ವಿಜಯಪುರ ದಲಿತ ಬಾಲಕಿಯರ ಅತ್ಯಾಚಾರ ಪ್ರಕರಣ; ಕುಂಟುತಿರುವ ತನಿಖೆ ವಿರುದ್ದ ಮಾದಾರ ಚೆನ್ನಯ್ಯ ಆಕ್ರೋಶ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕುದುರಿ ಸಾಲವಾಡಗಿ ಗ್ರಾಮದಲ್ಲಿ ನಡೆದಿದ್ದ ಇಬ್ಬರು ದಲಿತ ಬಾಲಕಿಯರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ನಿಧಾನಗತಿಯಲ್ಲಿ ನಡೆಯುತ್ತಿದೆ. ತನಿಖೆಯನ್ನು ಚುರುಕುಗೊಳಿಸದ ಪೊಲೀಸರ ವಿರುದ್ದ ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಲಿತ ಹೆಣ್ಣು ಮಕ್ಕಳ ಮೇಲೆ ಬರ್ಬರವಾಗಿ ಅತ್ಯಾಚಾರ ಮಾಡಿ, ಅತ್ಯಂತ ಹೇಯವಾಗಿ ಕೊಲೆಮಾಡಿದ ಘಟನೆ ನಡೆದು ಒಂದು ವಾರವಾದರೂ ಪೋಲೀಸ್ ಇಲಾಖೆ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

’ಮಾದಿಗ ಸಮಾಜದ 13 ಮತ್ತು 15 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಕಿಡಿಗೇಡಿಗಳ ಗುಂಪೊಂದು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರವೆಸಿಗಿದ್ದಾರೆ. ನಂತರ ಇಬ್ಬರು ಹೆಣ್ಣುಮಕ್ಕಳನ್ನು ಕಟ್ಟಿಹಾಕಿ ಹತ್ತಿರದ ಬಾವಿಗೆ ಎಸೆದು ಕೊಲ್ಲಲಾಗಿದೆ. ಇಂತಹ ಹೇಯ ಘಟನೆ ನಡೆದು ವಾರವಾದರೂ ಪೋಲೀಸ್ ಇಲಾಖೆ ಕಠಿಣ , ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿಲ್ಲ’ ಎಂದು ಸ್ವಾಮೀಜಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಇಬ್ಬರು ಅಪ್ರಾಪ್ತ ದಲಿತ ಬಾಲಕಿಯರ ಮೇಲೆ ಅತ್ಯಾಚಾರ; ಕೈ ಕಟ್ಟಿ ಬಾವಿಗೆ ಎಸೆದು ಕೊಲೆಗೈದ ದುರುಳರು!

’ಸರ್ಕಾರದಿಂದ ಪರಿಹಾರ ಕೊಡಲು ಬಂದಾಗ ಸಂತ್ರಸ್ತರ ಪೋಷಕರು ಮೊದಲು ಅತ್ಯಾಚಾರ , ಕೊಲೆ ಮಾಡಿದ ತಪ್ಪಿಸ್ಥರನ್ನು ಬಂಧಿಸಿ, ಗಲ್ಲು ಶಿಕ್ಷೆ ವಿಧಿಸಿ. ನಿಮ್ಮ ಪರಿಹಾರದಿಂದ ಕಳೆದುಹೋದ ಹೆಣ್ಣುಮಕ್ಕಳು ನಮಗೆ ವಾಪಸ್ ಸಿಗುವುದಿಲ್ಲ ಎಂದು ದಿಟ್ಟವಾಗಿ ಉತ್ತರಿಸಿದ್ದಾರೆ. ಮಾದಾರ ಚೆನ್ನಯ್ಯ ಗುರುಪೀಠ ಸಂತ್ರಸ್ತ ಪೋಷಕರ ಜೊತೆಗಿದ್ದು, ವಿಜಯಪುರದ ಜಿಲ್ಲಾಧಿಕಾರಿ ಹಾಗು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಿಗೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಲು ಒತ್ತಾಯಿಸಿದೆ’ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ದೆಹಲಿಯ ನಿರ್ಭಯ ಪ್ರಕರಣದ ಹಿನ್ನೆಯಲ್ಲಿ ಅತ್ಯಾಚಾರದ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗಬೇಕು . ಪೊಲೀಸ್ ಇಲಾಖೆ ಮೂವರನ್ನು ಬಂಧಿಸಿರುವುದಾಗಿ ಹೇಳಿದೆ ಆದರೆ, ಬಂಧಿತರ ಯಾವ ವಿವರವನ್ನು ಬಹಿರಂಗಪಡಿಸಿಲ್ಲ . ಗ್ರಾಮದ ಪ್ರಮುಖರ ಮಾಹಿತಿಯಂತೆ ಕಿಡಿಗೇಡಿಗಳ ಗುಂಪಿನಲ್ಲಿ ಇನ್ನು ಕೆಲವರಿದ್ದಾರೆ. ಎಲ್ಲರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಪಡಿಸುತ್ತೇನೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಮೇ 12 ರ ಮಧ್ಯಾಹ್ನ ಬಸವನಬಾಗೇವಾಡಿ ತಾಲೂಕಿನ ಕುದುರೆ ಸಾಲವಾಡಗಿ ಗ್ರಾಮದ 14 ಮತ್ತು 15 ವರ್ಷದ ಇಬ್ಬರು ಅಪ್ರಾಪ್ತ ಬಾಲಕಿಯರು ಕಾಣೆಯಾಗಿದ್ದರು. ಕಾಣೆಯಾದ ಎರಡು ದಿನಗಳ ನಂತರ ಇಬ್ಬರ ಮೃತ ದೇಹಗಳು ಕೈ ಕಟ್ಟಿದ ಸ್ಥಿತಿಯಲ್ಲಿ ಬಾವಿಯೊಂದರಲ್ಲಿ ಪತ್ತೆಯಾಗಿದ್ದವು. ಬಾಲಕಿಯರಿಗೆ ನ್ಯಾಯ ದೊರಕಬೇಕು ಎಂದು ಅನೇಕ ದಲಿತ ಸಂಘಟನೆಗಳು ಆಗ್ರಹಿಸಿದ್ದವು.

ಇದನ್ನೂ ಓದಿ: ಕಲ್ಯಾಣ ಕರ್ನಾಟಕದ 145 ಶಿಕ್ಷಕರು ಕೊರೊನಾಗೆ ಬಲಿ; 50 ಲಕ್ಷ ರೂ ಪರಿಹಾರಕ್ಕೆ ಆಗ್ರಹ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights