ಮಹತ್ವದ ನಿರ್ಧಾರ: ರಾಜ್ಯ ಪೊಲೀಸ್‌ ಹುದ್ದೆಗಳಿಗೆ ಟ್ರಾನ್ಸ್‌ಜೆಂಡರ್‌ಗಳೂ ಅರ್ಜಿ ಸಲ್ಲಿಸಲು ಅವಕಾಶ!

ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ)ಯ ಅಡಿಯಲ್ಲಿರುವ ಕೆಎಸ್‌ಆರ್‌ಪಿ ಮತ್ತು ಇಂಡಿಯನ್ ರಿಸರ್ವ್ ಬೆಟಾಲಿಯನ್ (ಐಆರ್‌ಬಿ) ಗಳಲ್ಲಿ ವಿಶೇಷ ಮೀಸಲು ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳಿಗೆ ಪುರುಷ, ಮಹಿಳೆಯರು ಮಾತ್ರವಲ್ಲದೆ, ‘ಟ್ರಾನ್ಸ್‌ಜೆಂಡರ್‌’ಗಳೂ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ಹೇಳಿದೆ. ಇದು ಸ್ವಾಗತಾರ್ಹ ಮತ್ತು ಪ್ರಗತಿಪರತೆಯ ಮೊದಲ ಹೆಜ್ಜೆ ಎಂದು ಹೇಳಲಾಗಿದೆ.

ಸೋಮವಾರ ಹೊರಡಿಸಿದ ಅಧಿಸೂಚನೆಯು, ಕರ್ನಾಟಕದಲ್ಲಿ ಟ್ರಾನ್ಸ್‌ಜೆಂಡರ್‌‌ ಸಮುದಾಯದಿಂದ ಅರ್ಜಿಗಳನ್ನು ಆಹ್ವಾನಿಸಿದ ಮೊದಲ ಸರ್ಕಾರಿ ಇಲಾಖೆಯಾಗಿ ರಾಜ್ಯ ಪೊಲೀಸ್‌ ಇಲಾಖೆಯು ಹೊರಹೊಮ್ಮಿದೆ ಎಂದು ಮಾಧ್ಯಮಗಳು ಉಲ್ಲೇಖಿಸಿದೆ. 70 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜನವರಿ 18 ಕೊನೆಯ ದಿನಾಂಕವಾಗಿದೆ.

ಈ ವರ್ಷ ಜುಲೈನಲ್ಲಿ ಕರ್ನಾಟಕ ಹೈಕೋರ್ಟ್‌ನ ಮಹತ್ವದ ನಿರ್ದೇಶನದ ನಂತರ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಸಾರ್ವಜನಿಕ ಉದ್ಯೋಗದಲ್ಲಿ ಉದ್ಯೋಗಗಳನ್ನು ಕಾಯ್ದಿರಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ.

ವಿಶೇಷ ಮೀಸಲು ಕಾನ್ಸ್‌ಟೇಬಲ್ ಪಡೆಯಲ್ಲಿ 2,467 ಹುದ್ದೆಗಳು ಖಾಲಿಯಾದ ನಂತರ, ನಗರ ಮೂಲದ ಎನ್‌ಜಿಒ ಮತ್ತು ಹಕ್ಕುಗಳ ಹೋರಾಟ ಗುಂಪಾದ ‘ಸಂಗಮ’ ಮತ್ತು ಹಿರಿಯ ವಕೀಲ ಬಿಟಿ ವೆಂಕಟೇಶ್ ಪ್ರತಿನಿಧಿಸುವ ಸಾಮಾಜಿಕ ಹೋರಾಟಗಾರ್ತಿ ನಿಶಾ ಗೂಳೂರ್ ಅವರು ಕಳೆದ ವರ್ಷ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (ಪಿಐಎಲ್) ಪ್ರತಿಕ್ರಿಯೆಯಾಗಿ ಈ ತೀರ್ಪು ಹೊರಬಿದ್ದಿವೆ. “ಜುಲೈ 2021 ರಲ್ಲಿ ಹೈಕೋರ್ಟ್ ಎಲ್ಲಾ ವರ್ಗಗಳಲ್ಲಿ ಟ್ರಾನ್ಸ್‌ಜೆಂಡರ್‌ಗಳಿಗೆ 1% ದಷ್ಟು ಮೀಸಲಾತಿಯನ್ನು ಆದೇಶಿಸಿತು” ಎಂದು ವಕೀಲ ವೆಂಕಟೇಶ್ ಹೇಳಿದ್ದಾರೆ ಎಂದು TNIE ವರದಿ ಮಾಡಿದೆ.

“ಇದು ಭಾರತದಲ್ಲೇ ಮೊದಲ ಹೆಜ್ಜೆಯಾಗಿದ್ದು, ಸರ್ಕಾರವು ತನ್ನ ನೇಮಕಾತಿಯಲ್ಲಿ ಟ್ರಾನ್ಸ್‌ಜೆಂಡರ್‌ಗಳಿಗೆ ಸಮಾನ ಸ್ಥಾನಮಾನವನ್ನು ಘೋಷಿಸಿದೆ. ಮೀಸಲಾತಿ ನೀಡುವಂತೆ ನ್ಯಾಯಾಲಯ ನೀಡಿರುವ ನಿರ್ದೇಶನ ಶ್ಲಾಘನೀಯ” ಎಂದು ವೆಂಕಟೇಶ್ ಹೇಳಿದ್ದಾರೆ.

ಈ ಮಧ್ಯೆ, ಟ್ರಾನ್ಸ್‌‌ಜೆಂಡರ್‌‌ ಸಮುದಾಯದಿಂದ ಅರ್ಜಿಗಳನ್ನು ಆಹ್ವಾನಿಸಿದ ರಾಜ್ಯ ಪೊಲೀಸ್‌ ಇಲಾಖೆಯ ನಡೆಯನ್ನು ಟ್ರಾನ್ಸ್‌‌ಜೆಂಡರ್‌‌‌ ಸಮುದಾಯಕ್ಕಾಗಿ ಕೆಲಸ ಮಾಡುತ್ತಿರುವ NGO ‘ಸಂಗಮ’ ಸ್ವಾಗತಿಸಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಎಸ್ಮಾ ಜಾರಿ: ಆರು ತಿಂಗಳುಗಳ ಕಾಲ ಪ್ರತಿಭಟನೆ ನಡೆಸದಂತೆ ನಿರ್ಬಂಧ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights