‘ಪಕ್ಷಕ್ಕಾಗಿ ರಾಜೀನಾಮೆ ಕೊಟ್ಟವರ ಋಣ ತೀರಿಸಬೇಕು’- ಕೆ.ಎಸ್ ಈಶ್ವರಪ್ಪ ಹೇಳಿಕೆ ಹಿಂದಿರುವ ಮರ್ಮವೇನು?

ಪಕ್ಷಕ್ಕಾಗಿ ರಾಜೀನಾಮೆ ಕೊಟ್ಟವರ ಋಣ ತೀರಿಸಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿರುವುದರ ಮರ್ಮವೇನು ಎಂಬುದು ಚರ್ಚೆಗೆ ಗ್ರಾಸವೊದಗಿಸಿದೆ. ಉಪಚುನಾವಣೆ ನಡೆಯಲಿರುವ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿಜೆಪಿ ನಾಯಕರು ಗೊಂದಲ್ಲಿರುವಾಗಲೇ ಇಂತಹ ಹೇಳಿಕೆ ಬಂದಿರುವುದು ಕುತುಹಲ ಹೆಚ್ಚು ಮಾಡಿದೆ..

ಬಳ್ಳಾರಿಯಲ್ಲಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಆರ್.ಆರ್ ನಗರ ಹಾಗೂ ಶಿರಾ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಗಳನ್ನು ಹುಡುಕುತ್ತಿದ್ದೇವೆ. ಆದರೆ, ನಮ್ಮ ಪಕ್ಷಕ್ಕಾಗಿ ರಾಜೀನಾಮೆ ಕೊಟ್ಟವರ ಋಣ ತೀರಿಸಬೇಕಿದೆ ಎಂದಿದ್ದಾರೆ. ಈ ಹಿಂದೆ ನಾವು ಮೊದಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದ್ದೆವು. ಈಗ ನಮ್ಮ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಸೋತು ಹತಾಶರಾಗಿದ್ದಾರೆ. ಈ ಎರಡೂ ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ ಎಂದು ಸಚಿವ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆರ್.ಆರ್ ನಗರ ಕ್ಷೇತ್ರಕ್ಕೆ ಅಭ್ಯರ್ಥಿಗಳಾಗಿ ಮುನಿರತ್ನ ಹಾಗೂ ತುಳಸಿ ಮುನಿರಾಜು ಅವರ ಹೆಸರನ್ನು ರಾಜ್ಯ ಬಿಜೆಪಿ ಕೋರ್ ಕಮಿಟಿ ಕೇಂದ್ರ ಬಿಜೆಪಿ ಚುನಾವಣಾ ಸಮಿತಿ ಶಿಫಾರಸು ಮಾಡಿದೆ. ಆದರೆ, ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ಈ ಹಿಂದೆ ಕಾಂಗ್ರೆಸ್‍ನಿಂದ ಆರ್.ಆರ್ ನಗರ ಕ್ಷೇತ್ರದಿಂದ ಮುನಿರತ್ನ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಕ್ಕೂ ಮೊದಲು ಮುನಿರತ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹೀಗಾಗಿ ನನಗೆ ಟಿಕೆಟ್ ನೀಡಬೇಕೆಂದು ಮುನಿರತ್ನ ಹಠ ಹಿಡಿದು ಕುಳಿತಿದ್ದಾರೆ.

ಆದರೆ, ಚುನಾವಣೆಗೂ ಮುನ್ನ ಆರ್.ಆರ್ ನಗರ ಕ್ಷೇತ್ರದಲ್ಲಿ ಸಾವಿರಾರು ನಕಲಿ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಹೀಗಾಗಿ ಮುನಿರತ್ನ ಆಯ್ಕೆಯನ್ನು ರದ್ದು ಮಾಡಿ ನನ್ನನ್ನೇ ಶಾಸಕ ಎಂದು ಘೋಷಿಸುವಂತೆ ತುಳಸಿ ಮುನಿರಾಜು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಸುಪ್ರೀಂಕೋರ್ಟ್‍ನಲ್ಲಿ ತೀರ್ಪು ಬಾರದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಇಕ್ಕಟ್ಟಿನಲ್ಲಿ ಸಿಲುಕಿದೆ.
ಒಂದು ವೇಳೆ ಮುನಿರತ್ನಗೆ ಟಿಕೆಟ್ ನೀಡದೆ ಇದ್ದರೆ ಪಕ್ಷಾಂತರ ಮಾಡಿದವರ ಕೋಪಕ್ಕೆ ಗುರಿಯಾಗಬಹುದು, ತುಳಸಿ ಮುನಿರಾಜುಗೆ ಟಿಕೆಟ್ ಕೊಡದೇ ಹೋದರೆ ಬಂಡಾಯ ಏಳಬಹುದು. ಈ ಹಿನ್ನೆಲೆಯಲ್ಲಿ ಕೋರ್ಟ್ ತೀರ್ಪಿಗಾಗಿ ಬಿಜೆಪಿ ಎದುರು ನೋಡುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights