ಮೃತವ್ಯಕ್ತಿ ದೇವರ ಸಮ; ಅವರ ಬಗ್ಗೆ ಆರೋಪಿಸಿ ಮಾತನಾಡುವುದು ತಪ್ಪು: ನಟ ದರ್ಶನ್

ಸ್ಯಾಂಡಲ್‌ವುಡ್‌ಗೂ ಡ್ರಗ್ಸ್‌‌ ಮಾಫಿಯಾಕ್ಕೂ ನಂಟಿದೆ ಎಂಬ ಆರೋಪ ದಿನ ಕಳೆದಂತೆ ವ್ಯಾಪಕ ರೂಪ ಪಡೆದುಕೊಳ್ಳುತ್ತಿದೆ. ಈ ಸಂಬಂಧ ನಿರ್ದೇಶಕ ಇಂದ್ರಜಿತ್ ಲಂಕೇಶ್‌ ಅವರ ಹೇಳಿಕೆ ಚಂದನವನದಲ್ಲಿ ಮತ್ತಷ್ಟು ಚರ್ಚೆ ಹುಟ್ಟುಹಾಕಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ದರ್ಶನ್‌ “ಕಳೆದ 26 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಡ್ರಗ್ಸ್‌ ಜಾಲದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಡ್ರಗ್ಸ್‌ ನಂಟಿನ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಾಧ್ಯಮದವರು ಏನೇನು ಕಲ್ಪಿಸಿ, ಹಾಗೆಯೇ, ಹೀಗೆಯೇ, ಯಾವ ನಟರಾಗಿರಬಹುದು ಎಂದು ಪ್ರಶ್ನೆ ಹಾಕಿ ವರದಿ ಮಾಡಬೇಡಿ. ವಿಚಾರಣೆ ನಡೆಯಲಿ, ಸತ್ಯವಾಗಿದ್ದರೆ ಹೆಸರು ಬಹಿರಂಗವಾಗುತ್ತದೆ” ಎಂದು ಹೇಳಿದ್ದಾರೆ.

ಇತ್ತೀಚೆಗೆ ತೀರಿಕೊಂಡ ಯುವ ನಟನ ಹೆಸರನ್ನು ಡ್ರಗ್ ದಂಧೆ ವಿಚಾರದಲ್ಲಿ ಇಂದ್ರಜಿತ್ ಲಂಕೇಶ್ ಪ್ರಸ್ತಾಪಿಸಿದ್ದು,  ಸತ್ತು ಮೂರು ತಿಂಗಳಾದ ವ್ಯಕ್ತಿ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ. ವ್ಯಕ್ತಿ ತೀರಿಹೋದ ಮೇಲೆ ಅವರು ದೇವರ ಸಮಾನ ಎಂದು ನಮಗೆ ತಂದೆ-ತಾಯಿ ಹೇಳಿಕೊಟ್ಟಿದ್ದಾರೆ. ಅಂತವರ ಬಗ್ಗೆ ಮಾತನಾಡುವುದು ಸರಿಯಲ್ಲ. ಒಂದು ವೇಳೆ ಡ್ರಗ್ ಆರೋಪದಲ್ಲಿ ಅಪ್ಪಿತಪ್ಪಿ ಅವರು ಅಪರಾಧಿ ಎಂದು ಸಾಬೀತಾಯಿತು ಎಂದಿಟ್ಟುಕೊಳ್ಳಿ. ಅವರನ್ನು ಕರೆದುಕೊಂಡು ಬಂದು ಶಿಕ್ಷೆ ಕೊಡಿಸಲು ಆಗುತ್ತದೆಯೇ ಎಂದು ದರ್ಶನ್‌ ಕೇಳಿದ್ದಾರೆ.

ಒಂದು ತರಗತಿಯಲ್ಲಿ ಚೆನ್ನಾಗಿ ಓದಿ ರ್ಯಾಂಕ್ ಪಡೆಯುವ ವಿದ್ಯಾರ್ಥಿಯೂ ಇರುತ್ತಾರೆ. ಸಾಧಾರಣ ಅಂಕ ಪಡೆಯುವವರು ಇರುತ್ತಾರೆ. ಶೂನ್ಯ ಮಾರ್ಕ್ಸ್ ತೆಗೆದುಕೊಳ್ಳುವರು ಕೂಡ ಇರುತ್ತಾರೆ. ಹಾಗೆಂದು ಇಡೀ ಕ್ಲಾಸ್ ನ ಮಕ್ಕಳು ದಡ್ಡರು, ಯಾರೂ ಸರಿ ಇಲ್ಲ ಎಂದು ಹೇಳಲಾಗುತ್ತದೆಯೇ. ಯಾರೋ ಕೆಲವರು ಮಾಡುವ ತಪ್ಪಿಗೆ ಇಡೀ ಉದ್ಯಮದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ದರ್ಶನ್‌ ಹೇಳಿದ್ದಾರೆ.


Read Also: ಸ್ಥಗಿತಗೊಂಡಿರುವ NRC ಮರುಪರಿಶೀಲನೆ: 19 ಲಕ್ಷ ಜನರು ಸಂಕಷ್ಟದಲ್ಲಿದ್ದಾರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights