ತಿವಾರಿ-ದಿಂಡಾ: ಒಂದೇ ತಂಡದಲ್ಲಿದ್ದು ವಿಭಿನ್ನ ಪಕ್ಷಗಳಿಗೆ ಸೇರ್ಪಡೆಯಾದ ಆತ್ಮೀಯ ಗೆಳೆಯರ ಸಂದರ್ಶನ!

ಫೆಬ್ರವರಿ 24 ರಂದು ಕ್ರಿಕೆಟಿಗ ಮತ್ತು ಬಂಗಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಮನೋಜ್ ತಿವಾರಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಸೇರಿದ್ದಾರೆ. ಅದೇ ದಿನ ಸಂಜೆ, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ, ತಿವಾರಿ ಅವರ ಸಹ ಆಟಗಾರನಾಗಿದ್ದ ಅಶೋಕ್ ದಿಂಡಾ ಅವರು ಬಿಜೆಪಿಗೆ ಸೇರಿದ್ದಾರೆ.

ತಿವಾರಿ ಮತ್ತು ದಿಂಡಾ ಒಂದೇ ದಿನ ರಾಜಕೀಯಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ. ಇಬ್ಬರು ಕ್ರಿಕೆಟಿಗರು ತಮ್ಮ ಅರ್ಧದಷ್ಟು ಜೀವನವನ್ನು ಪರಸ್ಪರ ಹೇಗೆ ಕಳೆದಿದ್ದಾರೆ, ಮದುವೆಯ ದಿನಾಂಕಗಳಿಗಾಗಿ ಪರಸ್ಪರ ಕಾದಿದ್ದಾರೆ ಮತ್ತು ಈಗ ರಾಜಕೀಯದಲ್ಲಿ ಅವರ ಹೊಸ ಇನ್ನಿಂಗ್ಸ್ ಪಡೆದುಕೊಂಡಿದ್ದು, ಇಬ್ಬರೊಂದಿಗೆ ದಿ ಕ್ವಿಂಟ್‌ ಸಂದರ್ಶನ ನಡೆಸಿದೆ.

ಒಂದೇ ತಂಡಗಳು, ಒಂದೇ ಅಪಾರ್ಟ್ಮೆಂಟ್ ಸಂಕೀರ್ಣ, ಒಂದೇ ವರ್ಷ ಮದುವೆ, ಆದರೆ ವಿಭಿನ್ನ ಪಕ್ಷಗಳು:

“ನಾವು ನಮ್ಮ ಜೀವನದ ಅರ್ಧದಷ್ಟು ಭಾಗವನ್ನು ಒಟ್ಟಿಗೆ ಕಳೆದಿದ್ದೇವೆ” ಎಂದು ತಿವಾರಿ ಬಗ್ಗೆ ಕೇಳಿದಾಗ ದಿಂಡಾ ಹೇಳುತ್ತಾರೆ.

ಎರಡೂ ಕ್ರಿಕೆಟಿಗರು ಪೂರ್ವ ಕೋಲ್ಕತ್ತಾದ ಒಂದೇ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ವಾಸಿಸುತ್ತಿದ್ದಾರೆ.

ಅವರು ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಒಂದೇ ತಂಡದಲ್ಲಿ ಆಡಿದ್ದಾರೆ. ಆದಾಗ್ಯೂ, ಅವರ ಸುದೀರ್ಘ ಕ್ರಿಕೆಟ್‌ ಜೀವನವು ಬಂಗಾಳ ತಂಡದಲ್ಲಿತ್ತು. ಅಲ್ಲಿ ತಿವಾರಿ ನಾಯಕತ್ವದ ನೇತೃತ್ವದಲ್ಲಿ ದಿಂಡಾ ಆಡಿದ್ದಾರೆ.

“ನಾವು 4-5 ದಿನಗಳ ಅಂತರದಲ್ಲಿ ವಿವಾಹವಾದೆವು” ಎಂದು ದಿಂಡಾ ಹೇಳುತ್ತಾರೆ. ಇಬ್ಬರು ಸ್ಟಾರ್‌ ಪ್ಲೆಯರ್‌ಗಳ ವಿವಾಹ ಸಂದರ್ಭದಲ್ಲಿನ ತೊಡಕುಗಳನ್ನು ತಪ್ಪಿಸುವ ಸಲುವಾಗಿ ತಾನು ಮತ್ತು ತಿವಾರಿ ಅವರು ವಿವಾಹದ ದಿನಾಂಕಗಳನ್ನು ಪರಸ್ಪರ ಚರ್ಚಿಸಿ ನಿರ್ಧರಿಸಿದ್ದೆವು. ನಮ್ಮ ರಾಜಕೀಯ ಪ್ರವೇಶದ ಬಗ್ಗೆಯೂ ಇಬ್ಬರಿಗೂ ತಿಳಿದಿತ್ತು. ನಾನು ಯಾವ ಪಕ್ಷಕ್ಕೆ ಸೇರುತ್ತೇನೆ ಎಂದು ತಿವಾರಿಗೂ, ಅವರು ಯಾವ ಪಕ್ಷಕ್ಕೆ ಸೇರುತ್ತಾರೆ ಎಂದು ತನಗೂ ಮೊದಲೇ ತಿಳಿದಿತ್ತು ಎಂದು ದಿಂಡಾ ಹೇಳಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ BJP ಆಕ್ರಮಣ; ಗಂಟೆಗೆ 50 ಲಕ್ಷ ಮೆಸೇಜ್‌ ಕಳಿಸುವಂತೆ ಕಾರ್ಯಕರ್ತರಿಗೆ ಅಮಿತ್‌ ಶಾ ಸೂಚನೆ!

“ಅವರು ಬೆಳಿಗ್ಗೆ ನನ್ನನ್ನು ಕರೆದಿದ್ದರು. ಆದರೆ, ನಾನು ಅದೇ ದಿನ ಮಧ್ಯಾಹ್ನ ಟಿಎಂಸಿ ಸೇರುತ್ತಿದ್ದೆ. ನಾನು ಅಲ್ಲಿಗೆ ಹೊರಡಬೇಕಿತ್ತು. ಹಾಗಾಗಿ ನಾನು ಅವಸರದಲ್ಲಿದ್ದೆ. ಇನ್ನೂ ಹಲವಾರು ಕರೆಗಳು ಬಂದವು, ಹಾಗಾಗಿ ನಾನು ಅವನ ಕರೆಯನ್ನು ತಪ್ಪಿಸಿಕೊಂಡೆ. ಆದರೆ ಅವರು ಬಿಜೆಪಿಗೆ ಸೇರುತ್ತೇರೆ ಎಂದು ನಾನು ಭಾವಿಸಿದ್ದೆ. ಅವರು ಅಂದು ಅದನ್ನೇ ಮಾಡಿದರು” ಎಂದು ತಿವಾರಿ ಹೇಳಿದ್ದಾರೆ.

ನನಗೆ ದಿಂಡಾ ಜೊತೆಗೆ ಉತ್ತಮ ಬಾಂಧವ್ಯವಿದೆ. ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂದು ತಿವಾರಿ ಆಶಿಸಿದ್ದಾರೆ.

“ನನಗೆ ಮನೋಜ್ ಗೊತ್ತು. ಅವನಿಗೆ ವಿಭಿನ್ನ ಚಿಂತನೆ ಇದೆ. ಆದಕ್ಕಾಗಿ ಅವರು ಒಳ್ಳೆಯದನ್ನು ಮಾಡಲು ರಾಜಕೀಯಕ್ಕೆ ಸೇರಿಕೊಂಡಿದ್ದಾರೆ ಎಂದು” ಎಂದು ದಿಂಡಾ ಹೇಳುತ್ತಾರೆ.

ದಿಂಡಾ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರೆ, ತಿವಾರಿ ಕೇವಲ ಟಿ 20 ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ.

ಒಬ್ಬರು ದೀದಿ ಕಡೆಯಿಂದ; ಮತ್ತೊಬ್ಬರು ಸುವೆಂದು ಅವರಿಂದ:

“ನಮ್ಮ ಗೌರವಾನ್ವಿತ ಮುಖ್ಯಮಂತ್ರಿ ಮಮತಾ (ಬ್ಯಾನರ್ಜಿ) ದೀದಿ ಅವರಿಂದ ನನಗೆ ಕರೆ ಬಂತು, ಈ ಬಾರಿ ನಾನು ಅವರ ಪರವಾಗಿ ರಾಜಕೀಯ ಕಣದಲ್ಲಿ ಇಳಿಬೇಕು ಎಂದು ಅವರು ಕೇಳಿದರು. 2019 ರಲ್ಲಿ (ಲೋಕಸಭಾ ಚುನಾವಣೆ) ಸಹ ಅವರು ನನ್ನನ್ನು ಕೇಳಿದ್ದರು. ಅವರು ನನ್ನನ್ನು ಇಷ್ಟಪಡುತ್ತಾರೆ.” ಬ್ಯಾನರ್ಜಿ ಅವರು ಯಾವಾಗಲೂ ನನಗೆ ಪ್ರೀತಿ ಮತ್ತು ಗೌರವವನ್ನು ನೀಡಿದ್ದಾರೆ. ಅವರು ಯಾವಾಗಲೂ ನನ್ನ ಜನ್ಮದಿನದಂದು ಭೇಟಿ ಮಾಡಲು ಬಯಸುತ್ತಾರೆ. ಅಲ್ಲದೆ, ಗ್ರೀಟಿಂಗ್‌ಅನ್ನು ಮನೆಗೆ ಕಳಿಸುತ್ತಾರೆ. ಯಾವಾಗಲೂ ನನ್ನನ್ನು ಮಮತಾ ಪ್ರೋತ್ಸಾಹಿಸುತ್ತಾರೆ” ಎಂದು ತಿವಾರಿ ಹೇಳುತ್ತಾರೆ.

ಮತ್ತೊಂದೆಡೆ, ದಿಂಡಾ ಅವರು ಮಾಜಿ ಟಿಎಂಸಿ ಸಚಿವ ಮತ್ತು ಈಗಿನ ಬಿಜೆಪಿಯ ಸ್ಟಾರ್ ಆಗಿರುವ ಸುವೆಂಡು ಅಧಿಕಾರಿಯನ್ನು ನೋಡುತ್ತಾ ಬೆಳೆದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ BJP ಎರಡಂಕಿ ದಾಟಲ್ಲ; ಗೆದ್ದರೆ ಟ್ವಿಟರ್‌ಗೆ ಗುಡ್‌-ಬೈ; ಪುನರುಚ್ಚರಿಸಿದ ಪ್ರಶಾಂತ್ ಕಿಶೋರ್

ದಿಂಡಾ ಅವರು ಪೂರ್ವ ಮಿಡ್ನಾಪೋರ್‌ನ ತಮ್ಲುಕ್‌ಗೆ ಸೇರಿದವರಾಗಿದ್ದು, ಸುವೆಂದು ಅಧಿಕಾರಿಯ ಮನೆಯ ಸಮೀಪವೇ ಇದ್ದವರು.

“ನಾನು ಸುವೆಂದು ಅಧಿಕಾರಿ ಅವರನ್ನು 14-15 ವರ್ಷಗಳಿಂದ ನೋಡಿದ್ದೇನೆ. ಅವರು ಟಿಎಂಸಿಯಲ್ಲಿದ್ದಾಗ, ನಾನು ಅವರ ಸ್ಥಳದಲ್ಲಿ ಇಳಿದು ನಮಗೆ ಒಳ್ಳೆಯ ರಸ್ತೆ ಬೇಕು ಎಂದು ಹೇಳಿದ್ದೆ. ನಮ್ಮ ಪ್ರದೇಶದಲ್ಲಿ ರಸ್ತೆ ತುಂಬಾ ಕೆಟ್ಟದಾಗಿತ್ತು. ನಮ್ಮ ಮನೆ ಮುಖ್ಯ ರಸ್ತೆಯಿಂದ ಸುಮಾರು 4-5 ಕಿ.ಮೀ. ದೂರದಲ್ಲಿದೆ. ಆ ರಸ್ತೆಯಲ್ಲಿ ಯಾವುದೇ ಕಾರು ಒಳಗೆ ಹೋಗಲು ಸಾಧ್ಯವಿಲ್ಲ. ಆಂಬ್ಯುಲೆನ್ಸ್ ಕೂಡ ಹೋಗಲಾಗುತ್ತಿರಲಿಲ್ಲ. ಆಗ ನಾನು ಅವರಿಗೆ ಒಮ್ಮೆ ಹೇಳಿದೆ. ಅವರು  ರಸ್ತೆಯನ್ನು ನಿರ್ಮಿಸಿದರು” ಎಂದು ಸುವೆಂದು ಬಗ್ಗೆ ದಿಂಡಾ ಹೇಳುತ್ತಾರೆ.

“ಸುವೆಂದು ಅವರು ಬಿಜೆಪಿ ಸೇರಿದಾಗ ನನಗೆ ಪ್ರೋತ್ಸಾಹ ದೊರಕಿತು. ಅವರು ಟಿಎಂಸಿಯಲ್ಲಿದ್ದರೆ ನಾನು ಸೇರದಿರಬಹುದು ಎಂದು ಹೇಳಿದ್ದೆ. ನಾನು ಅವರು ಬೆಳೆಯುತ್ತಿರುವುದನ್ನು ನೋಡಿದ್ದೇನೆ ಮತ್ತು ನಾನು ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ. ಅವರು ಯಾವಾಗ ಬಿಜೆಪಿಗೆ ಬಂದರು. ಆಗ ನಾನು ಸುವೇಂಡು ಡಾ ಮತ್ತು ದಿಲೀಪ್ ಘೋಷ್ ಅವರೊಂದಿಗೆ ಕೆಲಸ ಮಾಡಲು ಮತ್ತು ಅವರನ್ನು ಬಲಪಡಿಸಲು ಕೆಲಸ ಮಾಡಬಹುದು ಎಂದು ಭಾವಿಸಿದೆ. ನಾನು ಪ್ರಧಾನಿ ಮೋದಿ ಅವರ ದೊಡ್ಡ ಅಭಿಮಾನಿ” ಎಂದು ದಿಂಡಾ ಹೇಳಿದ್ದಾರೆ.

ಕ್ರಿಕೆಟ್‌ನಿಂದ ರಾಜಕೀಯ: ಏಕೆ?

ತಿವಾರಿ ಮತ್ತು ದಿಂಡಾ ಅವರ ರಾಜಕೀಯ ಪ್ರವೇಶವು ಕ್ರಿಕೆಟ್‌ ಕ್ಷೇತ್ರವು ತಮ್ಮ ವೃತ್ತಿಜೀವನವನ್ನು ಬಹಳ ಚಿಕ್ಕ ವಯಸ್ಸಿನಲ್ಲಿ ಕೊನೆಗೊಳಿಸುತ್ತದೆ ಎಂಬುದನ್ನು ಸೂಚಿಸುತ್ತದೆ. ಇಬ್ಬರೂ ಕ್ರಿಕೆಟಿಗರು ರಾಜಕೀಯಕ್ಕೆ ಸೇರಲು ಮತ್ತು ಜನರಿಗೆ ಸೇವೆ ಸಲ್ಲಿಸುವ ಸಮಯ ಎಂದು ತಿಳಿದಿದ್ದಾರೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಪುನರಾಗಮನ ಸಾಧ್ಯವಿಲ್ಲ ಎಂದು ತಮಗೆ ತಿಳಿದಿದೆ ಎಂದು ಇಬ್ಬರೂ ಹೇಳಿದ್ದಾರೆ.

“ಇತ್ತೀಚೆಗೆ ನನ್ನ ಎಡ ಮೊಣಕಾಲಿಗೆ ಗಾಯವಾಗಿದೆ. ಟಿ 20 ಪಂದ್ಯಾವಳಿ, ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿ ಮತ್ತು ವಿಜಯ್ ಹಜಾರೆ ಪಂದ್ಯಾವಳಿ ನಡೆಯುತ್ತಿದೆ. ನನ್ನ ಗಾಯದಿಂದಾಗಿ ಚಿಕಿತ್ಸೆ ಪಡೆದ ನಂತರ ಒಂದು ಪಂದ್ಯಾವಳಿಯನ್ನು ಆಡಿದ್ದೇನೆ. ನೋವಿಲ್ಲದೆ ಆಡಿದ್ದೇನೆ ಎಂದು ಭಾವಿಸಿದ್ದೆ. ಆದರೆ, ಅಗ ನಾನು ಇನ್ನೂ ನೋವನ್ನು ಅನುಭವಿಸುತ್ತಿದ್ದೆ. ಅದರಿಂದಾಗಿ ನನ್ನ ಪ್ರದರ್ಶನ ಉತ್ತಮವಾಗಿರಲಿಲ್ಲ. ಆದ್ದರಿಂದ ಮತ್ತೊಂದು ಪಂದ್ಯಾವಳಿಯನ್ನು ಅಸ್ವಸ್ಥತೆಯಿಂದ ಆಡಲು ಬಯಸುವುದಿಲ್ಲ. ಏಕೆಂದರೆ ಅದು ನನ್ನ ಕಾರ್ಯಕ್ಷಮತೆಗೆ ಅಡ್ಡಿಯಾಗುತ್ತದೆ. ನಾನು ನನ್ನ ತಂಡದಲ್ಲಿ ಸಹ ಹೊಣೆಗಾರನಾಗುತ್ತೇನೆ. ಅದಕ್ಕಾಗಿಯೇ ಒನ್‌ ಡೇ ಪಂದ್ಯಾವಳಿಗಳಿಂದ ನಿವೃತ್ತಿ ಪಡೆದುಕೊಂಡಿದ್ದಾನೆ” ಎಂದು ತಿವಾರಿ ಹೇಳಿದರು.

ಇದನ್ನೂ ಓದಿ: ಬಂಗಾಳ ಚುನಾವಣೆ: ನಂದಿಗ್ರಾಮದಲ್ಲಿ ಮಾತ್ರ ಸ್ಪರ್ಧಿಸುವಂತೆ ಮಮತಾಗೆ BJP ಸವಾಲು! ಮಮತಾ ಹೇಳಿದ್ದೇನು?

ಇದೆಲ್ಲ ನಡೆಯುತ್ತಿರುವ ಸಮಯದಲ್ಲಿ ದೀದಿ ನನ್ನನ್ನು ಕೇಳಿದರು. ಇಲ್ಲ ಎನ್ನಲು ಕಾರಣಗಳಿರಲಿಲ್ಲ. ನನಗೆ 35 ವರ್ಷ ತುಂಬಿದೆ. ಭಾರತೀಯ ಕ್ರಿಕೆಟ್‌ನಲ್ಲಿ ಇದರ ಅರ್ಥವೇನೆಂದು ನಿಮಗೆ ತಿಳಿದಿದೆ” ಎಂದು ತಿವಾರಿ ಹೇಳುತ್ತಾರೆ.

37 ವರ್ಷದ ದಿಂಡಾ ಇದೇ ರೀತಿಯ ಕಥೆಯನ್ನು ಹೊಂದಿದ್ದಾರೆ.

“ನಾನು ಈ ಬಗ್ಗೆ ಬಹಳ ಸಮಯದಿಂದ ಯೋಚಿಸುತ್ತಿದ್ದೇನೆ. ನಾನು 16 ವರ್ಷಗಳಿಂದ ಭಾರತ ಪರ ಕ್ರಿಕೆಟ್ ಆಡಿದ್ದೇನೆ. 10 ವರ್ಷಗಳ ಕಾಲ ಐಪಿಎಲ್ ಆಡಿದ್ದೇನೆ. ವೇಗದ ಬೌಲರ್ ಆಗಿ ನನ್ನ ರಾಜ್ಯ, ಭಾರತ, ಐಪಿಎಲ್ ಫ್ರ್ಯಾಂಚೈಸ್‌ಗಳಲ್ಲಿ ಉತ್ತಮ ಆಟ ನೀಡಿದ್ದೇನೆ. “ಇದೀಗ ನನ್ನ ವಯಸ್ಸು 37. ಈ ವಯಸ್ಸಿಗೆ ವೇಗದ ಬೌಲರ್ ಆಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ, ದೇಹವು 37ನೇ ವಯಸ್ಸಿಗೆ ಸ್ಪಲ್ಪ ದುರ್ಬಲತೆಯನ್ನು ಅನುಭವಿಸುತ್ತದೆ. ಆದ್ದರಿಂದ ನಿವೃತ್ತಿ ತೆಗೆದುಕೊಂಡು ಸಾರ್ವಜನಿಕರಿಗಾಗಿ ಏನಾದರೂ ಮಾಡುವ ಸಮಯ ಬಂದಿದೆ” ಎಂದು ದಿಂಡಾ ಹೇಳಿದರು.

ತಿವಾರಿ ಹೌರಾದಿಂದ ಸ್ಪರ್ಧಿಸುವ ಸಾಧ್ಯತೆಯಿದ್ದರೆ, ದಿಂಡಾ ಅವರನ್ನು ಬಹುಶಃ ಮಿಡ್ನಾಪೋರ್‌ನ ಒಂದು ಕ್ಷೇತ್ರದಿಂದ ಕಣಕ್ಕಿಳಿಸಲಾಗುವುದು. ಇಬ್ಬರೂ ಈಗ ರಾಜಕೀಯ ಚುಟುವಟಿಯಲ್ಲಿದ್ದಾರೆ. ಅವರು “ಇತರ ರಾಜಕಾರಣಿಗಳಂತೆ ಆಗುವುದಿಲ್ಲ” ಎಂದು ಹೇಳುತ್ತಾರೆ. ಈ ಚುನಾವಣೆಯಲ್ಲಿ ಅವರಿಬ್ಬರೂ ತಮ್ಮ ಪಕ್ಷಗಳಿಗೆ ಗೆಲುವಿನ ರನ್ ಗಳಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಕೃಪೆ: ದಿ ಕ್ವಿಂಟ್‌
ಕನ್ನಡಕ್ಕೆ: ಸೋಮಶೇಖರ್‌ ಚಲ್ಯ

ಇದನ್ನೂ ಓದಿ: ಬಂಗಾಳ ಚುನಾವಣಾ ಸಮೀಕ್ಷೆ: BJP-TMC-ಎಡರಂಗ ತ್ರಿಕೋನ ಸ್ಪರ್ಧೆಯಲ್ಲಿ BJPಗಿಲ್ಲ ಅಧಿಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights