ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ; ಪ್ರಾಂಶುಪಾಲೆ ಮತ್ತು ಶಿಕ್ಷಕನ ಬಂಧನ

ತಮಿಳುನಾಡಿನ ಕೊಯಮತ್ತೂರಿನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಇತ್ತಿಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ 17 ವರ್ಷದ ವಿದ್ಯಾರ್ಥಿನಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಭೌತಶಾಸ್ತ್ರ ಶಿಕ್ಷಕ ಮತ್ತು ಪ್ರಾಂಶುಪಾಲೆಯನ್ನು ಬಂಧಿಸಲಾಗಿದೆ.

ಇದೇ ಶಿಕ್ಷಕ ಇನ್ನೂ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನುವಂತಹ ವಾಟ್ಸಾಪ್ ಚಾಟ್ ಹಾಗೂ ಆಡಿಯೋ ಸಂಭಾಷಣೆ ಹರಿದಾಡುತ್ತಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಈ ಪುರಾವೆಗಳು ಅದೇ ಶಿಕ್ಷಕನಿಗೆ ಸಂಬಂಧಿಸಿದ್ದೇ ಎನ್ನುವುದು ಖಚಿತವಾಗಿಲ್ಲ. ಸಾರ್ವಜನಿಕ ಆಕ್ರೋಶ ಹೆಚ್ಚಾದ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ.

ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಭಾಗಿಯಾಗಿರುವ ಕುರಿತಾದ ಕೈಬರಹದ ಟಿಪ್ಪಣಿಯೊಂದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಲೈಂಗಿಕ ಕಿರುಕುಳವು ಈ ವರ್ಷದ ಮೊದಲರ್ಧದಲ್ಲಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಎನ್‌ಡಿಟಿವಿ ಉಲ್ಲೇಖಿಸಿದೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ; ಶಿಕ್ಷಕನ ಬಂಧನ;

ನವೆಂಬರ್ 11ರಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಲೈಂಗಿಕ ದೌರ್ಜನ್ಯದ ಬಗ್ಗೆ ವಿದ್ಯಾರ್ಥಿನಿಯ ದೂರಿನ ಮೇರೆಗೆ ಕ್ರಮಕೈಗೊಳ್ಳದ ಖಾಸಗಿ ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನೂ ಪೊಲೀಸರು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾನೂನಿನಡಿ ಬಂಧಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, “ಕೆಲವರ ವಿಕೃತಿಯು ವಿದ್ಯಾರ್ಥಿಯ ಜೀವನವನ್ನು ಕಸಿದುಕೊಂಡಿದೆ. ಶಾಲೆಗಳು ಲೈಂಗಿಕ ಕಿರುಕುಳವಾಗದಂತೆ ನೋಡಿಕೊಳ್ಳಬೇಕು. ನಾವು ಆರೋಪಿಗಳನ್ನು ಕಾನೂನಿನ ಮುಂದೆ ನಿಲ್ಲುಸುತ್ತೇವೆ” ಎಂದು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ, ಹಾಲಿ ಮತ್ತು ಹಳೆಯ ವಿದ್ಯಾರ್ಥಿಗಳು ಲೈಂಗಿಕ ಕಿರುಕುಳ ಆರೋಪದ ಮಾಡಿದ್ದ ನಂತರ ಚೆನ್ನೈನ ಪ್ರಮುಖ ಶಾಲೆಗಳ ಕೆಲವು ಶಿಕ್ಷಕರನ್ನು ಬಂಧಿಸಲಾಗಿತ್ತು. ಆ ಕೆಲವು ಪ್ರಕರಣಗಳಲ್ಲಿಯೂ ಸಹ, ಶಾಲಾ ಆಡಳಿತ ಮಂಡಳಿಯು ಲೈಂಗಿಕ ಕಿರುಕುಳದ ವರದಿಗಳು ತಮ್ಮ ಗಮನಕ್ಕೆ ಬಂದರೂ ಮುಚ್ಚಿಡಲು ಪ್ರಯತ್ನಿಸಿವೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ದೇವಸ್ಥಾನಕ್ಕೆ ಭೂಮಿ ಕೊಡಲು ನಿರಾಕರಿಸಿದ ಕುಟುಂಬ; ಗೋಮೂತ್ರ ಕುಡಿದು, ಶೂ ಹೊತ್ತುಕೊಳ್ಳುವಂತೆ ಒತ್ತಾಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights