v/s ಸಿದ್ದರಾಮಯ್ಯರ ಬಾಡೂಟ: ಮಾಂಸಾಹಾರದ ಬಗ್ಗೆ ಸಿದ್ದು ಹೇಳಿಕೆಗಳು ಹೀಗಿವೆ!

“ಕುಮಾರಸ್ವಾಮಿ ಧರ್ಮೇಗೌಡ ಅವರ ಸಾವು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸಿದ್ದಾರೆ. ಅಸಲಿಗೆ ಈ ಇಬ್ಬರೂ ನಾಯಕರು ಯಾಕೆ ಮಾತನಾಡುತ್ತಾರೆ?. ಜನರೇ ಇವರನ್ನು ಬಫೂನ್​ ತರ ನೋಡುತ್ತಿರುವಾಗ ಇವರು ಯಾರಿಗಾಗಿ ಮಾತನಾಡುತ್ತಿದ್ದಾರೆ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದ ಜೊತೆ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ವಿಶ್ವನಾಥ್, “ಸಚಿವ ಸಂಪುಟದ ಬಗ್ಗೆ ಎಲ್ಲರೂ ಮಾತನಾಡುವುದು ಸರಿಯಲ್ಲ. ಮುಖ್ಯಮಂತ್ರಿಯಾಗಲಿ ಬೇರೆ ಯಾರೇ ಆಗಲಿ ಅದರ ಬಗ್ಗೆ ದಿನವಿಡೀ ಮಾತನಾಡುವುದು ಸರಿಯಲ್ಲ. ಹೈಕಮಾಂಡ್ ಯಾವಾಗ ಗ್ರೀನ್ ಸಿಗ್ನಲ್ ಕೊಡುತ್ತೋ, ಅವಾಗ ಸಂಪುಟ ವಿಸ್ತರಣೆ ಆಗುತ್ತದೆ. ಪ್ರತಿ ದಿನ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುವ ಬದಲು ಅಭಿವೃದ್ಧಿಯ ಕುರಿತು ಮಾತನಾಡುವುದು ಉತ್ತಮ. ಹಿರಿಯನಾಗಿ ನನ್ನ ಅನುಭವದ ಆಧಾರದ ಮೇಲೆ‌ ಈ ಮಾತು ಹೇಳುತ್ತಿದ್ದೇನೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಮಹಿಳಾ ಸದಸ್ಯರ ಬದಲು ಗಂಡಂದಿರು ದರ್ಬಾರ್ ಮಾಡೋಕೆ ಹೋಗ್ಬೇಡಿ: ಸಿದ್ದರಾಮಯ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights