ಐದು ತಿಂಗಳಲ್ಲಿ ತೆರಿಗೆ ಸಂಗ್ರಹ ಶೇ.31 ರಷ್ಟು ಕುಸಿತ: ಕೇಂದ್ರ ಸಚಿವ
ಕೊರೊನಾ ಸಂಕಷ್ಟ ಮತ್ತು ಲಾಕ್ಡೌನ್ ಹೇರಿಕೆಯಿಂದಾಗಿ ಎಲ್ಲಾ ರೀತಿಯ ತೆರಿಗೆ ಸಂಗ್ರಹ ಕುಸಿತ ಕಂಡಿದ್ದು, 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕಳೆದ ಐದು ತಿಂಗಳಲ್ಲಿ ತೆರಿಗೆ ಸಂಗ್ರಹ ಶೇ.31 ರಷ್ಟು ಕುಸಿದಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಲೋಕಸಭೆ ಅಧಿವೇಶನದಲ್ಲಿ ಮಾಹಿತಿ ನೀಡಿದ ಅವರು, ವರ್ಷಗಳ ಲೆಕ್ಕಾಚಾರದಂತೆ 20-21ನೇ ಆರ್ಥಿಕ ವರ್ಷದ ಏಪ್ರಿಲ್ -ಆಗಸ್ಟ್ ಅವಧಿಯಲ್ಲಿ 1.92 ಲಕ್ಷ ಕೋಟಿ ರೂ ನಿವ್ವಳ ತೆರಿಗೆ ಸಂಗ್ರಹವಾಗಿದೆ. ಈ ಮೊತ್ತವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 31.1 ರಷ್ಟು ಇಳಿಕೆಯಾಗಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 2.79 ಲಕ್ಷ ಕೋಟಿ ರು ನಿವ್ವಳ ತೆರಿಗೆ ಸಂಗ್ರಹವಾಗಿತ್ತು. ಜೂನ್ನಿಂದ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ದೇಶವು ಸಂಪೂರ್ಣ ಲಾಕ್ಡೌನ್ ಆಗಿದ್ದರಿಂದ ಒಟ್ಟು ತೆರಿಗೆ ಸಂಗ್ರಹವು ಶೇಕಡಾ 31 ರಷ್ಟು ಕುಸಿದಿದೆ.
ಪರೋಕ್ಷ ತೆರಿಗೆ ಸಂಗ್ರಹದಲ್ಲಿಯೂ ಕುಸಿತ ಕಂಡಿದ್ದು, 20-21ನೇ ಆರ್ಥಿಕ ವರ್ಷದ ಏಪ್ರಿಲ್—ಆಗಸ್ಟ್ ಅವಧಿಯಲ್ಲಿ 3.42 ಲಕ್ಷ ಕೋಟಿ ರೂ ಸಂಗ್ರಹವಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 3.85 ಲಕ್ಷ ಕೋಟಿ ರೂ ಸಂಗ್ರಹವಾಗಿತ್ತು.
ಅಲ್ಲದೆ, ಏಪ್ರಿಲ್ -ಆಗಸ್ಟ್ ಅವಧಿಯ ಸರಕು ಸಾಗಣೆ ತೆರಿಗೆ(ಜಿಎಸ್ಟಿ) ಸಂಗ್ರಹ 1.81 ಲಕ್ಷ ಕೋಟಿ ರೂಗಳಷ್ಟಾಗಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ಇದನ್ನೂ ಓದಿ: ಮೂರು ತಿಂಗಳಲ್ಲಿ GDP ಶೇ.23.9 ಕುಸಿತ; ಗರಿಷ್ಟ ಇಳಿಕೆ ಕಂಡ ಭಾರತ!