ತರಗತಿಯಲ್ಲಿ ಮೊಬೈಲ್‌ ಬಳಸಬೇಡಿ ಎಂದಿದ್ದಕ್ಕೆ ಶಿಕ್ಷಕನನ್ನೇ ಥಳಿಸಿದ ವಿದ್ಯಾರ್ಥಿಗಳು; ಒಬ್ಬನ ಬಂಧನ

ತರಗತಿಯೊಳಗೆ ಮೊಬೈಲ್ ಫೋನ್ ಬಳಸಬೇಡಿ ಎಂದು ಹೇಳಿದ ಕಾರಣಕ್ಕೆ ಶಾಲೆಯ ಶಿಕ್ಷಕರೊಬ್ಬರನ್ನು ಕೆಲವು ವಿದ್ಯಾರ್ಥಿಗಳು ಥಳಿಸಿರುವ ಘಟನೆ ಉತ್ತರ ಪ್ರದೇಶದ ಗೋರಖ್ ಪುರದ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ.

ಘಟನೆಯ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಲ್ಲೆಗೊಳಗಾದ ಶಿಕ್ಷಕನನ್ನು ಗೋರಖ್ ಪುರ ನಗರದ ಸರ್ಕಾರಿ ಶಾಲೆಯ ಕಂಪ್ಯೂಟರ್ ಶಿಕ್ಷಕ ಸಯ್ಯದ್ ವಾಸಿಕ್ ಅಲಿ ಎಂದು ಗುರುತಿಸಲಾಗಿದೆ. 9ನೇ ತರಗತಿಯ ಮೂವರು ವಿದ್ಯಾರ್ಥಿಗಳು ತರಗತಿಯ ವೇಳೆ ಮೊಬೈಲ್‌ ಬಳಸುತ್ತಿದ್ದರು. ಅವರನ್ನು ಬಳಸಬೇಡಿ ಎಂದು ಶಿಕ್ಷಕ ಹೇಳಿದ್ದಾರೆ. ನಂತರ, ಆ ಮೂವರು ವಿದ್ಯಾರ್ಥಿಗಳು ಶಿಕ್ಷಕನ ಮುಖಕ್ಕೆ ಕಪ್ಪು ಬಟ್ಟೆ ಮುಚ್ಚಿ, ಹಲ್ಲೆ ನಡೆಸಿದ್ದಾರೆ.

ವಾಸಿಕ್ ಅವರು ಸಲ್ಲಿಸಿದ ಲಿಖಿತ ದೂರನ್ನು ಆಧರಿಸಿ, ಒಬ್ಬ ಹೆಸರಿನ ಮತ್ತು ಇಬ್ಬರು ಅಪರಿಚಿತ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಸರು ಹೇಳಲಾದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.ಆತನನ್ನು ಬಾಲಾಪರಾಧಿ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ವಿದ್ಯಾರ್ಥಿಯನ್ನು ರೆಸ್ಟಿಕೇಟ್ ಮಾಡಲಾಗಿದೆ ಮತ್ತು ಇತರ ಇಬ್ಬರು ವಿದ್ಯಾರ್ಥಿಗಳನ್ನು ಗುರುತಿಸಿದ ನಂತರ, ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದ್ಧಾರೆ ಎಂದು ತಿಳಿದು ಬಂದಿದೆ.

ಆರೋಪಿಗಳ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ. ಇತರ ಇಬ್ಬರು ಆರೋಪಿಗಳನ್ನು ಗುರುತಿಸಲು ಮತ್ತು ಬಂಧಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: 7 ವರ್ಷದ ಬಾಲಕನನ್ನು ತಲೆಕಳಗೆ ಮಾಡಿ ನೇತಾಡಿಸಿದ ಶಿಕ್ಷಕ – ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights