ಟಿ-20 world cup: ಟೀಂ ಇಂಡಿಯಾಗೆ ಚಹಲ್, ಭುವನೇಶ್ವರ್, ಅಶ್ವಿನ್ ಆಯ್ಕೆ; ಕೊಹ್ಲಿ ಕೊಟ್ಟ ಕಾರಣಗಳು ಹೀಗಿವೆ!

ಟಿ-20 ವರ್ಲ್ಡ್ ಕಪ್ ಸಧ್ಯದಲ್ಲೇ ಆರಂಭವಾಗಲಿದೆ. ಈ ಟೂರ್ನಿಗೆ ಟೀಂ ಇಂಡಿಯಾ ಸಜ್ಜಾಗಿದ್ದು,ತಂಡವನ್ನು ಆಯ್ಕೆ ಮಾಡಲಾಗಿದೆ. ತಂಡದಲ್ಲಿ ಇತ್ತೀಚೆಗೆ ನಡೆದ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲಿದ್ದು, ಬೌಲಿಂಗ್‌ನಲ್ಲಿ ಅದ್ಬುತ ಪ್ರದರ್ಶನ ನೀಡಿದ್ದ ಯುಜವೇಂದ್ರ ಚಹಲ್ ಅವರನ್ನು ಕೈಬಿಡಲಾಗಿದೆ. ಬದಲಾಗಿ, ರಾಹುಲ್ ಚಾಹರ್ ಅವರನ್ನ ವಿಶ್ವಕಪ್​ಗೆ ಆಯ್ಕೆ ಮಾಡಲಾಗಿದೆ. ಅದೇ ರೀತಿಯಲ್ಲಿ ಭುವನೇಶ್ವರ್, ಆರ್ ಅಶ್ವಿನ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಯುಜವೇಂದ್ರ ಅವರನ್ನು ಆಯ್ಕೆ ಮಾಡದೇ ಇರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ತಂಡದ ಆಯ್ಕೆ ಬಗ್ಗೆ ಟೀಂ‌ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.

ರಾಹುಲ್ ಚಾಹರ್

ರಾಹುಲ್ ಚಾಹರ್ ಅವರನ್ನ ಆಯ್ಕೆ ಮಾಡಲು ಕಾರಣ ಇದೆ. ಕಳೆದ ಒಂದೆರಡು ವರ್ಷಗಳಲ್ಲಿ ಅವರು ಬಹಳ ಉತ್ತಮವಾಗಿ ಬೌಲಿಂಗ್ ಮಾಡಿದ್ಧಾರೆ. ಅವರ ಬೌಲಿಂಗ್​ನಲ್ಲಿ ವೇಗ ಇದೆ.

“ಶ್ರೀಲಂಕಾ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ರಾಹುಲ್ ಚಾಹರ್ ಉತ್ತಮ ಪ್ರದರ್ಶನ ನೀಡಿದ್ದರು. ಆ ಪಂದ್ಯಗಳಲ್ಲಿ ಕ್ಲಿಷ್ಟ ಸಂದರ್ಭಗಳಲ್ಲಿ ಅವರು ಬೌಲಿಂಗ್ ಮಾಡಿದ್ದರು. ಟಿ20 ವಿಶ್ವಕಪ್ ಸಾಗುತ್ತಾ ಹೋದಂತೆ ಇಲ್ಲಿಯ ಪಿಚ್​ಗಳು ನಿಧಾನಗೊಳ್ಳುತ್ತಾ ಹೋಗುತ್ತವೆ. ಐಪಿಎಲ್​ನ ಕೊನೆ ಕೊನೆಯ ಪಂದ್ಯಗಳಲ್ಲಿ ನೀವು ಗಮನಿಸಿದಂತೆ ವೇಗವಾಗಿ ಬಾಲ್ ಎಸೆಯಬಲ್ಲ ಸ್ಪಿನ್ನರ್​ಗಳು ಹೆಚ್ಚು ಪರಿಣಾಮಕಾರಿ ಎನಿಸಿದ್ದಾರೆ. ಈ ವಿಚಾರದಲ್ಲಿ ರಾಹುಲ್ ಆಯ್ಕೆ ಸಮಂಜಸ ಎನಿಸುತ್ತದೆ.

“ರಾಹುಲ್ ಚಾಹರ್ ಲೆಗ್ ಸ್ಪಿನ್ನರ್ ಆದ್ದರಿಂದ ವಿಕೆಟ್ ಪಡೆಯುವ ಅವಕಾಶ ಕೊಡುವ ಪ್ರದೇಶಗಳನ್ನ ಗುರಿಯಾಗಿಸಿ ಬೌಲಿಂಗ್ ಮಾಡಬಲ್ಲರು. ಪಂದ್ಯದ ಯಾವುದೇ ಹಂತದಲ್ಲೂ ಅವರು ವಿಕೆಟ್ ಪಡೆಯಬಲ್ಲರು. ಚಹಲ್ ಬದಲು ರಾಹುಲ್ ಅವರನ್ನ ಸೇರಿಸಿಕೊಳ್ಳಲು ಈ ಅಂಶವೇ ಮುಖ್ಯವಾಯಿತು. ಚಹಲ್ ಅವರ ಆಯ್ಕೆ ಆಗಿಲ್ಲ ಎಂದರೆ ಅದು ಅವರ ಕಳಪೆ ಸಾಧನೆಯಿಂದಲ್ಲ. ನಿರ್ದಿಷ್ಟ ಸಂಖ್ಯೆಯಲ್ಲಿ ಮಾತ್ರ ತಂಡವನ್ನ ರಚಿಸಬೇಕಾಗುತ್ತದೆ. ಎಲ್ಲರನ್ನೂ ಸೇರಿಸಿಕೊಳ್ಳಲು ಆಗುವುದಿಲ್ಲ” ಎಂದು ವಿರಾಟ್ ಕೊಹ್ಲಿ ಹೇಳಿದ್ಧಾರೆ.

ಭುವನೇಶ್ವರ್

ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಪರಿಣಾಮಕಾರಿ ಎನಿಸುವುದು ಅವರ ಸ್ವಿಂಗ್ ಎಸೆತ. ಆದರೆ, ಯುಎಇಯಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಭುವಿಗೆ ಚೆಂಡನ್ನು ಸ್ವಿಂಗ್ ಮಾಡಲು ಸಾಧ್ಯವಾಗಲಿಲ್ಲ. ಆದರೂ ಅವರನ್ನ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿರುವುದಕ್ಕೆ ಅವರ ಅನುಭವ ಮತ್ತು ಎಕನಾಮಿ ರೇಟ್ ಕಾರಣ ಎಂಬುದು ಕೊಹ್ಲಿ ಅನಿಸಿಕೆ.

“ಭುವನೇಶ್ವರ್ ಕುಮಾರ್ ಅವರ ಎಕನಾಮಿ ರೇಟ್ ಬಹಳ ಚೆನ್ನಾಗಿದೆ. ಒತ್ತಡದ ಸಂದರ್ಭದಲ್ಲಿ ಅನುಭವ ನೆರವಿಗೆ ಬರುತ್ತದೆ. ಆರ್​ಸಿಬಿ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಆಡಿದ ಕೊನೆಯ ಲೀಗ್ ಪಂದ್ಯದಲ್ಲಿ ಇದು ವೇದ್ಯವಾಗಿದೆ. ಎಬಿಡಿಯಂಥ ಸ್ಫೋಟಕ ಬ್ಯಾಟರ್ ಕ್ರೀಸ್​ನಲ್ಲಿದ್ದರೂ ಅವರು ಬೌಲಿಂಗ್ ಮಾಡಿ ಪಂದ್ಯವನ್ನ ಗೆಲ್ಲಿಸಿದ್ದರು. ಭುವಿ ಅವರ ಅನುಭವ ಚೆನ್ನಾಗಿದೆ” ಎಂದು ಕೊಹ್ಲಿ ವಿಶ್ಲೇಷಿಸಿದ್ಧಾರೆ.

ಆರ್ ಅಶ್ವಿನ್

ಆರ್ ಅಶ್ವಿನ್ ಇತ್ತೀಚೆಗೆ ಚುಟುಕು ಕ್ರಿಕೆಟ್​ನಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದಾರೆ. ಕಳೆದ ಎರಡು ಐಪಿಎಲ್ ಟೂರ್ನಿಗಳನ್ನ ನೋಡಿದರೆ ಇದು ಗೊತ್ತಾಗುತ್ತದೆ. ಪೊಲಾರ್ಡ್ ಅವರಂಥ ಪವರ್ ಹಿಟ್ಟರ್ಸ್​ಗೆ ಅವರು ಹೆಚ್ಚು ಬೌಲಿಂಗ್ ಮಾಡಿದ್ಧಾರೆ. ಅಶ್ವಿನ್ ಯಾವ ಬ್ಯಾಟರ್​ಗೂ ಹೆದರುವುದಿಲ್ಲ. ಅಶ್ವಿನ್ ಅವರಿಗೆ ಆತ್ಮವಿಶ್ವಾಸ ಬಹಳ ಇದೆ. ಅವರ ವೇಗ ಮತ್ತು ವೇರಿಯೇಶನ್ ಮೇಲೆ ಅವರಿಗೆ ಹಿಡಿತ ಇದೆ. ಅಶ್ವಿನ್ ಒಬ್ಬ ಒಳ್ಳೆಯ ಫಿಂಗರ್ ಸ್ಪಿನ್ ಬೌಲರ್ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights