ವಾಟ್ಸಾಪ್ ತ್ಯಜಿಸಿ, ಸಿಗ್ನಲ್ ಬಳಸಿ: ಯಾವುದು ಈ SIGNAL ಆ್ಯಪ್?

ವಾಟ್ಸಾಪ್ ತನ್ನ ಗೌಪ್ಯತಾ ನಿಯಮಗಳನ್ನು ಅಪ್‌ಡೇಟ್‌ ಮಾಡಿದ್ದು, ಬಳಕೆದಾರರ ಸಂದೇಶಗಳನ್ನು ಓದುವ ಮತ್ತು ಡೇಟಾ ಸಂಗ್ರಹಿಸುವುದಾಗಿ ಘೋಷಿಸಿದೆ. ಅಲ್ಲದೆ ಬಳಕೆದಾರರ ಡೇಟಾವನ್ನು ಫೇಸ್‌ಬುಕ್ ಸೇರಿದಂತೆ ಇತರ ಕಂಪನಿಗಳಿಗೆ ಮಾರುವುದಾಗಿ ಹೇಳಿದ್ದು ಎಲ್ಲರೂ ಈ ಷರತ್ತಿಗೆ ಒಪ್ಪಲೇಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಾಟ್ಸಾಪ್ ತ್ಯಜಿಸಿ, ಸಿಗ್ನಲ್ ಬಳಸಿ ಎಂಬ ಘೋಷಣೆ ಜನಪ್ರಿಯವಾಗಿದೆ.

ಈ ಸಿಗ್ನಲ್ ಎಂದರೇನು? ಹೇಗೆ ಕೆಲಸ ಮಾಡುತ್ತದೆ ಎಂಬುದರ ವಿವರ ಇಲ್ಲಿದೆ.

ಸಿಗ್ನಲ್ ಆಪ್‌ನ ಘೋಷವಾಕ್ಯವೇ ಖಾಸಗಿತನಕ್ಕೆ ಹೆಲೋ ಹೇಳಿ ಎಂಬುದಾಗಿದೆ. ಇದರಲ್ಲಿ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಡೆಡ್ ಇದ್ದು ಯಾವುದೇ ಸಂದೇಶ-ಸಂಭಾಷಣೆಯನ್ನು ಬೇರೆಯವರು ತಿಳಿಯಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಸಿಗ್ನಲ್ ಆಪ್‌ ಅನ್ನು ಸ್ವತಂತ್ರ ಲಾಭರಹಿತ ಸಂಸ್ಥಯು ಅಭಿವೃದ್ದಿಪಡಿಸಿದೆ.

ಸಿಗ್ನಲ್ ಯಾರದು?

ನಿಮಗೆ ಗೊತ್ತಿರುವಂತೆ ವಾಟ್ಸಾಪ್‌ ಅನ್ನು ಫೇಸ್‌ಬುಕ್ ಕೊಂಡುಕೊಂಡಿದೆ. ಸಿಗ್ನಲ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ, ಇದು ಐಫೋನ್, ಐಪ್ಯಾಡ್, ಆಂಡ್ರಾಯ್ಡ್, ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್‌ಗಳಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್ ಅನ್ನು ಲಾಭರಹಿತ ಕಂಪನಿಗಳಾದ ಸಿಗ್ನಲ್ ಫೌಂಡೇಶನ್ ಮತ್ತು ಸಿಗ್ನಲ್ ಮೆಸೆಂಜರ್ ಎಲ್ಎಲ್ ಸಿ ಅಭಿವೃದ್ಧಿಪಡಿಸಿವೆ. ಈ ಅಪ್ಲಿಕೇಶನ್ ಅನ್ನು ಅಮೆರಿಕದ ಕ್ರಿಪ್ಟೋಗ್ರಾಫರ್ ಮತ್ತು ಪ್ರಸ್ತುತ ಸಿಗ್ನಲ್ ಮೆಸೆಂಜರ್ ಸಿಇಒ ಮೋಕ್ಸಿ ಮಾರ್ಲಿನ್ಸ್‌ಪೈಕ್ ರಚಿಸಿದ್ದಾರೆ.

ಸಿಗ್ನಲ್ ಫೌಂಡೇಶನ್ ಅನ್ನು ವಾಟ್ಸಾಪ್ ಸಹ-ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಮತ್ತು ಮಾರ್ಲಿನ್ಸ್‌ಪೈಕ್ ರಚಿಸಿದ್ದಾರೆ. 2017 ರಲ್ಲಿ ವಾಟ್ಸಾಪ್ ಅನ್ನು ತೊರೆದ ಬ್ರಿಯಾನ್ ಆಕ್ಟನ್, ಸಿಗ್ನಲ್ ಆಪ್‌ಗಾಗಿ ಸುಮಾರು 50 ಮಿಲಿಯನ್ ಹಣ ಹಾಕಿದ್ದಾರೆ.

ಸಿಗ್ನಲ್ ಬಳಸಲು ಹಣ ಪಾವತಿಸಬೇಕೇ?

ಸಿಗ್ನಲ್ ಬಳಕೆ ಸಂಪೂರ್ಣ ಉಚಿತವಾಗಿದೆ. ಇತರ ಮೆಸೇಜಿಂಗ್ ಅಪ್ಲಿಕೇಶನ್‌ಗಳ ರೀತಿ ಸಿಗ್ನಲ್ ನಲ್ಲಿ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು, ತಮ್ಮ ಸ್ನೇಹಿತರೊಂದಿಗೆ ಆಡಿಯೋ ಮತ್ತು ವಿಡಿಯೋ ಕರೆಗಳನ್ನು ಮಾಡಲು, ಫೋಟೋಗಳು, ವೀಡಿಯೊಗಳು ಮತ್ತು ಲಿಂಕ್‌ಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ಇದು ಇತ್ತೀಚೆಗೆ ಡಿಸೆಂಬರ್ 2020 ರಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಆಯ್ಕೆಯನ್ನು ಪರಿಚಯಿಸಿದೆ. ಸಿಗ್ನಲ್‌ನಲ್ಲಿ ಗುಂಪುಗಳನ್ನು ಸಹ ರಚಿಸಬಹುದು. ಒಂದು ಗುಂಪು 150 ಸದಸ್ಯರಿಗೆ ಸೀಮಿತವಾಗಿದೆ.

ಇದನ್ನೂ ಓದಿ:  ವಾಟ್ಸ್‌ಆ್ಯಪ್ ವಿಡಿಯೋ ಕರೆಯಲ್ಲಿ ಅಸಯ್ಯವಾಗಿ ವರ್ತಿಸಿ ಚಲನಚಿತ್ರ ನಟಿಗೆ ಲೈಂಗಿಕ ಕಿರುಕುಳ..!

ನಿಮಗೆಲ್ಲಾ ತಿಳಿದ ಹಾಗೆ ವಾಟ್ಸಾಪ್‌ನಲ್ಲಿ ಗುಂಪು ರಚಿಸಿದರೆ ನಿಮ್ಮ ಕಾಂಟಾಕ್ಟ್ ಲಿಸ್ಟ್‌ನಲ್ಲಿರುವ ಯಾರನ್ನು ಬೇಕಾದರೂ ಸೇರಿಸಬಹುದು (ಕೆಲವರು ಹೀಗೆ ಸೇರಿಸದಂತೆ ಸೆಟ್ಟಿಂಗ್ ಬದಲಿಸಿರುತ್ತಾರೆ). ಆದರೆ ಸಿಗ್ನಲ್‌ ನಲ್ಲಿ ಹೀಗೆ ಮಾಡಲು ಸಾಧ್ಯವಿಲ್ಲ. ಮೊದಲು ಗ್ರೂಪ್‌ಗೆ ನಿಮ್ಮನ್ನು ಸೇರಿಸಲಾಗುತ್ತದೆ ಎಂದು ಇನ್ವೈಟ್ ಕಳಿಸಲಾಗುತ್ತದೆ. ಅದನ್ನು ಸ್ವೀಕರಿಸಿದರೆ ಮಾತ್ರ ಗ್ರೂಪ್‌ಗೆ ಸೇರಿಸಲಾಗುತ್ತದೆ.

Looking for Secure Messaging Apps? Signal Might Finally Answer Your Prayers

ಸಂದೇಶಗಳಿಗೆ ಪ್ರತ್ಯೇಕವಾಗಿ ಪ್ರತ್ಯುತ್ತರಿಸಲು, ನಿರ್ದಿಷ್ಟ ಸಂದೇಶಕ್ಕೆ ಎಮೋಜಿ ಆಧಾರಿತ ಪ್ರತಿಕ್ರಿಯೆಗಳನ್ನು ಕಳುಹಿಸಲು ಮತ್ತು ‘ಎಲ್ಲರಿಗೂ ಅಳಿಸು’ ಆಯ್ಕೆಯನ್ನು ಆರಿಸುವ ಮೂಲಕ ಚಾಟ್‌ನಿಂದ ನಿರ್ದಿಷ್ಟ ಸಂದೇಶವನ್ನು ಅಳಿಸಲು ಸಿಗ್ನಲ್ ನಿಮಗೆ ಅನುಮತಿಸುತ್ತದೆ. ವಾಟ್ಸಾಪ್ ಸೇರಿದಂತೆ ಇತರ ಮೆಸೇಂಜಿಗ್ ಅಪ್ಲಿಕೇಶನ್‌ಗಳಲ್ಲಿ ನಾವು ನೋಡಿದ ಎಲ್ಲಾ ವೈಶಿಷ್ಟ್ಯಗಳು ಇಲ್ಲಿವೆ.

ಆದರೆ ಸಿಗ್ನಲ್‌ನ ಗಮನವು ಸಂಪೂರ್ಣವಾಗಿ ಗೌಪ್ಯತೆಯ ಮೇಲಿದೆ. ಎಂಡ್‌ ಟು ಎಂಡ್‌ ಎನ್‌ಕ್ರಿಪ್ಡೆಡ್ ಮಾತ್ರವಲ್ಲದೆ ಡೇಟಾ ಸಂಗ್ರಹಣೆಯ ಮೇಲೂ ಇದು ವಿಶೇಷ ಕಾಳಜಿ ವಹಿಸಿದೆ.

ಲ್ಯಾಪ್‌ಟಾಪ್ ಅಥವಾ ಐಪ್ಯಾಡ್‌ನಲ್ಲಿ ನೀವು ಸಿಗ್ನಲ್ ಅನ್ನು ಬಳಸಬಹುದೇ?

ಹೌದು, ನಿಮ್ಮ ಐಪ್ಯಾಡ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ನೀವು ಸಿಗ್ನಲ್ ಅನ್ನು ಬಳಸಬಹುದು, ಮತ್ತು ನಿಮ್ಮ ಫೋನ್‌ನಲ್ಲಿರುವ ಖಾತೆಯನ್ನು ಲಿಂಕ್ ಮಾಡಬಹುದು. ಆದರೆ ಇಲ್ಲಿ ಒಮ್ಮೆ ಲಿಂಕ್ ಮಾಡಿದರೆ ನಿಮ್ಮ ಹಿಂದಿನ ಚಾಟ್ ಹಿಸ್ಟರಿ ಲ್ಯಾಪ್‌ಟಾಪ್‌ ನಲ್ಲಿ ಗೋಚರಿಸುವುದಿಲ್ಲ. ಅಲ್ಲಿಂದ ಮುಂದಕ್ಕೆ ನಡೆಸುವ ಸಂಭಾಷಣೆಗಳು ಮಾತ್ರ ಗೋಚರಿಸುತ್ತವೆ. ಏಕೆಂದರೆ ಎಲ್ಲಾ ಹಿಸ್ಟರಿ ಆಯಾ ಪ್ರತ್ಯೇಕ ಸಾಧನಗಳಲ್ಲಿ ಸೇವ್ ಆಗುತ್ತದೆ.

ಸಿಗ್ನಲ್‌ನಲ್ಲಿ ನನ್ನ ಚಾಟ್‌ಗಳನ್ನು Google  ಡ್ರೈವ್ ಅಥವಾ ಐಕ್ಲೌಡ್‌ಗೆ ಬ್ಯಾಕಪ್ ಮಾಡಬಹುದೇ?

ಇಲ್ಲ, ವಾಟ್ಸಾಪ್‌ ನಂತೆ ಇದು ಸಾಧ್ಯವಿಲ್ಲ.

ಸಿಗ್ನಲ್‌ನಲ್ಲಿನ ಗೌಪ್ಯತೆ ವೈಶಿಷ್ಟ್ಯಗಳು ಯಾವುವು?

ಸಿಗ್ನಲ್ ಸಾಕಷ್ಟು ಗೌಪ್ಯತೆ-ಕೇಂದ್ರಿತ ವೈಶಿಷ್ಟ್ಯಗಳನ್ನು ಹೊಂದಿದೆ. ನಿಮ್ಮ ಐಪಿ ವಿಳಾಸವನ್ನು ಬಹಿರಂಗಪಡಿಸದೆ ನೀವು ಕರೆಗಳನ್ನು ಮಾಡಬಹುದು. ಆದರೆ ಕರೆ ಗುಣಮಟ್ಟ ಕಡಿಮೆಯಾಗುತ್ತದೆ.

ಇನ್ನು ನೀವು ಸಂದೇಶ ಓದಿದ್ದೀರೋ, ಇಲ್ಲವೋ? ಯಾವಾಗ ಓದಿದ್ದೀರಿ? ಇತ್ಯಾದಿ ಅಂಶಗಳನ್ನು ಸಿಗ್ನಲ್‌ನಲ್ಲಿ ಮರೆಮಾಚಬಹುದಾಗಿದೆ. ಅಲ್ಲದೆ ನೀವು ಆನ್‌ಲೈನ್‌ ನಲ್ಲಿ ಇದ್ದೀರೋ, ಇಲ್ಲವೋ ಎಂಬುದನ್ನು ಸಹ ಮರೆ ಮಾಚಬಹುದು.

ಸಿಗ್ನಲ್ ಯಾವ ಡೇಟಾವನ್ನು ಸಂಗ್ರಹಿಸುತ್ತದೆ?

ಸಿಗ್ನಲ್ ಸಂಗ್ರಹಿಸುವ ಏಕೈಕ ಡೇಟಾವೆಂದರೆ ‘ಸಂಪರ್ಕ ಮಾಹಿತಿ’ ಅದು ಫೋನ್ ಸಂಖ್ಯೆ. ಸಿಗ್ನಲ್‌ನ ಗೌಪ್ಯತೆ ನೀತಿಯ ಪ್ರಕಾರ, “ಯಾವುದೇ ಸೂಕ್ಷ್ಮ ಮಾಹಿತಿಯನ್ನು ಎಂದಿಗೂ ಸಂಗ್ರಹಿಸಲು ಈ ಆಪ್ ವಿನ್ಯಾಸಗೊಳಿಸಲಾಗಿಲ್ಲ”. ಅಪ್ಲಿಕೇಶನ್‌ನಲ್ಲಿನ ಎಲ್ಲಾ ಸಂದೇಶಗಳು ಮತ್ತು ಕರೆಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಆಗಿವೆ. ಅಂದರೆ ಯಾವುದೇ ಮೂರನೇ ವ್ಯಕ್ತಿ ಮಾತ್ರವಲ್ಲ ಸ್ವತಃ ಸಿಗ್ನಲ್ ಸಹ ಅವುಗಳನ್ನು ನೋಡಲಾಗುವುದಿಲ್ಲ.

World's Most Secure Messaging App 'Signal' Prepares To Rival WhatsApp

ಸಿಗ್ನಲ್‌ನ ಗೌಪ್ಯತೆ ನೀತಿಯ ಪ್ರಕಾರ, ಸಿಗ್ನಲ್ ಖಾತೆಯನ್ನು ರಚಿಸಲು ಬಳಸುವ ಫೋನ್ ಸಂಖ್ಯೆ ಮಾತ್ರ ತಿಳಿದಿರುತ್ತದೆ. ಪ್ರೊಫೈಲ್ ಹೆಸರು ಮತ್ತು ಚಿತ್ರದಂತಹ ಖಾತೆಗೆ ಸೇರಿಸಲಾದ ಇತರ ಮಾಹಿತಿಯು ಸಹ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ ಆಗಿದೆ ಎಂದು ಸಿಗ್ನಲ್ ಹೇಳುತ್ತದೆ.

ಇದನ್ನೂ ಓದಿ: ಆರೋಗ್ಯ ಸೇತು ಆ್ಯಪ್ ಸೃಷ್ಠಿಸಿದವರೇ ಗೊತ್ತಿಲ್ಲ ಎಂದ ಕೇಂದ್ರ ಸರ್ಕಾರ: ಮೋದಿ ಸರ್ಕಾರಕ್ಕೆ ನೋಟಿಸ್‌

ಸಿಗ್ನಲ್ ನಿಮ್ಮ ಸಂದೇಶಗಳನ್ನು ಅಥವಾ ನಿಮ್ಮ ಕರೆಗಳ ಬಗ್ಗೆ ಯಾವುದೇ ಮಾಹಿತಿಯನ್ನು ಅದರ ಸರ್ವರ್‌ಗಳಲ್ಲಿ ಸಂಗ್ರಹಿಸುವುದಿಲ್ಲ. ಆದರೆ ಇದು “ತಾತ್ಕಾಲಿಕವಾಗಿ ಆಫ್‌ಲೈನ್‌ನಲ್ಲಿರುವ ಸಾಧನಗಳಿಗೆ ತಲುಪಿಸಲು ಅದರ ಸರ್ವರ್‌ಗಳಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶಗಳನ್ನು ಮಾತ್ರ ಇಟ್ಟಿರುತ್ತದೆ.” ಉದಾಹರಣೆ ಎಂದರೆ ಫೋನ್‌ನ ಬ್ಯಾಟರಿ ಖಾಲಿಯಾಗಿದ್ದರೆ ಅಥವಾ ಇಂಟರ್ನೆಟ್ ಸಂಪರ್ಕವನ್ನು ಕಳೆದುಕೊಂಡಿದ್ದರೆ ಬಳಕೆದಾರರ ಸಂದೇಶ ಇತಿಹಾಸವನ್ನು ಅವರ ಸ್ವಂತ ಸಾಧನದಲ್ಲಿ ಸಂಗ್ರಹಿಸಲಾಗಿದೆ ಎಂದು ಸಿಗ್ನಲ್ ಹೇಳುತ್ತದೆ.

ಕೆಲವು ಸೇವೆಗಳನ್ನು ಒದಗಿಸಲು ಮೂರನೇ ವ್ಯಕ್ತಿಗಳೊಂದಿಗೆ ಕೆಲವು ಮಾಹಿತಿಯನ್ನು ಹಂಚಿಕೊಳ್ಳಬಹುದು ಎಂದು ಸಿಗ್ನಲ್ ಹೇಳುತ್ತದೆ. ಉದಾಹರಣೆಗೆ, ಪರಿಶೀಲನಾ ಕೋಡ್ ಅನ್ನು ಒದಗಿಸುವ ಮೂರನೇ ವ್ಯಕ್ತಿಯ ಸೇವೆಗಳು.

ಈ ಅಪ್ಲಿಕೇಶನ್ “ನಿಮ್ಮ ವೈಯಕ್ತಿಕ ಡೇಟಾ ಅಥವಾ ವಿಷಯವನ್ನು ಯಾವುದೇ ರೀತಿಯಲ್ಲಿ ಮಾನಿಟರ್ ಮಾಡುವುದಿಲ್ಲ, ಮಾರಾಟ ಮಾಡುವುದಿಲ್ಲ, ಬಾಡಿಗೆಗೆ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸುತ್ತದೆ.

ಸಿಗ್ನಲ್‌ನಲ್ಲಿ ಬುಸಿನೆಸ್ ಖಾತೆ ರಚಿಸಬಹುದೇ?

ಸಿಗ್ನಲ್ ಜನರ ನಡುವಿನ ನೇರ ಸಂಭಾಷಣೆಗೆ ಮೀಸಲಾತಿ ಆಪ್. ಇದು ಸಣ್ಣ, ಮಧ್ಯಮ, ದೊಡ್ಡ ಉದ್ಯಮಗಳಿಗೆ ಸೂಕ್ತವಾದುದ್ದಲ್ಲ. ಆದರೂ ನೀವು ಬುಸಿನೆಸ್ ಖಾತೆ ರಚಿಸಬಹುದು. ಜೊತೆಗೆ ಅದನ್ನು ರದ್ದುಪಡಿಸುವ ಅವಕಾಶ ನಿಮಗೆ ಇದ್ದೇ ಇರುತ್ತದೆ.

ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್

ಕನ್ನಡಕ್ಕೆ: ಮುತ್ತರಾಜ್ 


ಇದನ್ನೂ ಓದಿ: ಪೇಟಿಎಂ ಆ್ಯಪ್ಅನ್ನು ‌ ಪ್ಲೇ ಸ್ಟೋರ್‌ನಿಂದ ತೆಗೆದ ಗೂಗಲ್‌; ನಿಯಮ ಉಲ್ಲಂಘನೆ ಆರೋಪ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights