ಸೀಟು ಹಂಚಿಕೆಯಲ್ಲಿ ಭಿನ್ನಮತ: AIADMK-BJP ಜೊತೆಗಿನ ಮೈತ್ರಿ ತೊರೆದ DMDK

ತಮಿಳುನಾಡು ವಿಧಾನಸಭಾ ಚುನಾವಣೆಗೆ ಪಕ್ಷಗಳು ಕಸರತ್ತು ನಡೆಸುತ್ತಿವೆ. ಭಾನುವಾರದ ವರೆಗೂ ಡಿಎಂಕೆ-ಕಾಂಗ್ರೆಸ್‌ ನಡುವೆ ಸೀಟು ಹಂಚಿಕೆಯ ವಿಚಾರ ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು. ಇದೀಗ ಎಐಎಡಿಎಂಕೆ-ಬಿಜೆಪಿ ನೇತೃತ್ವದ ಮೈತ್ರಿಯಲ್ಲೂ ಸೀಟು ಹಂಚಿಕೆ ವಿಚಾರಕ್ಕೆ ಭಿನ್ನಾಭಿಪ್ರಾಯ ಭುಗಿಲೆದ್ದಿದ್ದು, ವಿಜಯಕಾಂತ್‌ ಅವರ ಡಿಎಂಡಿಕೆ ಪಕ್ಷವು ಮೈತ್ರಿಯಿಂದ ಹೊರಬಂದಿದೆ.

ನಟ, ರಾಜಕಾರಣಿ ವಿಜಯಕಾಂತ್ ಅವರ ದೇಸಿಯಾ ಮುರ್ಪೊಕ್ಕು ದ್ರಾವಿಡ ಕಜಗಂ (ಡಿಎಂಡಿಕೆ) ವಿಧಾನಸಭಾ ಚುನಾವಣೆಗೆ ಇನ್ನೊಂದು ತಿಂಗಳು ಇರುವಾಗ ಎಐಎಡಿಎಂಕೆ-ಬಿಜೆಪಿ ಮೈತ್ರಿ ತ್ಯಜಿಸಿದ್ದಾರೆ. ಆಡಳಿತಾರೂಢ ಎಐಎಡಿಎಂಕೆ ಯೊಂದಿಗೆ ಸ್ಥಾನ ಹಂಚಿಕೆ ಮಾತುಕತೆ ವಿಫಲವಾದ ನಂತರ ಡಿಎಂಡಿಕೆ ಹಠಾತ್ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆಗಾಗಿ ಎಐಎಡಿಎಂಕೆ ಮತ್ತು ಬಿಜೆಪಿ ತಮ್ಮ ಸ್ಥಾನ ಹಂಚಿಕೆ ಒಪ್ಪಂದವನ್ನು ಕಳೆದ ವಾರ ಪ್ರಕಟಿಸಿತ್ತು. ಡಿಎಂ‌ಡಿಕೆಗೆ ನಿರೀಕ್ಷಿತ ಕ್ಷೇತ್ರಗಳನ್ನು ಹಂಚಿಕೆ ಮಾಡದಿರುವುದು ಅವರು ಮೈತ್ರಿ ತೊರೆಯಲು ಕಾರಣವೆಂದು ಉಲ್ಲೇಖಿಸಲಾಗಿದೆ.

ಸದ್ಯಕ್ಕೆ, ಡಿಎಂಡಿಕೆ ಪಕ್ಷಕ್ಕೆ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮೈತ್ರಿ ಮಾಡಿಕೊಳ್ಳಲು ಎಎಂಎಂಕೆ ಅಥವಾ ಎಂಎನ್‌ಎಂ ಮಾತ್ರ ಇವೆ. ಆದರೆ, ಈಗಾಗಲೇ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ (ಎಂಎನ್‌ಎಂ) ತನ್ನ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ.

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ 154 ಸ್ಥಾನಗಳಿಗೆ ಸ್ಪರ್ಧಿಸಲಿದ್ದರೆ, ಉಳಿದ 80 ಸ್ಥಾನಗಳನ್ನು ಎಂಎನ್‌ಎಂನ ಮೈತ್ರಿ ಪಾಲುದಾರರಾದ ಅಖಿಲ ಭಾರತ ಸಮತುವಾ ಮಕ್ಕಳ್ ಕಚ್ಚಿ (ಎಐಎಸ್‌ಎಂಕೆ) ಮತ್ತು ಇಂಡಿಯಾ ಜನನಾಯಕ ಕಚ್ಚಿ (ಐಜೆಕೆ)ಗೆ ನೀಡಲಾಗಿದೆ.

Read Also: ಬಂಗಾಳದಲ್ಲಿ ಹೆಚ್ಚಿದ್ಯಾ BJP ಪ್ರಾಬಲ್ಯ; ಲಾಭ ಗಳಿಸುತ್ತಾ ‘ನೌ ಆರ್ ನೆವರ್’ ಘೋಷಣೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights