SC/ST ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ಸ್ಕಾಲರ್‌ಶಿಪ್ ರದ್ದಾಗುವ ಅಪಾಯ!

1944ರಿಂದ ಪ.ಜಾತಿ/ಪ.ಪಂಗಡದ ವಿದ್ಯಾರ್ಥಿಗಳಿಗಾಗಿ ಜಾರಿಯಲ್ಲಿರುವ “ಮೆಟ್ರಿಕ್ ನಂತರದ ಸ್ಕಾಲರ್ಶಿಪ್” (ಪಿಎಂಎಸ್)” ಅಂಬೇಡ್ಕರ್ ಅವರ ಪ್ರಿಯವಾದ ಯೋಜನೆಯಾಗಿತ್ತು. ಈ ‘ಪಿಎಂಎಸ್’ ಅಡಿಯಲ್ಲಿ ವಾರ್ಶಿಕ ವರಮಾನ 2.5 ಲಕ್ಷಕ್ಕಿಂತ ಕಡಿಮೆ ಇರುವ ಪ.ಜಾತಿ/ಪ.ಪಂಗಡದ ಕುಟುಂಬದ ಮಕ್ಕಳಿಗೆ ಸ್ಕಾಲರ್ಶಿಪ್ ದೊರಕುತ್ತಿತ್ತು. (ಇಂದಿಗೂ ಆದಾಯದ ಮಿತಿಯನ್ನು ಹೆಚ್ಚಿಸಿಲ್ಲ ಮತ್ತು 2013 ರಿಂದ ಸ್ಕಾಲರ್ಶಿಪ್ ಮೊತ್ತವನ್ನು ಹೆಚ್ಚಿಸಿಲ್ಲ)

ಕೇಂದ್ರದಿಂದ ಶೇ. 100 ಪ್ರಮಾಣದಲ್ಲಿ ಆರ್ಥಿಕ ಅನುದಾನ ಬರುವ, ಶೋಷಿತ ಸಮುದಾಯಗಳಿಗೆ ಆರ್ಥಿಕ ನೆರವನ್ನು ಕೊಡುವ, ಶೈಕ್ಷಣಿಕ ನ್ಯಾಯ ಒದಗಿಸುವ ಈ ಸ್ಕಾಲರ್ಶಿಪನ್ನು ಮೋದಿ ಸರಕಾರ ನಿಲ್ಲಿಸುವ ಎಲ್ಲಾ ಸೂಚನೆಗಳಿವೆ.

ಎರಡನೇ ಬಾರಿ ಗೆದ್ದ ನಂತರ ಜುಲೈ 2019ರಲ್ಲಿ ಈ ‘ಪಿಎಂಎಸ್’ ಗೆ ತಿದ್ದುಪಡಿ ಮಾಡಿ ಸಂಪೂರ್ಣ ಕೇಂದ್ರದ ಯೋಜನೆಯಾಗಿದ್ದ (national scheme) ಇದರ ಸ್ವರೂಪವನ್ನು ಕೇಂದ್ರ-ರಾಜ್ಯಗಳ 60:40 ಅನುಪಾತಕ್ಕೆ ಬದಲಿಸಿದೆ. ಅಂದರೆ ಶೇ. 60 ರಶ್ಟು ಕೇಂದ್ರ, ಶೇ. 40 ರಶ್ಟು ರಾಜ್ಯಗಳು ಆರ್ಥಿಕ ಅನುದಾನವನ್ನು ಹಂಚಿಕೊಳ್ಳಬೇಕು.

ದಿಢೀರನೆ ಮೇಲೆರಗಿದ ಈ ಜವಬ್ದಾರಿಯನ್ನು ಹೊರಲು ರಾಜ್ಯ ಸರಕಾರಗಳು ತಯಾರಿಲ್ಲ. ಅಲ್ಲದೆ ಕಳೆದ ಎರಡು ವರ್ಶಗಳಿಂದ ಕೇಂದ್ರ ಸರಕಾರವು ಈ ‘ಪಿಎಂಎಸ್’ ಸ್ಕಾಲರ್ಶಿಪ್ ಗೆ ಆರ್ಥಿಕ ಅನುದಾನವನ್ನೂ ಕೊಡುತ್ತಿಲ್ಲ.

2019-20 ರಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು 7,150 ಕೋಟಿ ಕೇಳಿದ್ದಕ್ಕೆ ಕೇಂದ್ರ ಹಣಕಾಸು ಇಲಾಖೆಯು ಕೇವಲ 2,927 ಕೋಟಿ ನೀಡಿದೆ. 4,198 ಕೋಟಿ ಮೊತ್ತದ ಕೊರತೆಯ ದುಶ್ಪರಿಣಾಮ ದಲಿತ ಮಕ್ಕಳ ಮೇಲಾಗಿದೆ. ಈ ಹಿಂದೆ 5.8 ಮಿಲಿಯನ್ ಮಕ್ಕಳು ಇದರ ಅನುಕೂಲ ಪಡೆದುಕೊಂಡಿದ್ದರೆ, 2019 ರಲ್ಲಿ ಆ ಸಂಖ್ಯೆ 3 ಮಿಲಿಯನ್ ಗೆ ಕುಸಿದಿದೆ. ಇನ್ನು ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರ ಹಣವನ್ನು ಕೊಡದೇ ಇರುವುದರಿಂದ ದಲಿತ ಮಕ್ಕಳಿಗೆ ಸ್ಕಾಲರ್ಶಿಪ್ ಸಿಗುವ ಸಾಧ್ಯತೆಗಳಿಲ್ಲ.

ಇದೆಲ್ಲದರ ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ ಮಾರ್ಚ್ 2020ರಲ್ಲಿ ಈಗಿರುವ ಎಲ್ಲಾ ಬಗೆಯ ಸ್ಕಾಲರ್ಶಿಪ್ ಯೋಜನೆಗಳನ್ನು ರದ್ದುಗೊಳಿಸಿ, ಎಲ್ಲಾ ಜಾತಿ ಸಮುದಾಯಗಳನ್ನು ‘Pradhan Mantri Young Achievers Scholarship Award Scheme for Vibrant India (PM-YASASVI)’ ಅಡಿಯಲ್ಲಿ ತರಲು ನಿರ್ದರಿಸಲಾಗಿದೆ.

ಈ ಯೋಜನೆಯ ಅನುಕೂಲ ಪಡೆದುಕೊಳ್ಳಲು ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಅಂದರೆ ಸಾಮಾಜಿಕ-ಆರ್ಥಿಕ -ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸದೆ ಕೇವಲ ಮೆರಿಟ್ ಆದಾರದಲ್ಲಿ ಸ್ಕಾಲರ್ಶಿಪ್ ಕೊಡಲು ಮೋದಿ ಸರಕಾರ ನಿರ್ದರಿಸಿದೆ.

ಆದರೆ ಭಾರತದಂತಹ ಜಾತಿ ಅಸಮಾನತೆ ದೇಶದಲ್ಲಿ ಮೆರಿಟ್ ಎನ್ನುವ ಪರಿಕಲ್ಪನೆಯು ‘leagalises the exclusion’ ಉಳ್ಳವರು ಮಾತ್ರ ಮುಂದುವರೆಯುತ್ತಾರೆ. ಮೋದಿ ಸರಕಾರದ ಈ ನಿರ್ದಾರದಿಂದ ಶೋಷಿತ ಸಮುದಾಯಗಳು ಶಿಕ್ಷಣದಿಂದ ವಂಚಿತಗೊಳ್ಳಲಿವೆ. ಜಾತಿ ತಾರತಮ್ಯದ ಈ ದೇಶದಲ್ಲಿ ಓಬಿಸಿ, ಪ. ಜಾತಿ, ಪ. ಪಂಗಡಗಳನ್ನು ಒಂದೇ ತಕ್ಕಡಿಯಲ್ಲಿಡುವುದು ದಲಿತ ಮಕ್ಕಳ ಶಿಕ್ಷಣಕ್ಕೆ ಮಾರಕವಾಗಲಿದೆ.

ಆದರೆ ಈ ಕುರಿತು ಯಾರೂ ತಲೆಕೆಡಿಸಿಕೊಂಡಂತಿಲ್ಲ. ಸಾಮಾಜಿಕ ನ್ಯಾಯದ ಆರಂಬಿಕ ಮೆಟ್ಟಿಲಾದ ಸ್ಕಾಲರ್ಶಿಪ್, ಹಾಸ್ಟೆಲ್ ವ್ಯವಸ್ಥೆಯನ್ನು ಕಳೆದುಕೊಳ್ಳಬಾರದು. ಸಾಮಾಜಿಕ ಸಂಘಟನೆಗಳು ಈ ಕುರಿತು ಗಂಬೀರವಾಗಿ ಆಲೋಚಿಸಬೇಕು.

(ಈ ಬರಹದಲ್ಲಿ ಕನ್ನಡ ನುಡಿಗೆ ಹೊಂದದ ಮಹಾಪ್ರಾಣಗಳನ್ನು ಕೈಬಿಡಲಾಗಿದೆ ಅಥವಾ ಮಿತವಾಗಿ ಬಳಸಲಾಗಿದೆ)

– ಶ್ರೀಪಾದ್‌ ಭಟ್


ಇದನ್ನೂ ಓದಿ: ‌ಕೊರೆವ ಚಳಿಯಲಿ ರೈತರು; ದೇವ್ ದೀಪಾವಳಿಯಲ್ಲಿ ಮೋದಿ; ನಮೋ-ನಮೋ ಎನ್ನುತ್ತಿವೆ ಮಾಧ್ಯಮಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights