ಶಿರಾ ಮತ್ತು ಆರ್‌ಆರ್‍ ನಗರ ಉಪ ಚುನಾವಣೆಗೆ ಕಾಂಗ್ರೆಸ್ ಭರದ ಸಿದ್ಧತೆ : ಮಂಕಾದ ಬಿಜೆಪಿ!

ಮುಂದಿನ ತಿಂಗಳು ನಡೆಯಲಿರುವ ಶಿರಾ ಮತ್ತು ಆರ್‌ಆರ್‍ ನಗರ ಕ್ಷೇತ್ರಗಳಿಗೆ ಉಪ ಚುನಾವಣೆಯ ಸಿದ್ಧತೆ ವಿಚಾರದಲ್ಲಿ ಬಿಜೆಪಿಯು  ಪ್ರತಿಪಕ್ಷ ಕಾಂಗ್ರೆಸ್‌ಗಿಂತ ಹಿಂದುಳಿದಿದೆ. ಕಾಂಗ್ರೆಸ್ ಪಕ್ಷವೂ ಈಗಾಗಲೇ ತನ್ನ ಅಭ್ಯರ್ಥಿಗಳನ್ನು ಘೋಷಿಸಿ ಕ್ಷೇತ್ರ ಪ್ರಚಾರಕ್ಕೆ ಸಿದ್ಧತೆ ನಡೆಸಿದ್ದರೇ ಬಿಜೆಪಿ ಇನ್ನೂ ತನ್ನ ಹುರಿಯಾಳುಗಳನ್ನೇ ಅಂತಿಮಗೊಳಸಲಾಗದೇ ಒದ್ದಾಡುತ್ತಿದೆ.

ಉಪ ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ವಿಚಾರವಾಗಿ ಬಿಜೆಪಿ ಗೊಂದಲದ ಗೂಡಾಗಿದೆ ಎಂದು ಪಕ್ಷದ ಮುಖಂಡರೇ ಹೇಳಿದ್ದಾರೆ. ಶಿರಾದಲ್ಲಿ ರಾಜಕೀಯ ನೆಲೆ ಇಲ್ಲದಿದ್ದರೂ ಸ್ಪರ್ಧೆ ಮಾಡುತ್ತಿರುವ ಬಿಜೆಪಿಯು ಮಾಜಿ ಸಂಸದ ಮೂಡಲಗಿರಿಯಪ್ಪ ಅವರ ಪುತ್ರ ರಾಜೇಶ್ ಗೌಡರಿಗೆ ಮಣೆ ಹಾಕಲು ಚಿಂತಿಸಿದೆ. ಇದು ಸ್ಥಳೀಯ ಮುಖಂಡರನ್ನು ಕೆರಳಿಸಿದೆ.

ಇದೇ ರೀತ ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನಗೆ ಟಿಕೆಟ್ ನೀಡುವ ಮೂಲಕ ಋಣಸಂದಾಯ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ ಇಲ್ಲ ಸಹ ಸ್ಥಳೀಯರ ಒಲವೇ ಬೇರೆ ಇದೆ. ಎರಡೂ ಕ್ಷೇತ್ರಗಳಲ್ಲಿ ಸ್ಥಳೀಯ ಮುಖಂಡರ ಭಾವನೆಗಳ ಅಡ್ಡಕತ್ತರಿಗೆ ಸಿಲುಕಿರುವ ಬಿಜೆಪಿ ಚುನಾವಣಾ ಅಧಿಸೂಚನೆ ಪ್ರಕಟ ಸನಿಹವಾದರೂ ಇನ್ನೂ ಅಭ್ಯರ್ಥಿಗಳನ್ನು ಹೆಸರಿಸಲಾಗದೇ ಕೈಹಿಸುಕಿಕೊಳ್ಳುತ್ತಿದೆ ಎನ್ನಲಾಗಿದೆ.

ಮುನಿರತ್ನ ಅವರ ರಾಜೀನಾಮೆ ಹಾಗೂ ಶಾಸಕರಾಗಿದ್ದ ಸತ್ಯನಾರಾಯಣ ಅವರ ನಿಧನದಿಂದಾಗಿ ರಾಜರಾಜೇಶ್ವರಿ ನಗರ ಹಾಗೂ ಶಿರಾದಲ್ಲಿ ಉಪ ಚುನಾವಣೆ ಎದುರಾಗಿದೆ. ಎರಡೂ ಕ್ಷೇತ್ರಗಳಲ್ಲಿ ನವೆಂಬರ್‍ 3ಕ್ಕೆ ಚುನಾವಣೆ ನಡೆಯಲಿದ್ದು, ನವೆಂಬರ್‍ 10ರಂದು ಮತ ಎಣಿಕೆ ಕಾರ್‍ಯ ನಡೆಯಲಿದೆ.

ಈ ಹಿಂದೆ ಆರ್‌ಆರ್‍ ನಗರ ಕಾಂಗ್ರೆಸ್ ವಶದಲ್ಲಿದ್ದರೇ ಶಿರಾ ಕ್ಷೇತ್ರವು ಜೆಡಿಎಸ್ ಪಕ್ಷದ ಖಾತೆಗೆ ಸೇರಿತ್ತು. ಮಾಜಿ ಸಚಿವ ಜಯಚಂದ್ರ ಅವರನ್ನು ಶಿರಾಕ್ಕೆ ಹಾಗೂ ಮಾಜಿ ಐಎಎಸ್ ಅಧಿಕಾರಿ ರವಿ ಅವರ ಪತ್ನಿ ಕುಸುಮಾ ಅವರನ್ನು ಆರ್‌ಆರ್‍ ನಗರಕ್ಕೆ ಅಭ್ಯರ್ಥಿಗಳನ್ನಾಗಿ ಕಾಂಗ್ರೆಸ್ ಈಗಾಗಲೇ ಘೋಷಣೆ ಮಾಡಿದೆ.

ಇದೇ ವೇಳೆ ಶೀರಾದಲ್ಲಿ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರಿಗೆ ಟಿಕೆಟ್ ನೀಡುವುದಾಗಿ ಘೋಷಿಸಿರುವ ಜೆಡಿಎಸ್ ಆರ್‌ಆರ್‍ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆಯನ್ನು ಕಾದು ತನ್ನ ನಿರ್ಧಾರ ಕೈಗೊಳ್ಳಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights