ಬಿಬಿಎಂಪಿ ಚುನಾವಣೆಗೆ ಅಕ್ರಮ ಹಣ ಸಂಗ್ರಹಕ್ಕಾಗಿ 4ಜಿ ವಿನಾಯಿತಿ ಬಳಕೆ: ಎಎಪಿ ಆರೋಪ

4ಜಿ ವಿನಾಯಿತಿ ಬಳಸಿಕೊಂಡು ಟೆಂಡರ್‌ ಕರೆಯದೇ ಗುತ್ತಿಗೆ ನೀಡುವುದರ ಹಿಂದೆ ಬಿಬಿಎಂಪಿ ಚುನಾವಣೆಯ ಖರ್ಚಿಗೆ ಅಕ್ರಮ ಹಣ ಸಂಪಾದಿಸುವ ದುರುದ್ದೇಶವಿದೆ ಎಂದು ಆಮ್‌ ಆದ್ಮಿ ಪಾರ್ಟಿ ಆರೋಪಿಸಿದೆ.

ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ, “ಮಳೆಯನ್ನೇ ನೆಪ ಮಾಡಿಕೊಂಡು 1,171 ಕೋಟಿ ರೂಪಾಯಿ ಅನುದಾನವನ್ನು 4ಜಿ ವಿನಾಯಿತಿಯಡಿ ನೀಡಬೇಕೆಂದು ಬಿಬಿಎಂಪಿಯು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದರಲ್ಲಿ ಭಾರೀ ಭ್ರಷ್ಟಾಚಾರಕ್ಕೆ ಅವಕಾಶವಿದ್ದು, ಬಿಬಿಎಂಪಿ ಚುನಾವಣೆಯ ಅಕ್ರಮ ಖರ್ಚಿಗಾಗಿ ಸರ್ಕಾರದ ಬೊಕ್ಕಸವನ್ನು ಲೂಟಿ ಮಾಡುವ ದುರುದ್ದೇಶವಿದೆ. ಪಾರದರ್ಶಕ ಟೆಂಡರ್‌ ನಡೆದರೆ ಹೆಚ್ಚು ಲೂಟಿ ಮಾಡಲು ಅವಕಾಶ ಸಿಗುವುದಿಲ್ಲವೆಂದು ಬಿಬಿಎಂಪಿಯು 4ಜಿ ವಿನಾಯಿತಿಯನ್ನು ಬಳಸಿಕೊಳ್ಳಲು ಯೋಜನೆ ರೂಪಿಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ರಸ್ತೆಗಳು ಹಾಳಾಗಿರಲು ಕಾಮಗಾರಿಗಳಲ್ಲಿ ನಡೆದ ಭ್ರಷ್ಟಾಚಾರ ಕಾರಣವೇ ಹೊರತು ಮಳೆಯಲ್ಲ. 40% ಅಕ್ರಮ ನಡೆಯದಿದ್ದರೆ ಎಷ್ಟೇ ಮಳೆ ಬಂದರೂ ಹಾಳಾಗದಂತಹ ರಸ್ತೆ ನಿರ್ಮಾಣಗೊಳ್ಳುತ್ತಿತ್ತು. ಗುತ್ತಿಗೆ ಅಕ್ರಮವನ್ನು ನ್ಯಾಯಾಂಗ ತನಿಖೆಗೆ ನೀಡಲು ಹಿಂದೇಟು ಹಾಕುತ್ತಿರುವ ಸರ್ಕಾರವು ಈಗ 4ಜಿ ವಿನಾಯಿತಿ ಮೂಲಕ ಇನ್ನಷ್ಟು ಲೂಟಿಗೆ ಮುಂದಾಗಿದೆ. ಯಾವುದೇ ಕಾರಣಕ್ಕೂ 4ಜಿ ವಿನಾಯಿತಿ ನೀಡಬಾರದು. ಎಲ್ಲ ಕಾಮಗಾರಿಗಳೂ ಟೆಂಡರ್‌ ಪ್ರಕ್ರಿಯೆ ಮೂಲಕವೇ ನಡೆಯಬೇಕು. ಇಲ್ಲದಿದ್ದರೆ ಆಮ್‌ ಆದ್ಮಿ ಪಾರ್ಟಿಯು ಬೃಹತ್‌ ಹೋರಾಟಕ್ಕೆ ಯೋಜನೆ ರೂಪಿಸಲಿದೆ” ಎಂದು ಮೋಹನ್‌ ದಾಸರಿ ಎಚ್ಚರಿಕೆ ನೀಡಿದರು.

“4ಜಿ ವಿನಾಯಿತಿ ಮೂಲಕ ನಡೆಯುವ ಕಾಮಗಾರಿಗಳಲ್ಲಿ ಭ್ರಷ್ಟಾಚಾರವು ಅವ್ಯಾಹತವಾಗಿ ನಡೆಯುತ್ತದೆ. ತಮ್ಮ ಹಿಂಬಾಲಕರಿಗೆ ಗುತ್ತಿಗೆ ಕಾಮಗಾರಿಗಳನ್ನು ನೀಡಿ, ಅದಕ್ಕೆ ಪ್ರತಿಯಾಗಿ ಬೃಹತ್‌ ಪ್ರಮಾಣದ ಕಮಿಷನ್‌ ಪಡೆಯುತ್ತಾರೆ. ಕಾಮಗಾರಿ ನಡೆಯದೇ ಅನುದಾನ ಲೂಟಿಯಾಗುವ ಸಾಧ್ಯತೆಯೂ ಇರುತ್ತದೆ. ಒಮ್ಮೆ 4ಜಿ ವಿನಾಯಿತಿ ನೀಡಿದರೆ, ಅದರಲ್ಲಾಗುವ ಅಕ್ರಮಕ್ಕೆ ಕಡಿವಾಣ ಹಾಕುವುದು ಅಸಾಧ್ಯ. ಆದ್ದರಿಂದ ಟೆಂಡರ್‌ ಮೂಲಕವೇ ಎಲ್ಲಾ ಕಾಮಗಾರಿಗಳನ್ನು ನಡೆಸುತ್ತೇವೆಂದು ಸಿಎಂ ಬಸವರಾಜ್‌ ಬೊಮ್ಮಾಯಿ ಕೂಡಲೇ ಸ್ಪಷ್ಟನೆ ನೀಡಬೇಕು” ಎಂದು ಆಗ್ರಹಿಸಿದರು.

ಇದನ್ನೂ ಓದಿ: ಜೆಡಿಎಸ್ ತೊರೆದ ಮಾಜಿ ಶಾಸಕ ಕೋನರೆಡ್ಡಿ; ಕಾಂಗ್ರೆಸ್ ಸೇರುವ ಸುಳಿವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights