ರೈತ ಹೋರಾಟಕ್ಕೆ ಆರು ತಿಂಗಳು; 340 ರೈತರ ಸಾವುಗಳಿಗೆ ಮೋದಿ ಸರ್ಕಾರವೇ ನೇರ ಹೊಣೆ: ಸಿದ್ದರಾಮಯ್ಯ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೂರು ಕೃಷಿ ಕಾಯ್ದೆಗಳ ವಿರುದ್ದ ರೈತರ ಹೋರಾಟ ಆರು ತಿಂಗಳನ್ನು ಪೂರೈಸಿದೆ. ಚಳಿ-ಮಳೆ-ಗಾಳಿ-ಬಿಸಿಲಿಗೆ ಅಂಜದೆ ರೈತರು ದೆಹಲಿ ಗಡಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಪ್ರತಿಭಟನಾ ನಿರತ ರೈತರಲ್ಲಿ ಇದೂವರೆಗೂ 340 ರೈತರು ಸಾವನ್ನಪ್ಪಿದ್ದಾರೆ. ಈ ಸಾವುಗಳಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ರಾಜ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ರೈತರ ಬೇಡಿಕೆಗಳನ್ನು ಪ್ರಜಾತಾಂತ್ರಿಕವಾಗಿ ಬಗೆಹರಿಸಿ, ಜನವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು. ದೇಶದ ಶೇ. 80 ರಷ್ಟು ಜನರು ರೈತಾಪಿ ಕುಟುಂಬಗಳೊಂದಿಗೆ ಪ್ರತ್ಯಕ್ಷ ಇಲ್ಲವೇ ಪರೋಕ್ಷ ಸಂಬಂಧವಿರುವವರು. ಇಷ್ಟು ಬೃಹತ್ ಜನ ಸಮುದಾಯದ ಹಕ್ಕೊತ್ತಾಯಗಳಿಗೆ ಸರ್ಕಾರ ಕುರುಡಾಗಿ, ಕಿವುಡಾಗಿ ನಡೆದುಕೊಳ್ಳುತ್ತಿರುವುದು ದುರಂತ ಎಂದು ಕಿಡಿಕಾರಿದ್ದಾರೆ.

ಪ್ರತಿಭಟನೆಯ ಸ್ಥಳದಲ್ಲಿ ಸುಮಾರು 340 ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಈ ಸಾವುಗಳಿಗೆ ಕೇಂದ್ರ ಸರ್ಕಾರವೇ ನೇರಹೊಣೆ. ಜಗತ್ತಿನ ಯಾವುದೇ ದೇಶದ ನಾಗರಿಕ ಸರ್ಕಾರವು ಜನರ ಬೃಹತ್ ಚಳುವಳಿಯನ್ನು ಈ ಮಟ್ಟದಲ್ಲಿ ನಿರ್ಲಕ್ಷಿಸಿದ ಇತಿಹಾಸವಿಲ್ಲ ಎಂದು ಹೇಳಿದ್ದಾರೆ.

ರೈತರಪ್ರತಿಭಟನೆಯ ಸಂದರ್ಭದಲ್ಲಿ ಮರಣ ಹೊಂದಿದ ಎಲ್ಲ ರೈತರನ್ನು ಹುತಾತ್ಮರೆಂದು ಘೋಷಿಸಿ ಅವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸುತ್ತೇನೆ ಎಂದಿದ್ದಾರೆ.

ದೇಶದ ಎಲ್ಲ ರಂಗಗಳು ವಿಫಲವಾಗಿದ್ದಾಗ ಕೃಷಿಯು ರಾಜ್ಯದಲ್ಲಿ ಶೇ 6.4 ರಷ್ಟು, ದೇಶದಲ್ಲಿ 3.5 ರಷ್ಟು ಪ್ರಗತಿಯಾಗಿದೆಯೆಂದು ಸರ್ಕಾರಗಳೇ ತಮ್ಮ ವರದಿಗಳಲ್ಲಿ ಹೇಳಿಕೊಂಡಿವೆ. ಹಾಗಿದ್ದರೂ ತೊಗರಿ, ಹೆಸರು, ಸೂರ್ಯಕಾಂತಿ, ಕಡಲೆ ಕಾಯಿ ಮುಂತಾದ ಬೆಳೆಗಳಿಗೆ ಒಳ್ಳೆ ಬೆಲೆ ಏಕೆ ಸಿಗಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಮಾರುಕಟ್ಟೆಯಲ್ಲಿ ಬೇಳೆ ಕಾಳುಗಳ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 75 ರಷ್ಟು ಹೆಚ್ಚಾಗಿದೆ. ಅಡುಗೆ ಎಣ್ಣೆಯ ಬೆಲೆ ಶೇ. 120 ಹೆಚ್ಚಾಗಿದೆ. ಇವುಗಳಿಗೆ ಸಂಬಂಧಿಸಿದಂತೆ ಹಣದುಬ್ಬರದ ಪ್ರಮಾಣ ಶೇ.16 ಹೆಚ್ಚಾಗಿದೆ. ಹಾಗಿದ್ದರೆ ರೈತರು ಬೆಳೆದದ್ದೆಲ್ಲ ಎಲ್ಲಿ ಹೋಯಿತು? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಹರಿಯಾಣ ಸಿಎಂ ಖಟ್ಟರ್‌ ವಿರುದ್ಧ ಪ್ರತಿಭಟನೆ: ರೈತರ ಮೇಲೆ ಲಾಠಿ ಚಾರ್ಜ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights