ವಲಸಿಗರಿಗೆ ಅನಗತ್ಯ ಪ್ರಾಮುಖ್ಯತೆ: ಬಿಜೆಪಿ ಹೈಕಮಾಂಡ್ ವಿರುದ್ದ ಬಂಗಾಳ ಕೇಸರಿ ಶಾಸಕರ ಆಕ್ರೋಶ!

ನಾಲ್ಕು ತಿಂಗಳಲ್ಲಿ ನಾಲ್ವರು ಬಿಜೆಪಿ ಶಾಸಕರು ಟಿಎಂಸಿಗೆ ಮರಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಟಿಎಂಸಿ ನಾಯಕರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿ ಹೈಕಮಾಂಡ್‌ ತಪ್ಪು ಮಾಡಿದೆ ಎಂದು ಕೇಸರಿ ಪಕ್ಷದ ಕೂಚ್ ಬಿಹಾರ್ ದಕ್ಷಿಣ ಕ್ಷೇತ್ರದ ಶಾಸಕ ನಿಖಿಲ್ ರಂಜನ್ ಡೇ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟಿಎಂಸಿಗರನ್ನು ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೆ ಬಿಜೆಪಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಪಕ್ಷದ ಹೈಕಮಾಂಡ್‌ ಟಿಎಂಸಿ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡು ತಪ್ಪು ಮಾಡಿದೆ. ಟಿಎಂಸಿಯಿಂದ ಬಂದವರು ಎಂದಿಗೂ ಬಿಜೆಪಿ ಸಿದ್ಧಾಂತದೊಂದಿಗೆ ಹೊಂದಿಕೊಳ್ಳುವುದಿಲ್ಲ” ಎಂದು ರಂಜನ್‌ ಡೇ ಹೇಳಿದ್ದಾರೆ.

“ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತದೆ ಎಂಬ ಗ್ರಹಿಕೆಯಿಂದ ಈ ನಾಯಕರು ಬಿಜೆಪಿಗೆ ಸೇರಿಕೊಂಡರು. ಅವರಿಗೆ ನಮ್ಮ ಪಕ್ಷದಿಂದ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ಪಕ್ಷಕ್ಕೆ ಅಧಿಕಾರಕ್ಕೆ ಬಾರದ ಹಿನ್ನೆಲೆಯಲ್ಲಿ ಈಗ ಅವರು ವಾಪಸ್‌ ಹೋಗುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

ಬಿಜೆಪಿಯಿಂದ ಟಿಕೆಟ್ ಪಡೆದು ಶಾಸಕರಾಗಿ ಆಯ್ಕೆಯಾದ ಬಿಜೆಪಿ ಉಪಾಧ್ಯಕ್ಷ ಮುಕುಲ್ ರಾಯ್ ಅವರು ಮೇ ತಿಂಗಳಲ್ಲಿ ಟಿಎಂಸಿಗೆ ಮರಳಿದ್ದರು. ಅವರ ನಂತರ ಇತರ ಮೂರು ಬಿಜೆಪಿ ಶಾಸಕರು ಟಿಎಂಸಿಗೆ ಸೇರಿದ್ದಾರೆ.

ಮುಕುಲ್ ರಾಯ್ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಲವಾರು ಬಿಜೆಪಿ ಶಾಸಕರು ಮುಂದಿನ ದಿನಗಳಲ್ಲಿ ಟಿಎಂಸಿಗೆ ಸೇರ್ಪಡೆಗೊಳ್ಳಲು ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾಯಗಂಜ್ ಬಿಜೆಪಿ ಶಾಸಕ ಕೃಷ್ಣ ಕಲ್ಯಾಣಿ ಅವರು ಭಾನುವಾರ ಯಾವುದೇ ಪಕ್ಷದ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ಘೋಷಿಸಿದ್ದು, ಅವರ ಭವಿಷ್ಯದ ನಡೆಯ ಬಗ್ಗೆ ಊಹಾಪೋಹಗಳು ಎದ್ದಿವೆ.

ಇದನ್ನೂ ಓದಿ: ನ್ಯಾಯಮಂಡಳಿಗಳನ್ನು ದುರ್ಬಲಗೊಳಿಸುತ್ತಿದೆ ಕೇಂದ್ರ ಸರ್ಕಾರ: ಸುಪ್ರೀಂ ಕೋರ್ಟ್‌ ಅಸಮಾಧಾನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights