ಬಿಎಸ್ವೈ ಪುತ್ರನ ಮೇಲೆ ಭ್ರಷ್ಟಾಚಾರದ ಆರೋಪ : ಸುದ್ದಿ ಮಾಧ್ಯಮ ಮುಖ್ಯಸ್ಥರ ಮನೆ ಮೇಲೆ ಪೊಲೀಸ್ ದಾಳಿ!

ವಿಜಯೇಂದ್ರ ಬೆಂಗಳೂರು ಅಭಿವೃದ್ಧಿ ಪ್ರಧಿಕಾರದ ಗುತ್ತಿಗೆದಾರರಿಂದ ಲಂಚ ಪಡೆದರು ಎಂಬ ಆರೋಪ ಮಾಡಿದವರ ವಿರುದ್ಧ ಯಡಿಯೂರಪ್ಪ ಅವರ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಆರೋಪವನ್ನು ತಳ್ಳಿಹಾಕಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಬಿಜೆಪಿ ರಾಜ್ಯದ ಉಪಾಧ್ಯಕ್ಷರೂ ಆಗಿರುವ ತಮ್ಮ ಪುತ್ರ ಬಿ ವೈ ವಿಜಯೇಂದ್ರ ಅವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಸಾಬೀತಾದರೆ ರಾಜಕೀಯಯದಿಂದ ನಿವೃತ್ತರಾಗುವುದಾಗಿ ಹೇಳಿದ್ದರು. ಆದರೆ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಮಾಧ್ಯಮದಲ್ಲಿ ಬಂದ ಪುತ್ರನ ಭ್ರಷ್ಟಾರದ ವರದಿಗಳು ಕೆಂಡಾಮಂಡಲಗೊಳಿಸಿವೆ. ಹೀಗಾಗಿ ಕಳೆದ ಹಲವು ದಿನಗಳಿಂದ ಪುತ್ರ ಬಿ.ವೈ ವಿಜಯೇಂದ್ರನ ಭ್ರಷ್ಟಾಚಾರದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟು ರಾಜ್ಯದ ಗಮನ ಸೆಳೆದಿದ್ದ ಕನ್ನಡದ ಸುದ್ದಿ ಮಾಧ್ಯಮ ಪವರ್‌ ಟಿವಿ ಮುಖ್ಯಸ್ಥರ ಮನೆ ಮೇಲೆ ಇಂದು ಪೊಲೀಸರು ದಾಳಿ ನಡೆಸಿದ್ದಾರೆ. 

ಮುಖ್ಯಮಂತ್ರಿ ಕುಟುಂಬ ಭಾರಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಸಾಕ್ಷಿ ಸಮೇತ ನಿರಂತರ ಸುದ್ದಿ ಪ್ರಸಾರ ಮಾಡಿದ್ದಕ್ಕೆ ಪೊಲೀಸರಿಂದ ದಾಳಿ ಮಾಡಿಸಿ ಬೆದರಿಸುವ ಹುನ್ನಾರವಿದು ಎಂದು ಪವರ್ ಟಿವಿ ಪ್ರತಿಕ್ರಿಯಿಸಿದೆ.

“ಪವರ್‌ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ಎಂದು ಹೇಳಿಕೊಂಡು ಕೆ.ಪಿ ಅಗ್ರಹಾರದ ಪೊಲೀಸರು ದಾಳಿ ಮಾಡಿದ್ದಾರೆ. ಮೊದಲು ಕೊರಿಯರ್‌ ಬಾಯ್ ಎಂದುಕೊಂಡು ಒಬ್ಬರು ಮನೆಗೆ ಬರುತ್ತಾರೆ. ನಂತರ ಉಳಿದ ಪೊಲೀಸರು ಬಂದು ದಾಳಿ ನಡೆಸುತ್ತಾರೆ. ಯಾವುದೇ ವಾರೆಂಟ್ ಇಲ್ಲದೇ ದಾಳಿ ನಡೆಸಿದ್ದಾರೆ. ಮನೆಯವರು ವಾರೆಂಟ್ ಕೇಳಿದ ಮೇಲೆ ಕೈಬರಹದ ನೋಟಿಸ್ ನೀಡುತ್ತಾರೆ. ಮೊದಲು ಬಂದ 8 ಮಂದಿ ಪೊಲಿಸರು ಮನೆಯವರ ಮತ್ತು ಅಪಾರ್ಟ್‌ಮೆಂಟ್ ಬಳಿಯಿದ್ದವರ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದಾರೆ. ಒಟ್ಟು 15 ಮಂದಿ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಪವರ್‌ ಟಿವಿ ತಿಳಿಸಿದೆ.

ಅಲ್ಲದೇ ಪವರ್ ಟಿವಿಯ ಪ್ರಿನ್ಸಿಪಲ್ ಎಡಿಟರ್‌ ರಹಮಾನ್ ಹಾಸನ್ ಅವರನ್ನು ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ. ವಿಚಾರಣೆ ನೆಪದಲ್ಲಿ ನಮ್ಮ ಸಿಬ್ಬಂದಿಗೆ ಕಿರುಕುಳ ನೀಡಲಾಗುತ್ತಿದೆ. ಮುಖ್ಯಮಂತ್ರಿಗಳು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪವರ್‌ ಟಿವಿ ಆರೋಪಿಸಿದೆ.

ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸುದ್ದಿ ಮಾಡಿದರೆ, ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದರೆ ಸರ್ಕಾರ ಈ ರೀತಿ ಪೊಲೀಸರಿಂದ ದಾಳಿ ಸೇಡು ತೀರಿಸಿಕೊಳ್ಳುವ ಮಟ್ಟಕ್ಕೆ ಇಳಿದಿದೆ. ಪವರ್ ಟಿವಿ ತಾನು ಮಾಡಿದ ಆರೋಪಗಳಿಗೆ ದಾಖಲೆ ಒದಗಿಸಿದೆ. ಇದು ಪ್ರಜಾಪ್ರಭುತ್ವವೇ? ಮಾಧ್ಯಮ ಸಂಸ್ಥೆಯ ಮೇಲಿನ ಈ ದಾಳಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹಲವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇತ್ತ ಪೊಲೀಸರು ಕಂಟ್ರಾಕ್ಟರ್‌ ಚಂದ್ರಕಾಂತ್ ಎಂಬುವರು ರಾಕೇಶ್ ಶೆಟ್ಟಿ ಮೇಲೆ ಬೆದರಿಕೆ ಆರೋಪ ಹೊರಿಸಿ ‍ನೀಡಿದ್ದ ದೂರಿನ ಹಿನ್ನೆಲೆ ದಾಳಿ ಮಾಡಲಾಗಿದೆ ಎಂದಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಪವರ್ ಟಿವಿಯ ವರದಿಯ ಆಧಾರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದಾಖಲೆಗಳನ್ನು ಇಟ್ಟುಕೊಂಡು ಸದನದಲ್ಲಿ “ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಮಗ, ಮೊಮ್ಮಗ ಸೇರಿದಂತೆ ತನ್ನ ಇಡೀ ಕುಟುಂಬವನ್ನೇ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಕ್ಷಣ ರಾಜೀನಾಮೆ ನೀಡಬೇಕು. ಈ ಇಡೀ ಹಗರಣದ ಬಗ್ಗೆ ನ್ಯಾಯಾಲಯದ ನಿಗಾದಲ್ಲಿ ತನಿಖೆಗೆ ವಿಶೇಷ ತನಿಖಾದಳವನ್ನು ರಚಿಸಬೇಕು” ಎಂದು ಆಗ್ರಹಿಸಿದ್ದರು.

 

ಇನ್ನೂ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ ವಿಜಯೇಂದ್ರ ಮತ್ತು ಮೊಮ್ಮಗ ಶಶಿಧರ ಮರಡಿಯವರ ವಿರುದ್ಧ ಸುಲಿಗೆ ಮತ್ತು ವಸೂಲಿ ದಂಧೆ ನಡೆಸಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ದೂರು ಕೂಡ ದಾಖಲಿಸಲಾಗಿದೆ.

ಜನಾಧಿಕಾರ ಸಂಘರ್ಷ ಪರಿಷತ್‌ನ ಪದಾಧಿಕಾರಿಗಳಾದ ಆದರ್ಶ್ ಆರ್ ಅಯ್ಯರ್, ಪ್ರಕಾಶ್ ಬಾಬು ಬಿ.ಕೆ, ವಿಶ್ವನಾಥ್‌ ಬಿ.ವಿಯವರು ದೂರು ನೀಡಿದ್ದು, ಪೊಲೀಸ್ ಮಹಾ ನಿರ್ದೇಶಕರು, ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ಸಹ ದೂರು ನೀಡಲಾಗಿದೆ.


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights