‘ಕೋಮು ಗಲಭೆಗೆ ಪ್ರಚೋದಿಸುವವರ ವಿರುದ್ಧ ಕ್ರಮ ಕೈಗೊಳ್ಳಿ’ ಡಿಕೆ ಶಿವಕುಮಾರ್ ಒತ್ತಾಯ

ಚಾಮರಾಜನಗರ ದುರಂತದಲ್ಲಿ, ಜಿಲ್ಲಾಧಿಕಾರಿಗಳ ಮಾತು, ಅಧಿಕಾರಿಗಳ ಕಚ್ಚಾಟ, ಅವರ ಪಕ್ಷದವರ ಭಿನ್ನ ರಾಗ ಎಲ್ಲವನ್ನು ನೀವು ಗಮನಿಸಿದ್ದೀರಿ. ಈಗ ಈ ವಿಚಾರದಲ್ಲಿ ನ್ಯಾಯ ಸಿಗುವ ವಿಶ್ವಾಸ ಮೂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, “ಪ್ರಸ್ತುತ ಪರಿಸ್ಥಿತಿಯಲ್ಲಿ ನಮಗೆ ನ್ಯಾಯಾಲಯಗಳ ಮೇಲೆ ವಿಶ್ವಾಸ ಹೆಚ್ಚುತ್ತಿದೆ. ಹೈಕೋರ್ಟ್ ಕೂಡ ತಮ್ಮ ತೀರ್ಮಾನ ವಿಳಂಬ ಮಾಡಿದ್ದಕ್ಕೆ, ಅವರು ಇಬ್ಬರು ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ರಚಿಸಿದೆ. ಇದು ನ್ಯಾಯಾಲಯ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿರುವುದು ತಿಳಿಯುತ್ತದೆ. ಈ ಸಮಿತಿ ರಚಿಸುವ ನ್ಯಾಯಾಲಯ ಪೀಠಕ್ಕೆ ರಾಜ್ಯದ ಜನರ ಪರವಾಗಿ ಸಾಷ್ಟಾಂಗ ನಮನಗಳನ್ನು” ತಿಳಿಸಿದ್ದಾರೆ.

ಕೋಮು ಗಲಭೆಗೆ ಪ್ರಚೋದಿಸುವವರ ವಿರುದ್ಧ ಕ್ರಮ ಕೈಗೊಳ್ಳಿ :-

ನಮ್ಮ ಲೋಕಸಭಾ ಸದಸ್ಯರು ಹಾಗೂ ಅವರ ತಂಡ ಸುದ್ದಿಗೋಷ್ಠಿಯಲ್ಲಿ ಆಡಿದ ವೀರಾವೇಷದ ಮಾತುಗಳನ್ನು ಆಡಿದ್ದನ್ನು ನೋಡಿ ನಮಗೆ ಸಂತೋಷವಾಗಿತ್ತು. ಅದಾದ ನಂತರ ಅವರು ಬಿಬಿಎಂಪಿ ವಾರ್ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ 206 ಜನರ ಪೈಕಿ 17 ಹೆಸರು ಓದಿದರು. ಅವರೊಬ್ಬ ಸಂಸದರಾಗಿ ಅವರಿಗೆ ಸಂವಿಧಾನದ ಪರಿಜ್ಞಾನವೇ ಇಲ್ಲವಾಗಿದೆ ಎಂದು ಟೀಕಿಸಿದ್ದಾರೆ.

‘ಯಡಿಯೂರಪ್ಪನವರೆ ಎಂತಾ ಏಳಸು ಕರೆದುಕೊಂಡು ಬಂದಿದ್ದೀರಿ. ಅವತ್ತು ನೋಡಿದರೆ ಎಲ್ಲರ ಮುಂದೆ ಮುಸಲ್ಮಾನರನ್ನು ಪಂಚರ್ ಹಾಕುವವರು ಎಂದರು. ಮತ್ತೊಮ್ಮೆ ಬೆಂಗಳೂರನ್ನು ಭಯೋತ್ಪಾದಕರ ತಾಣ ಎಂದರು. ಇವತ್ತು ಸಂವಿಧಾನ ವಿರುದ್ಧವಾಗಿ ಕೋಮು ಗಲಭೆ ಮಾಡಲು ಇಂತಹ ಪ್ರಚೋದನೆ ಮಾತುಗಳನ್ನು ಆಡುತ್ತಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಸಿಸಿಬಿಗೆ ವಹಿಸಿದ್ದಾರಂತೆ. ಡ್ರಗ್ಸ್ ಪ್ರಕರಣದಲ್ಲಿ ಸಂದೀಪ್ ಪಾಟೀಲ್ ಅವರು ಉತ್ತಮ ಅಧಿಕಾರಿ ಎಂದುಕೊಂಡಿದ್ದೆ. ಆದರೆ ಈಗ ಅವರ ಮೇಲೆ ವಿಶ್ವಾಸ ಹೋಗಿದೆ. ಇವರು ಬೆಳಗಾವಿ ಪ್ರಕರಣವನ್ನು ನಿಭಾಯಿಸುತ್ತಿರುವ ರೀತಿ ಇವರೆಲ್ಲರ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಈ ವಿಚಾರದ ಬಗ್ಗೆ ಬೇರೆ ಸಮಯದಲ್ಲಿ ಮಾತನಾಡುತ್ತೇನೆ. ಅವರು ರಾಜಕೀಯ ತಾಳಕ್ಕೆ ಕುಣಿಯುತ್ತಿದ್ದಾರೆ. ನಿಮ್ಮ ಹುದ್ದೆ ಮರ್ಯಾದೆ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ನಿಮ್ಮ ಬಗ್ಗೆ ಗೌರವ ಇದೆ ಅದನ್ನು ಕಳೆದುಕೊಳ್ಳಬೇಡಿ. ಕೆಳಗಿನವರು ನಿಮ್ಮ ಮಾತಿನಂತೆ ನಡೆಯುತ್ತಾರೆ. ನೀವು ಹಿರಿಯ ಅಧಿಕಾರಿಗಳು ಈ ಪ್ರಕರಣವನ್ನು ವಿಳಂಬ ಮಾಡಿ ಅವರಿಗೆ ನೆರವಾಗುತ್ತಿದ್ದೀರಲ್ಲ ಇದು ಸರೀನಾ? ಸಂದೀಪ್ ಪಾಟೀಲ್, ಮುಖರ್ಜಿ, ಅನು ಚೇತನ್ ಅವರೇ.

ಈ ಪ್ರಕರಣದಲ್ಲಿ 17 ಜನ ಮುಸಲ್ಮಾನರನ್ನು ಕೆಲಸದಿಂದ ವಜಾ ಮಾಡಿದ್ದಾರಂತೆ. ಇಂದು ಬಿಜೆಪಿ ನಾಯಕರುಗಳೇ ಹಾಸಿಗೆ ಬ್ಲಾಕ್ ಮಾಡುತ್ತಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ದೂರವಾಣಿ ಕರೆಗಳ ಮೂಲಕ ಪತ್ತೆ ಹಚ್ಚಿದಂತೆ ಈ ಪ್ರಕರಣದಲ್ಲೂ ಪತ್ತೆಹಚ್ಚಿ. ಈ ಬಗ್ಗೆ ಮಾಧ್ಯಮಗಳೇ ವರದಿ ಮಾಡಿವೆ. ದೇಶಕ್ಕೆ ಗೌರವ ತರುವ ಮಾಧ್ಯಮಗಳು ಇಂದು ಈ ಪ್ರಕರಣದಲ್ಲಿ ಕೋಮು ಬಣ್ಣ ಬಳಿಯಲಾಗುತ್ತಿದೆ. ಬೆಡ್ ಬ್ಲಾಕ್ ನಲ್ಲಿ ಬಿಜೆಪಿ ಸರ್ಕಾರಗಳೇ ಶಾಮೀಲಾಗಿದ್ದಾರೆ ಎಂದು ಬರೆದಿದ್ದಾರೆ. ಇದು ಸುಳ್ಳಾಗಿದ್ದರೆ ಈ ಮಾಧ್ಯಮದವರನ್ನು ಬಂಧಿಸಿ ಇಲ್ಲವೇ ಬಿಜೆಪಿ ನಾಯಕರನ್ನು ಬಂಧಿಸಿ. ಯಡಿಯೂರಪ್ಪನವರೇ ಅಧಿಕಾರ ಇವತ್ತು ಇರುತ್ತದೆ ನಾಳೆ ಹೋಗುತ್ತದೆ. ನಿಮ್ಮ ರಾಜಕೀಯದ ಕಡೆ ದಿನಗಳಲ್ಲಿ ನಿಮಗೆ ಸಮರ್ಥ ಆಡಳಿತ ನೀಡಲು ಒಂದು ಒಳ್ಳೆಯ ಅವಕಾಶ ಸಿಕ್ಕಿದೆ. ದೇಶ ಹಾಗೂ ರಾಜ್ಯದಲ್ಲಿ ಶಾಂತಿ ನೆಲೆಸಲು ಇಂತಹ ಪ್ರಚೋದನೆ ಹೇಳಿಕೆ ನೀಡುವವರನ್ನು ಮುಲಾಜಿಲ್ಲದೆ ಬಂಧಿಸಿ. ಅವರು ಈ ದೇಶದ ಪ್ರಜೆಗಳಲ್ಲವೇ? ನಿಮಗೆ ತಾಕತ್ತಿದ್ದರೆ, ಈ ದೇಶದಿಂದ ಅವರನ್ನು ಓಡಿಸಿಬಿಡಿ. ಅಣ್ಣ ತಮ್ಮಂದಿರಂತೆ ಈ ದೇಹಕ್ಕಾಗಿ ಹೋರಾಡಿದ್ದೇವೆ.

ಬೆಂಗಳೂರಿನಲ್ಲಿರುವ ಮಂತ್ರಿಗಳೇ ನಿಮ್ಮ ಸಂಸದರು ಮಾತಾಡಿರುವುದು ಸರೀನಾ? ನಿಮ್ಮ ಆಂತರಿಕ ಸಂಘರ್ಷಕ್ಕೆ ಈ ದೇಶ ರಾಜ್ಯದ ಮಾನ ಹರಾಜು ಹಾಕುತ್ತಿದ್ದೀರಾ? ಮುಖ್ಯಮಂತ್ರಿಗಳೇ, ಈ ಕೋಮು ಪ್ರಚೋದನೆ ಕೊಡುತ್ತಿರುವವರನ್ನು ಬಂಧಿಸಿ. ಬಿಬಿಎಂಪಿ ವಾರ್ ರೂಮ್ ಗೆ 200 ಸಿಬ್ಬಂದಿ ನೇಮಕ ಮಾಡಿದವರು ಯಾರು? ನಾವು ಮಾಡಿದ್ದೇವಾ? ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು, ಏನೆಲ್ಲಾ ಕುತಂತ್ರ ಮಾಡುತ್ತಿದ್ದೀರಿ. ಈ ಬಗ್ಗೆ ಉತ್ತರ ನೀಡಲಾಗದೆ ಅಶೋಕ್ ಓಡಿ ಹೋಗುತ್ತಿದ್ದಾರೆ. ಮತ್ತೊಬ್ಬ ಮಂತ್ರಿ ಉಸಿರು ಬಿಡುತ್ತಿಲ್ಲ. ಅಶ್ವಥ್ ನಾರಾಯಣ ಅವರೇ ಯಾಕೆ ಮಾತನಾಡುತ್ತಿಲ್ಲ? ನಿಮ್ಮ ಸಂಸದರು ಹೇಳಿದ್ದು ಸರಿಯೋ? ತಪ್ಪೋ? ಇದು ವಿಷಾದ ವ್ಯಕ್ತಪಡಿಸುವ, ಕರೆದು ಮಾತನಾಡುತ್ತೇನೆ ಎನ್ನುವ ವಿಚಾರವಲ್ಲ. ನಮ್ಮ ಪಕ್ಷದವರು ಈ ರೀತಿ ಮಾಡಿದ್ದರೆ ಎಷ್ಟು ಬೇಗ ಬಂಧಿಸುತ್ತಿದ್ದಿರಿ? ನಾವು ಎಲ್ಲವನ್ನು ನಾವು ನೋಡುತ್ತಿದ್ದೇವೆ. ಇವತ್ತಲ್ಲ ನಾಳೆ ನ್ಯಾಯ ಸಿಗುತ್ತದೆ ಎಂದು ಸುಮ್ಮನಿದ್ದೆವು. ಆದರೆ ಪೊಲೀಸರು ಆಟವಾಡುತ್ತಿದ್ದಾರೆ. ಅವರ ವ್ಯವಹಾರಗಳ ಬಗ್ಗೆ ಬೇರೆ ಸಮಯದಲ್ಲಿ ಮಾತನಾಡುತ್ತೇನೆ.

ಎಸ್ ಐಟಿ ಅವರು ರಜೆ ಹಾಕಿಕೊಂಡು ಹೋಗಿದ್ದಾರಂತೆ. ಹಾಗಾದ್ರೆ ಕ್ರಿಮಿನಲ್ ಗಳು ಏನು ಬೇಕಾದರೂ ಮಾಡಬಹುದಾ? ಎಲ್ಲ 200 ಸಿಬ್ಬಂದಿಯನ್ನು ಬಂಧಿಸಿ. ನಾನು ಈ ಬಗ್ಗೆ ತನಿಖೆ ನಡೆಸಿ ಮಾಹಿತಿ ಪಡೆದು ವರದಿ ನೀಡಿ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಿಗೆ ಹೇಳಿದ್ದೇನೆ. ಅವರಿಗೆ ಅನುಮತಿ ನೀಡುತ್ತೀರೋ ನಿರಾಕರಿಸುತ್ತೀರೋ ಗೊತ್ತಿಲ್ಲ. ಕಾರ್ಪೊರೇಷನ್ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿದ್ದರು. ಯಾರೋ ಒಂದಿಬ್ಬರು ತಪ್ಪು ಮಾಡಿರಬಹುದು ಉಳಿದವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ಆದರೆ ನಿಮ್ಮ ರಾಜಕೀಯ ಹಸ್ತಕ್ಷೇಪದಿಂದ ಅವರು ಕೆಲಸ ಮಾಡಲು ಹೆದರುತ್ತಿದ್ದಾರೆ. ಈಗ ಅವರಿಗೆ ಕರೆ ಮಾಡಿ ಕೇಳಿ, ಯಾರಾದರೂ ಎತ್ತುತ್ತಿದ್ದಾರಾ?

ನಾನು ಹೇಳಿದ ಮೇಲೆ ಅಧಿಕಾರಿಗಳನ್ನು ನೇಮಿಸಿದ್ದೀರಿ, ನಾನು ಹೇಳಿದ ಮೇಲೆ ಹೊರವಲಯದಲ್ಲಿ ಸ್ಮಶಾನ ನಿರ್ಮಿಸಿದ್ದೀರಿ. ನನ್ನ ಕೈಲಿ ಹೇಳಿಸಿಕೊಳ್ಳಬೇಕಿತ್ತಾ? ಮುಖ್ಯಮಂತ್ರಿಗಳೇ ನಿಮ್ಮ ಶ್ರಮದ ಮೇಲೆ ನಮಗೆ ಅನುಮಾನ ಇಲ್ಲ. ನಿಮ್ಮಿಂದ ಇದು ಸಾಧ್ಯವಾಗುತ್ತಿಲ್ಲ. ನಾನು ವೈದ್ಯಕೀಯ ಶಿಕ್ಷಣ ಮಂತ್ರಿಯಾಗಿದ್ದೆ. ರಾಜ್ಯದಲ್ಲಿ 56 ಕಾಲೇಜುಗಳಿವೆ. ಆ ಕಾಲೇಜು ಆಡಳಿತ ಮಂಡಳಿ ಜತೆ ಮಾತಾಡಿ. ನೀವು ಎಲ್ಲೂ ಹೊಸದಾಗಿ ನಿರ್ಮಿಸುವುದು ಬೇಡ. ಇವರ ಬಳಿಯೇ, ವೈದ್ಯರು, ಸಿಬ್ಬಂದಿ, ಸೌಕರ್ಯಗಳಿವೆ. ಒಂದೊಂದು ಕಾಲೇಜಿನಲ್ಲೂ 700 ಹಾಸಿಗೆಗಳಿವೆ. ನಾವೇನು ಹೊಸದಾಗಿ ಸೃಷ್ಟಿಸುವ ಅಗತ್ಯವಿಲ್ಲ. ಅವರಿಗೆ ಹಣ ಕೊಟ್ಟು ಕೆಲಸ ಮಾಡಲು ಹೇಳಿ. ನಾನು ಬೇಕಾದರೆ ನಿಮ್ಮ ಸಭೆಗೆ ಬರುತ್ತೇನೆ. ಖಾಸಗಿ ಆಸ್ಪತ್ರೆಗೆ ಹೋದವರು ಬದುಕಿ ಬರುತ್ತಿದ್ದಾರೆ, ಸರ್ಕಾರಿ ಆಸ್ಪತ್ರೆಗೆ ಹೋದವರು ಯಾಕೆ ಸಾಯುತ್ತಿದ್ದಾರೆ. ಅವರಿಗೆ ಔಷಧಿ ಸಿಗುತ್ತಿಲ್ಲ. ಹೀಗಾಗಿ ಸರ್ಕಾರ ಡೆತ್ ಆಡಿಟ್ ಮಾಡಿ.

ನಿಮಗೆ ಕೈಮುಗಿದು ಕೇಳುತ್ತೇನೆ ನಿಮಗೆ ಯಾವ ನೆರವು ಬೇಕು ಹೇಳಿ. ನಾವು ಮಾಡುತ್ತೇವೆ. ಮೊದಲು ಜೀವ ಉಳಿಸಿ. ಬಡವರು, ದೇಶ ಕಟ್ಟುತ್ತಿರುವವರನ್ನು ರಕ್ಷಿಸಿ. ನನ್ನ ಕ್ಷೇತ್ರದಲ್ಲಿ 10 ಜನ ಸತ್ತರೂ ಅದರ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಈ ಸಾವು ನೋವಿಗೆ ಕಾರಣ ಯಾರು? ನ್ಯಾಯಾಲಯದಿಂದ ಮಂಗಳಾರತಿ ಎತ್ತಿಸಿಕೊಳ್ಳಬೇಕೆ? ಮಾಧ್ಯಮಗಳು ಕೊಲೆಗಡುಕ ಸರ್ಕಾರ ಎಂದು ಹೇಳುತ್ತಿವೆ. ಸಂದೀಪ್ ಪಾಟೀಲರೇ, ನಿಮ್ಮ ಕೈಕೆಳಗೆ ನಡೆಯುತ್ತಿರುವ ತನಿಖೆ ನೋಡುತ್ತಿದ್ದೇವೆ. ಆ ಬಗ್ಗೆ ನಾನೊಬ್ಬ ಮಾತನಾಡುವುದಿಲ್ಲ, ಇಡೀ ಪಕ್ಷ ಮಾತಾಡುತ್ತದೆ.

ಅಶೋಕ್ ಅವರಿಗೆ ಈ ಬಗ್ಗೆ ಗೊತ್ತಿದ್ದರೂ ಕ್ರಮ ಕೈಗೊಂಡಿಲ್ಲ ಅಂದರೆ, ಅವರು ಅವರ ಸ್ನೇಹಿತರನ್ನು ರಕ್ಷಿಸುತ್ತಿದ್ದಾರೆ. ಅಶೋಕ್ ಅವರು ಮಾಧ್ಯಮಗಳ ಪ್ರಶ್ನೆಗೆ ಏಕೆ ಉತ್ತರ ಕೊಡಲಿಲ್ಲ. ಅಮೂಲಕ ಅವರು ತಪ್ಪೊಪ್ಪಿಕೊಂಡಿದ್ದಾರೆ. ಅವರು ತಾತ್ಕಾಲಿಕ ಸ್ಮಶಾನ ನಿರ್ಮಿಸಿ ಸೋಂಕಿತ ಶವಾಗಳಿಗೆ ಅಂತ್ಯ ಸಂಸ್ಕಾರ ನೀಡುತ್ತಿದ್ದು, ಇದುವರೆಗೂ ಅವರು ಮಾಡಿರುವ ಕೆಲಸ ಇದೊಂದೆ. ಅಪರಾಧವನ್ನು ಮುಚ್ಚಿಡುವುದೇ ಒಂದು ಅಪರಾಧ.

ಆ ತೇಜಸ್ವಿ ಸೂರ್ಯ ನನ್ನ ಸಹೋದರರಾದ ಮುಸಲ್ಮಾನರ ಹೆಸರನ್ನು ಓದಿದನಲ್ಲ, ನಾವು ಒಟ್ಟಿಗೆ ಬದುಕುತ್ತೇವೆ, ಒಟ್ಟಿಗೆ ಸಾಯುತ್ತೇವೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಅವರು ಎಂತೆಂಥಾ ಕೆಲಸ ಮಾಡುತ್ತಿದ್ದಾರೆ. ಅವರನ್ನು ಪಂಚರ್ ಹಾಕುವವರು ಅಂತಾನಲ್ಲಾ ಅವರು ಪಂಚರ್ ಹಾಕದಿದ್ದರೆ ಇವನ ಮನೆಯವರು ಬಂದು ಪಂಚರ್ ಹಾಕ್ತಾರಾ? ನಿಮಗೆ ನಿಮ್ಮ ಧರ್ಮ ಹೇಗೆ ಮುಖ್ಯವೋ, ಅವರಿಗೆ ಅವರ ಧರ್ಮ. ಧರ್ಮ ಯಾವುದಾರು ತತ್ವ ಒಂದೇ. ನಾಮ ನೂರಾದರೂ ದೈವ ಒಂದೇ. ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ. ದೇವರೊಬ್ಬ ನಾಮ ಹಲವು. ಆಡ್ವಾಣಿ ಮಕ್ಕಳಿಂದ ಬೇರೆ ಬೇರೆ ನಾಯಕರ ಮಕ್ಕಳು ಅಂತರ್ ಧರ್ಮ ವಿವಾಹ ಆಗಿಲ್ಲವೇ? ಮುಖ್ಯಮಂತ್ರಿ ಮನೆಗಳಲ್ಲಿ ಆಗಿಲ್ಲವೇ? ಈತ ಯಾಕೆ ಕೋಮು ಪ್ರಚೋದನೆ ತರುತ್ತಿದ್ದಾರೆ. ಕುವೆಂಪು ಅವರು ಈ ನಾಡನ್ನು ಶಾಂತಿಯ ತೋಟ ಎಂದಿದ್ದಾರೆ.

ಕೋವಿಡ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ನಮ್ಮವರೆ ಪ್ರಾಣ ಬಿಟ್ಟಿದ್ದಾರೆ. ನಿನ್ನೆ ಇದ್ದವರು ನಾಳೆ ಇಲ್ಲ. ಈ ಪ್ರಕರಣದಲ್ಲಿ ಕೋಮು ದ್ವೇಷ ಬಿತ್ತಿದ ಸಂಸದ ಮೊದಲು ಬಂಧನವಾಗಬೇಕು. ನಂತರ ಇಡೀ ತಂಡವನ್ನು ಬಂಧಿಸಬೇಕು. ನಾನು ಈ ಹಿಂದೆ ಹೇಳಿದಂತೆ ಈತ ಅಮವಾಸೆ ಗಿರಾಕಿ.

ಈ ವಿಚಾರದಲ್ಲಿ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಪತ್ರ ಬರೆದಿದ್ದು, ಅವರು ತನಿಖೆ ಮಾಡಲು ಅವಕಾಶ ನೀಡಬೇಕು ಎಂದು ಸ್ಪೀಕರ್ ಅವರನ್ನು ಕೇಳಿಕೊಳ್ಳುತ್ತೇನೆ. ನಿಮ್ಮ ಶಾಸಕರು ಸಂಸದರೆ ಈ ಬಗ್ಗೆ ಆರೋಪ ಮಾಡಿದ್ದಾರೆ. ಈ ವಿಚಾರದಲ್ಲಿ ತಡೆಯಬೇಡಿ. ಹಿಂದೆ ನೀವು ಹೆಚ್.ಕೆ ಪಾಟೀಲರಿಗೆ ಅವಕಾಶ ನೀಡಲಿಲ್ಲ. ಈಗಲಾದರೂ ಅವಕಾಶ ನೀಡಿ. ಈ ಸರ್ಕಾರದ ಅಜೆಂಡಾ ಎಂದರೆ ಎಲ್ಲೆಲ್ಲಿ ಏನೇನು ಸಿಗುತ್ತದೋ ಅದನ್ನು ಗುಳುಂ ಮಾಡುವುದು. ಇದು ಕೊನೆ ಅವಕಾಶ ಅಂತಾ ಸಿಕ್ಕ ಸಿಕ್ಕ ಕಡೆ ಗುಳುಂ ಮಾಡುತ್ತಿದ್ದಾರೆ.

ಸರ್ಕಾರದ ನಿರ್ಧಾರಗಳೇ ಸರ್ಕಾರದ ವೈಫಲ್ಯ ತಿಳಿಸುತ್ತಿದೆ. ಸರ್ಕಾರ ಎಂದರೆ ಆರೋಗ್ಯ ಸಚಿವರು ಮಾತ್ರವಲ್ಲ. ನಿನ್ನೆ ಇವರು ತೆಗೆದುಕೊಂಡ ನಿರ್ಧಾರ ಮೊದಲ ದಿನವೇ ತೆಗೆದುಕೊಳ್ಳಬೇಕಿತ್ತು. ಸಚಿವರು ನಾವು ರಾಜೀನಾಮೆ ಕೇಳಿದರೆ ಕೊಡುವುದಿಲ್ಲ ಇನ್ನು ಅವರ ಪಕ್ಷದ ನಾಯಕರು ಕೇಳಿದರೆ ಕೊಡುತ್ತಾರಾ?’ ಎಂದು ಪ್ರಶ್ನಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights