ಕನ್ನಡಕ್ಕಾಗಿ ನಾವು ವಿಶೇಷ ಅಭಿಯಾನ: ರಿಯಾಯತಿ ದರದಲ್ಲಿ ಪುಸ್ತಕ ಮಾರಾಟ ಮಹೋತ್ಸವ!

ಕನ್ನಡ ರಾಜ್ಯೋತ್ಸವ ಆಚರಣೆಯ ವಿಶೇಷ ಸಂದರ್ಭದಲ್ಲಿ “ಕನ್ನಡಕ್ಕಾಗಿ ನಾವು” ಅಭಿಯಾನದ ಭಾಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದೆ.

ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿರುವ ಮೇಳವು ಅಕ್ಟೋಬರ್ 29 ರಂದು ಆರಂಭವಾಗಿದ್ದು, ನವೆಂಬರ್ 02ರ ಸಂಜೆಯವರೆಗೂ ನಡೆಯಲಿದೆ. ಮೇಳದಲ್ಲಿ ಸಾಂಪ್ರದಾಯಿಕ ಉಡುಗೆ ತೊಡಿಗೆ, ದೇಸೀಯ ಆಹಾರ ಮೇಳ, ಚಿತ್ರಕಲೆ / ಶಿಲ್ಪಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ವಿಶೇಷ ಅಭಿಯಾನದ ಭಾಗವಾಗಿ ಎಲ್ಲಾ ರೀತಿಯ ಪುಸ್ತಕಗಳನ್ನೂ 20% ರಿಯಾಯತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಸುಮಾರು 60ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು, 15ಕ್ಕೂ ಹೆಚ್ಚು ಚಿತ್ರಕಲಾ, ಆಹಾರ ಮಳಿಗೆಗಳು ಪುಸ್ತಕ ಪ್ರೇಮಿಗಳು, ಕಲಾ ಪ್ರೇಮಿಗಳು ಹಾಗೂ ಗ್ರಾಹಕರನ್ನು ಸೆಳೆಯುತ್ತಿವೆ.

ಅಕ್ಟೋಬರ್ 29ರಂದು ಆರಂಭವಾದ ಈ ಮೇಳವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್‌ ಕುಮಾರ್ ಅವರು ಉದ್ಘಾಟಿಸಬೇಕಿತ್ತು. ಆದರೆ, ಕನ್ನಡದ ಖ್ಯಾತ ನಟ ಪುನೀತ್‌ ಅವರ ಹಠಾತ್‌ ಅಗಲಿಕೆಯಿಂದ ಮೇಳವು ಉದ್ಘಾಟನೆಯೇ ಇಲ್ಲದೆ ಆರಂಭವಾಗಿದೆ. ಪುನೀತ್‌ ಅವರ ಅಗಲಿಕೆಯಿಂದ ಇಡೀ ರಾಜ್ಯವೇ ಶೋಕದಲ್ಲಿದ್ದರಿಂದಾಗಿ ಮೇಳವೂ ಗ್ರಾಹಕರಿಲ್ಲದೇ, ಸದ್ದು, ಸಡಗರವಿಲ್ಲದೇ ಸೊರಗಿದಂತಾಗಿತ್ತು.

ಆದರೆ, ಇಂದು ಕನ್ನಡ ರಾಜ್ಯೋತ್ಸವದ ದಿನದಂತೆ ಮೇಳವು ಕೊಂಚ ಕಳೆಯನ್ನು ಪಡೆದುಕೊಂಡಿದೆ. ಪುಸ್ತಕ ಪ್ರೇಮಿಗಳು, ಗ್ರಾಹಕರು ಮೇಳಕ್ಕೆ ಭೇಟಿ ನೀಡುತ್ತಿದ್ದಾರೆ. ಬೆಳಗ್ಗಿನಿಂದ ನಿಧಾನಗತಿಯಲ್ಲಿ ಗ್ರಾಹಕರು ರವೀಂದ್ರ ಕಲಾಕ್ಷೇತ್ರದ ಕಡೆಗೆ ಹೆಜ್ಜೆ ಇಡುತ್ತಿದ್ದು, ಮೇಳವು ಹಂತ ಹಂತವಾಗಿ ಮೇಳೈಸಲಾರಂಭಿಸುತ್ತಿದೆ.

ಬುದ್ದ, ಬಸವ, ಅಂಬೇಡ್ಕರ್, ಗಾಂಧಿ, ಕುವೆಂಪು, ಕಾರ್ಲ್‌ಮಾರ್ಕ್ಸ್‌, ಭಗತ್‌ಸಿಂಗ್, ಚೆಗುವೆರಾ, ಬೇಂದ್ರೆ ಸೇರಿದಂತೆ ಹಲವಾರು ಮಹನೀಯರ ಪುಸ್ತಕಗಳು ರಿಯಾಯತಿ ದರದಲ್ಲಿ ಮಾರಾಟವಾಗುತ್ತಿವೆ.

ಪುಸ್ತಕ ಮೇಳದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿರುವ ವಂಶಿ ಪ್ರಕಶನದ ಪ್ರಕಾಶ್‌ ಅವರು ಏನ್‌ಸುದ್ದಿ.ಕಾಂ ಜೊತೆಗೆ ಮಾತನಾಡಿ, “ಪುನೀತ್‌ ಅವರ ಅಗಲಿಕೆಯಿಂದಾಗಿ ಗ್ರಾಹಕರು ಪುಸ್ತಕ ಮೇಳದ ಕಡೆಗೆ ಬಂದಿರಲಿಲ್ಲ. ಇಂದು ಗ್ರಾಹಕರು ಮಳಿಗೆಗಳತ್ತ ಮುಖ ಮಾಡಿದ್ದಾರೆ. ಎರಡು ದಿನಳಿಂದ ಗ್ರಾಹಕರಿಲ್ಲದೇ ಕಳೆಗುಂದಿದ್ದ ಮೇಳ, ಈಗ ಮೆರಗು ಪಡೆದುಕೊಳ್ಳುತ್ತಿದೆ” ಎಂದು ಹೇಳಿದ್ದಾರೆ.

ಅಭಿನವ ಪ್ರಕಶನದ ರವಿ ಅವರು ಮಾತನಾಡಿ, “ಮೇಳವು ಉದ್ಘಾಟನೆಗೊಳ್ಳುವ ವೇಳೆಗೆ ಪುನೀತ್‌ ಅವರು ಕೊನೆಯುಸಿರೆಳೆದರು. ಅವರ ಸಾವಿನಿಂದಾಗಿ ಇಡೀ ಅಭಿಮಾನಿ ಬಳಗವೇ ಶೋಕದಲ್ಲಿ ಮುಳುಗಿತ್ತು. ನಾವೂ ಕೂಡ ಪುನೀತ್‌ ಅವರನ್ನು ಕಳೆದುಕೊಂಡ ದುಃಖದಲ್ಲಿದ್ದೆವು. ಹೀಗಾಗಿ, ಎಲ್ಲವೂ ಸ್ಥಬ್ದವಾಗಿತ್ತು. ಕಳೆದು ಎರಡು ದಿನಗಳಲ್ಲಿ ಯಾವುದೇ ವ್ಯಾಪಾರವೂ ಆಗಿಲ್ಲ. ಇದೀಗ ಗ್ರಾಹಕರು ಮಳಿಗೆಗಳಿಗೆ ಬರುತ್ತಿದ್ದಾರೆ. ನಾಳೆಯವರೆಗೂ ಮಳಿಗೆಗಳು ತೆರೆದಿರಲಿವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಮುದ್ರದಲ್ಲಿ ವಾಯುಭಾರ ಕುಸಿತ; ದೀಪಾವಳಿವರೆಗೂ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights